ತೊಗರಿ ತಳಿ ಬಿ.ಆರ್.ಜಿ-4 ಬೀಜೋತ್ಪಾದನೆ ಮುಂಚೂಣಿ ಪ್ರಾತ್ಯಕ್ಷಿಕೆ

| Published : Jul 31 2025, 12:45 AM IST

ತೊಗರಿ ತಳಿ ಬಿ.ಆರ್.ಜಿ-4 ಬೀಜೋತ್ಪಾದನೆ ಮುಂಚೂಣಿ ಪ್ರಾತ್ಯಕ್ಷಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಬೀಜೋತ್ಪಾದನೆಯಿಂದ ರೈತರಿಗೆ ಅಧಿಕ ಆದಾಯ ಹಾಗೂ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ದೊರೆಯಲಿದೆ ಎಂದು ಕೃಷಿ ವಿಶ್ವವಿದ್ಯಾನಿಲಯದ ಬೇಸಾಯ ತಜ್ಞ ಡಾ. ಎಚ್.ಎಂ. ಅತೀಕ್ ಉರ್ ರೆಹಮಾನ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಬೀಜೋತ್ಪಾದನೆಯಿಂದ ರೈತರಿಗೆ ಅಧಿಕ ಆದಾಯ ಹಾಗೂ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ದೊರೆಯಲಿದೆ ಎಂದು ಕೃಷಿ ವಿಶ್ವವಿದ್ಯಾನಿಲಯದ ಬೇಸಾಯ ತಜ್ಞ ಡಾ. ಎಚ್.ಎಂ. ಅತೀಕ್ ಉರ್ ರೆಹಮಾನ್ ತಿಳಿಸಿದರು. ತಾಲೂಕಿನ ತಿಮ್ಮಲಾಪುರ ಗ್ರಾಮದಲ್ಲಿ ತಾಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಾಯೋಜನೆ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ವತಿಯಿಂದ ತೊಗರಿ ಬೆಳೆಯ ಬೇಸಾಯ ತಾಂತ್ರಿಕತೆಗಳು ಮುಂಚೂಣಿ ಪ್ರಾತ್ಯಕ್ಷಿಕೆ ಅಡಿಯಲ್ಲಿ ತೊಗರಿಯ ಬೀಜೋತ್ಪಾದನಾ ತಾಂತ್ರಿಕತೆ (ತಳಿ ಬಿ.ಆರ್.ಜಿ-4) ಬಗ್ಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಅವರು, ತೊಗರಿ ಬೆಳೆಯ ತಳಿಗಳು ಹಾಗೂ ಬೀಜೋತ್ಪಾದನಾ ತಾಂತ್ರಿಕತೆಗಳ ಬಗ್ಗೆ ಮಾಹಿತಿ ನೀಡುತ್ತಾ ಬೇರು ಗಂಟುಗಳಲ್ಲಿ ಸೂಕ್ಷ್ಮಜೀವಿ ರೈಝೋಬಿಯಂ ಸಹಯೋಗದಿಂದ ಸಾರಜನಕ ಸ್ಥಿರೀಕರಿಸಿ ಬಳಸುವ ತೊಗರಿಯನ್ನೊಳಗೊಂಡಂತೆ ಎಲ್ಲಾ ದ್ವಿದಳಧಾನ್ಯಗಳಿಗೆ ರೈಝೋಬಿಯಂನಿಂದ ಬೀಜೋಪಚಾರ ಅತಿ ಅವಶ್ಯಕ. ಆದ್ದರಿಂದ ಕೃಷಿ ವಿಶ್ವ ವಿದ್ಯಾನಿಲಯದ ರೈಝೋಬಿಯಂ ಮೂಲದ ಸಮ್ಮಿಶ್ರ ಸೂಕ್ಷ್ಮಜೀವಿ ಜೈವಿಕ ಗೊಬ್ಬರದ ಮಹತ್ವ ತಿಳಿಸಿ ಬೀಜೋಪಚಾರ ವಿಧಾನದ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ವಿಜ್ಞಾನಿಗಳಾದ ಡಾ.ಕೇಶವರೆಡ್ಡಿ ಹಾಗೂ ಡಾ.ಮಂಜುನಾಥ್ ತೊಗರಿ ಬೆಳೆಯಲ್ಲಿ ಸಮಗ್ರ ಕೀಟ ಹಾಗೂ ರೋಗ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಡಾ. ತಸ್ಮಿಯಾ ಕೌಸರ್ ಇತರರಿದ್ದರು.