ಹೆಬ್ರಿ: ಹೆಬ್ರಿ ತಾಲೂಕಿನಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ನೂತನ ಘಟಕವನ್ನು ಸ್ಥಾಪಿಸುವ ಉದ್ದೇಶದಿಂದ ಶನಿವಾರ ಹೆಬ್ರಿಯ ಶ್ರೀ ಅನಂತ ಪದ್ಮನಾಭ ಸನ್ನಿಧಿ ಸಭಾಭವನದಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆ ನಡೆಯಿತು.

ಉಡುಪಿ ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷ ಡಾ. ಅಶೋಕ್ ಕುಮಾರ್ ವೈ.ಜಿ., ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರ್ ಅವರು ರೆಡ್ ಕ್ರಾಸ್ ಸೊಸೈಟಿಯ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಭಾರತೀಯ ರೆಡ್ ಕ್ರಾಸ್ ಸೊಸೈಟಿ ದೇಶದ ಪ್ರಮುಖ ಮಾನವೀಯ ಸೇವಾ ಸಂಸ್ಥೆಯಾಗಿದ್ದು, ಸಮಾಜ ಕಲ್ಯಾಣವೇ ಇದರ ಮುಖ್ಯ ಉದ್ದೇಶವಾಗಿದೆ. ಹೆಬ್ರಿ ತಾಲೂಕಿನಲ್ಲಿ ಕನಿಷ್ಠ 50 ಸದಸ್ಯರನ್ನು ನೋಂದಾಯಿಸಿ, ಸಾರ್ವಜನಿಕರ ಸಹಕಾರದೊಂದಿಗೆ ಶೀಘ್ರದಲ್ಲೇ ತಾಲೂಕು ಘಟಕವನ್ನು ಸ್ಥಾಪಿಸುವಂತೆ ಅವರು ಕರೆ ನೀಡಿದರು.

ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ ಮಾರ್ಗದರ್ಶನದಲ್ಲಿ ವೀಣಾ ಆರ್. ಭಟ್ ವರಂಗ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀಣಾ ಆರ್. ಭಟ್ ಅವರನ್ನು ಮೂರು ವರ್ಷದ ಅವಧಿಗೆ ಹೆಬ್ರಿ ತಾಲೂಕು ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಇದೇ ವೇಳೆ ಉಪಾಧ್ಯಕ್ಷರಾಗಿ ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ. ವಿದ್ಯಾಧರ ಹೆಗ್ಡೆ, ಕಾರ್ಯದರ್ಶಿಯಾಗಿ ಪ್ರಶಾಂತ್ ಪೈ ಮುದ್ರಾಡಿ ಹಾಗೂ ಖಜಾಂಚಿಯಾಗಿ ಪ್ರಕಾಶ ಶೆಟ್ಟಿ ಕಲ್ಲಿಲು ಅವರನ್ನು ಆಯ್ಕೆ ಮಾಡಲಾಯಿತು.ಸಭೆಯಲ್ಲಿ ಹೆಬ್ರಿ ತಾಲೂಕಿನ ವಿವಿಧ ಗ್ರಾಮಗಳ ಗಣ್ಯರು ಭಾಗವಹಿಸಿದ್ದರು. ಬಾಲಚಂದ್ರ ಮುದ್ರಾಡಿ, ಇಂದಿರಾ ಬಾಯರಿ ಮುದ್ರಾಡಿ, ಪ್ರಸಾದ್ ಶೆಟ್ಟಿ, ಪ್ರದೀಪ್ ಭಟ್, ಪ್ರವೀಣ್ ಶೆಟ್ಟಿ, ಪಿ.ವಿ. ಆನಂದ ಸಾಲಿಗ್ರಾಮ, ಸುನೀತಾ ಅರುಣ್ ಹೆಗ್ಡೆ, ಸುರೇಶ್ ಪೂಜಾರಿ ವರಂಗ, ರಕ್ಷಿತಾ ಪಿ. ಭಟ್, ಉದಯ ಸೇರಿಗಾರ್, ರಾಧಾಕೃಷ್ಣ ಕ್ರಮಧಾರಿ, ಸಂತೋಷ ಕುಮಾರ್ ಶೆಟ್ಟಿ ಮುದ್ರಾಡಿ, ಸುಕುಮಾರ್ ಮುನಿಯಾಲ್, ಹೆಬ್ರಿ ಜನಾರ್ದನ್, ಮಂಜುನಾಥ ಕೆ. ಶಿವಪುರ, ಸೋನಿ ಪಿ. ಶೆಟ್ಟಿ, ಡಾ. ಸುಷ್ಮಾ ಆರ್. ಹೆಗ್ಡೆ, ಡಾ. ಭಾರ್ಗವಿ ಆರ್. ಐತಾಳ್, ಕೆ. ಬಾಲಚಂದ್ರ ಹೆಬ್ಬಾರ್‌ ಉಪಸ್ಥಿತರಿದ್ದರು.ನೂತನ ಅಧ್ಯಕ್ಷೆ ವೀಣಾ ಆರ್. ಭಟ್ ಸ್ವಾಗತಿಸಿ, ಕಾರ್ಯದರ್ಶಿ ಪ್ರಶಾಂತ್ ಪೈ ವಂದಿಸಿದರು. ಕಬ್ಬಿನಾಲೆ ರಾಮಚಂದ್ರ ಭಟ್ ಕಾರ್ಯಕ್ರಮ ನಿರ್ವಹಿಸಿದರು.