ಸಾರಾಂಶ
ದೇವರ ದಾಸಿಮಯ್ಯನವರ ವಚನಗಳನ್ನು ಓದುವುದರ ಜತೆಗೆ ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾದಾಗ ಮಾತ್ರ ಜಯಂತಿಗಳ ಆಚರಣೆಗೆ ನಿಜಾರ್ಥ ಬರಲಿದೆ
ಗಜೇಂದ್ರಗಡ: ಮಾನವೀಯ ಮೌಲ್ಯಗಳ ರತ್ನದಂತಿರುವ ದೇವರ ದಾಸಿಮಯ್ಯನವರ ವಚನಗಳು ವೈಚಾರಿಕ ಕ್ರಾಂತಿಗೆ ಮುನ್ನುಡಿ ಬರೆದಿದ್ದು, ಯುವ ಜನಾಂಗಕ್ಕೆ ದಾರಿ ದೀಪವಾಗಿವೆ ಎಂದು ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಹೇಳಿದರು.
ಸ್ಥಳೀಯ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ನಡೆದ ದೇವರ ದಾಸಿಮಯ್ಯ ಜಯಂತಿ ನಿಮಿತ್ತ ನಡೆದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದರು.ದೇವರ ದಾಸಿಮಯ್ಯ ತಮ್ಮ ನೇಕಾರಿಕೆ ವೃತ್ತಿ ಬದುಕಿನ ಜತೆಗೆ ಸಾಮಾಜಿಕ ಕಳಕಳಿ ಹೊಂದಿ ವಚನ ಸಾಹಿತ್ಯ ರಚಿಸುವ ಮುಖಾಂತರ ಸಮಾಜದಲ್ಲಿ ಸೌಹಾರ್ಧತೆ ಮೂಡಿಸಲು ಶ್ರಮಿಸಿದ ಅಗ್ರಗಣ್ಯರು. ಯುವ ಸಮೂಹ ಹಾಗೂ ನಾವೆಲ್ಲರೂ ಸಹ ದೇವರ ದಾಸಿಮಯ್ಯನವರ ವಚನಗಳನ್ನು ಓದುವುದರ ಜತೆಗೆ ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾದಾಗ ಮಾತ್ರ ಜಯಂತಿಗಳ ಆಚರಣೆಗೆ ನಿಜಾರ್ಥ ಬರಲಿದೆ ಎಂದರು.
ಪ್ರಭು ಶೆಲ್ಲೆದ ಮಾತನಾಡಿ, ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಿ ಎಲ್ಲರೂ ಸಮಾನರೆಂಬ ಸಂದೇಶ ಸಾರಿದ ವಿಶ್ವಮಾನ್ಯ ವಚನಕಾರ ದೇವರ ದಾಸಿಮಯ್ಯನವರಂತಹ ಚೇತನರ ಆದರ್ಶ ಜೀವನದಲ್ಲಿ ಅಳವಡಿಸಿಕೊಂಡು ಬದುಕು ಸಾಗಿಸಿದಾಗ ಮಾತ್ರ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯ ಎಂದರು.ದೇವಾಂಗ ಸಮಾಜದ ಅಧ್ಯಕ್ಷ ವೀರನಗೌಡ ಗಂಜಿ, ಪರಣ್ಣ ಕಡ್ಡಿ, ಶ್ರೀಧರ ಗಂಜಿಗೌಡರ, ಶ್ರೀಧರ ಬಿದರಳ್ಳಿ, ಲಕ್ಷ್ಮಣ ಜುಂಚಾ, ಪುಂಡಲಿಕ ಕಡ್ಡಿ, ಪ್ರಸಾದ ಶಿನ್ನೂರ, ಆನಂದ ಸಿಂಹಾಸನದ, ಮಹಾಬಳೇಶ ಹವಳದ, ಅಶೋಕ ಕುದರಿಮೋತಿ, ಶಂಕರ ಇಂಜನಿ, ವಿನಾಯಕ ಮಸೂದಿ ಸೇರಿ ಇತರರು ತಹಸೀಲ್ದಾರ್ ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.