ಪಾಲಿಕೆ ಆದಾಯ ವೃದ್ಧಿಗೆ ಶೀಘ್ರವೇ ಪ್ರೀಮಿಯಂ ಎಫ್‌ಎಆರ್‌ ವ್ಯವಸ್ಥೆ ಶುರು!

| Published : Feb 20 2024, 01:45 AM IST / Updated: Feb 20 2024, 12:46 PM IST

BBMP
ಪಾಲಿಕೆ ಆದಾಯ ವೃದ್ಧಿಗೆ ಶೀಘ್ರವೇ ಪ್ರೀಮಿಯಂ ಎಫ್‌ಎಆರ್‌ ವ್ಯವಸ್ಥೆ ಶುರು!
Share this Article
  • FB
  • TW
  • Linkdin
  • Email

ಸಾರಾಂಶ

ಬಿಬಿಎಂಪಿ ಆದಾಯ ವೃದ್ಧಿಗೆ ಹೊಸ ಉಪಾಯ ಕಂಡುಕೊಳ್ಳಲಾಗಿದ್ದು, ಅದಕ್ಕಾಗಿ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್‌) ನಿಯಮದಲ್ಲಿ ಬದಲಾವಣೆ ತರಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿ ಆದಾಯ ವೃದ್ಧಿಗೆ ಹೊಸ ಉಪಾಯ ಕಂಡುಕೊಳ್ಳಲಾಗಿದ್ದು, ಅದಕ್ಕಾಗಿ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್‌) ನಿಯಮದಲ್ಲಿ ಬದಲಾವಣೆ ತರಲಾಗುತ್ತಿದೆ. 

ಶೀಘ್ರದಲ್ಲಿ ಈ ಕುರಿತು ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು, 2024-25ನೇ ಸಾಲಿನಿಂದ ಜಾರಿಗೆ ಬರುವಂತೆ ಟಿಡಿಆರ್‌ ಬಳಕೆಯ ಹೊಸ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಬಿಬಿಎಂಪಿ ಆದಾಯ ವೃದ್ಧಿಗೆ ಹೊಸ ಜಾಹೀರಾತು ನೀತಿ ಹಾಗೂ ಟಿಡಿಆರ್‌ ನಿಯಮ ಬದಲಿಸಿ ಪ್ರಿಮಿಯಂ ಫ್ಲೋರ್‌ ಏರಿಯಾ ರೇಶ್ಯೂ (ಎಫ್‌ಎಆರ್‌) ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ. 

ಅದನ್ನು ಅನುಷ್ಠಾನಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಈಗಲೇ ಸಿದ್ಧತೆ ನಡೆಸಿದ್ದು, ಪ್ರಿಮಿಯಂ ಎಫ್‌ಎಆರ್‌ ಬಳಕೆ ಕುರಿತು ನಿಯಮ ರೂಪಿಸಲಾರಂಭಿಸಿದ್ದಾರೆ. 

ಅದರ ಜತೆಗೆ ನೂತನ ಜಾಹೀರಾತು ನೀತಿ ರೂಪಿಸುವತ್ತಲೂ ಗಮನಹರಿಸಿದ್ದಾರೆ. ಈ ಎರಡೂ ಕ್ರಮದಿಂದಾಗಿ ಬಿಬಿಎಂಪಿಗೆ ವಾರ್ಷಿಕ ₹2 ಸಾವಿರ ಕೋಟಿ ಆದಾಯ ಬರುವ ನಿರೀಕ್ಷೆ ಹೊಂದಲಾಗಿದೆ.

ಏನಿದು ಪ್ರೀಮಿಯಂ ಎಫ್‌ಎಆರ್‌?
ಬೆಂಗಳೂರು ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಯೋಜನೆಗಳಿಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ನಗದು ಪರಿಹಾರದ ಬದಲು ಟಿಡಿಆರ್‌ ನೀಡಲಾಗುತ್ತದೆ. 

ಈ ಟಿಡಿಆರ್‌ನಲ್ಲಿ ಎಫ್‌ಎಆರ್‌ ನಿಗದಿ ಮಾಡಲಾಗುತ್ತದೆ. ಅದರಿಂದ ಭೂಮಿ ನೀಡಿದವರು ಟಿಡಿಆರನ್ನು ಬೇರೆಯವರಿಗೆ ಮಾರಾಟ ಮಾಡಿಕೊಳ್ಳಬಹುದಾಗಿದೆ. 

ಅದನ್ನು ಖರೀದಿಸುವವರು ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಟಿಡಿಆರ್‌ನಲ್ಲಿ ಉಲ್ಲೇಖಿಸಲಾದ ಎಫ್‌ಎಆರ್‌ ಬಳಸಿ ತಮ್ಮ ಕಟ್ಟಡದ ಅಂತಸ್ತನ್ನು ಅನುಮತಿಗಿಂತ ಹೆಚ್ಚುವರಿಯಾಗಿ ನಿರ್ಮಿಸಿಕೊಳ್ಳಲು ಅವಕಾಶ ದೊರೆಯಲಿದೆ. ಅದಕ್ಕೆ ಯಾವುದೇ ರೀತಿಯ ಶುಲ್ಕ ಪಾವತಿಸುವ ಅಗತ್ಯವಿಲ್ಲ.

ಸದ್ಯ ಟಿಡಿಆರ್‌ ಮತ್ತು ಅದರಲ್ಲಿನ ಎಫ್‌ಎಆರನ್ನು ಯಾವ ವಲಯ ವ್ಯಾಪ್ತಿಗೆ ನೀಡಲಾಗಿರುತ್ತದೆಯೋ ಆ ವ್ಯಾಪ್ತಿಯಲ್ಲಿಯೇ ಬಳಸಿಕೊಳ್ಳಬೇಕಿದೆ. ಅದರಿಂದ ಹೆಚ್ಚಿನ ಭೂ ಮಾಲೀಕರು ಟಿಡಿಆರ್‌ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. 

ಅದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ನಗದು ರೂಪದಲ್ಲಿ ಪರಿಹಾರ ನೀಡುವ ಪರಿಸ್ಥಿತಿ ಹೆಚ್ಚಿದೆ. ಹೀಗಾಗಿ ಟಿಡಿಆರ್‌ ನಿಯಮ ಬದಲಿಸಿದ ನಂತರ ಟಿಡಿಆರ್‌ ಜತೆಗೆ ಪ್ರಿಮಿಯಂ ಎಫ್‌ಎಆರ್‌ ನೀಡಲು ನಿರ್ಧರಿಸಲಾಗಿದ್ದು, ಆ ಎಫ್‌ಎಆರನ್ನು ನಿಗದಿತ ವಲಯದ ಬದಲಿಗೆ ಬೇರೆ ವಲಯಕ್ಕೂ ಬಳಸಿಕೊಳ್ಳಬಹುದಾದ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ. 

ಅದರಿಂದ ಅಭಿವೃದ್ಧಿ ಕಾರ್ಯಗಳಿಗೆ ನಗದು ರೂಪದ ಪರಿಹಾರದ ಬದಲು ಟಿಡಿಆರ್‌ ಪಡೆಯುವವರ ಸಂಖ್ಯೆ ಹೆಚ್ಚಾಗಿ, ಬಿಬಿಎಂಪಿಗೆ ಹಣ ಉಳಿತಾಯವಾಗಲಿದೆ.

ಜಾಹೀರಾತು ನೀತಿ ಸಿದ್ಧ?
ಬಿಬಿಎಂಪಿ ವ್ಯಾಪ್ತಿಯಲ್ಲಿ ನಿಗದಿತ ಪ್ರದೇಶ ಹೊರತುಪಡಿಸಿ ಉಳಿದೆಡೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶವಿಲ್ಲ. ಈ ಕುರಿತು 2019ರಲ್ಲಿ ಬಿಬಿಎಂಪಿ ಕೌನ್ಸಿಲ್‌ನಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. 

ಹೀಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾಹೀರಾತು ಪ್ರದರ್ಶನಕ್ಕೆ ನಿಷೇಧವಿದೆ. ಆದ್ದರಿಂದ ಜಾಹೀರಾತು ಪ್ರದರ್ಶನದ ಮೂಲಕ ಬಿಬಿಎಂಪಿಗೆ ಬರುತ್ತಿರುವ ಆದಾಯ ಇಲ್ಲದಂತಾಗಿದೆ.

ಈಗ ಜಾಹೀರಾತಿನಿಂದ ಆದಾಯ ತರುವಂತೆ ಮಾಡಲು ಹೊಸ ಜಾಹೀರಾತು ನೀತಿ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಅದಕ್ಕೆ ತಕ್ಕಂತೆ ದೆಹಲಿ ಸೇರಿ ಇನ್ನಿತರ ನಗರಗಳಲ್ಲಿನ ಜಾಹೀರಾತು ನೀತಿಯನ್ನು ಅಧ್ಯಯನ ನಡೆಸಿ, ಹೊಸ ಜಾಹೀರಾತು ನೀತಿಯನ್ನು ಸಿದ್ಧಪಡಿಸಲಾಗಿದೆ. 

ಸರ್ಕಾರಕ್ಕೆ ಅದನ್ನು ಸಲ್ಲಿಸಿ ಅಲ್ಲಿಂದ ಅನುಮತಿ ಪಡೆದ ನಂತರ ಅದನ್ನು ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

₹2 ಸಾವಿರ ಕೋಟಿ ಆದಾಯ ನಿರೀಕ್ಷೆ: ಪ್ರಿಮಿಯಂ ಎಫ್‌ಎಆರ್‌ ನೀಡುವುದು ಹಾಗೂ ನೂತನ ಜಾಹೀರಾತು ನೀತಿ ಜಾರಿಯಿಂದಾಗಿ ಬಿಬಿಎಂಪಿಗೆ ₹2 ಸಾವಿರ ಕೋಟಿ ಆದಾಯ ಬರುವ ನಿರೀಕ್ಷೆ ಹೊಂದಲಾಗಿದೆ. 

ಈ ಬಗ್ಗೆ ರಾಜ್ಯ ಬಜೆಟ್‌ನಲ್ಲೂ ಉಲ್ಲೇಖಿಸಲಾಗಿದೆ. ಅಲ್ಲದೆ, ಮುಂಬರುವ ಬಿಬಿಎಂಪಿ ಬಜೆಟ್‌ನಲ್ಲಿ ಈ ಕುರಿತು ಸ್ಪಷ್ಟ ಚಿತ್ರಣ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.