ಸಾರಾಂಶ
ಜಾತ್ರೆಯಲ್ಲಿ ಮಹಾದಾಸೋಹಕ್ಕಾಗಿ ಸುಮಾರು 15 ದಿನಗಳ ಕಾಲ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಭಕ್ತರ ಪ್ರಸಾದಕ್ಕಾಗಿ ಲಕ್ಷಾಂತರ ರೊಟ್ಟಿ, ಶೇಂಗಾ ಹೋಳಿಗೆ, ದವಸ-ಧಾನ್ಯ ಗವಿಮಠಕ್ಕೆ ಟನ್ ಗಟ್ಟಲೇ ಹರಿದು ಬಂದಿತ್ತು.
ಪರಶಿವಮೂರ್ತಿ ದೋಟಿಹಾಳ
ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿಯಾದ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಲಕ್ಷ ಲಕ್ಷ ಭಕ್ತ ಸಮೂಹ ಸಾಲುಗಟ್ಟಿ ಪ್ರಸಾದ ಸ್ವೀಕರಿಸಿತು.ಜಾತ್ರೆಯಲ್ಲಿ ಮಹಾದಾಸೋಹಕ್ಕಾಗಿ ಸುಮಾರು 15 ದಿನಗಳ ಕಾಲ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಭಕ್ತರ ಪ್ರಸಾದಕ್ಕಾಗಿ ಲಕ್ಷಾಂತರ ರೊಟ್ಟಿ, ಶೇಂಗಾ ಹೋಳಿಗೆ, ದವಸ-ಧಾನ್ಯ ಗವಿಮಠಕ್ಕೆ ಟನ್ ಗಟ್ಟಲೇ ಹರಿದು ಬಂದಿತ್ತು.ಮಠದ ಪಕ್ಕದ ಸುಮಾರು ಆರು ಎಕರೆ ಪ್ರದೇಶದಲ್ಲಿ ಮಹಾದಾಸೋಹ ಜರುಗುತ್ತಿದ್ದು, ಏಕಕಾಲದಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ಸ್ವಯಂ ಸೇವಕರು ಪ್ರಸಾದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.ಮಹಾಪ್ರಸಾದ:ಭಕ್ತರು ಮಹಾಪ್ರಸಾದವಾದ ಶೇಂಗಾ ಹೋಳಿಗೆ, ಉದುರ ಸಜ್ಜಕ, ಮಾದಲಿ, ಹೆಸರುಬೆಳೆ ದಾಲ್, ಹಾಲು, ಸಜ್ಜಿ ರೊಟ್ಟಿ, ಜೋಳದ ರೊಟ್ಟಿ, ಬೂಂದಿ, ತುಪ್ಪ, ಪಲ್ಲೆ, ಅನ್ನ, ಮೊಸರು, ಸಾಂಬಾರು, ಉಪ್ಪಿನಕಾಯಿ, ಪುಟಾಣಿ ಚಟ್ನಿ, ಬದನೆಕಾಯಿ ಪಲ್ಯೆ ಸೇರಿದಂತೆ ವಿವಿಧ ಆಹಾರವನ್ನು ಜಾತ್ರೆಗೆ ಆಗಮಿಸಿದ ಲಕ್ಷಾಂತರ ಭಕ್ತರು ಸವಿದರು.ನಿಯಂತ್ರಣಕ್ಕೆ ಕ್ರಮ:ಊಟಕ್ಕೆ ಬಂದಿರುವ ಭಕ್ತರನ್ನು ಸರದಿ ಸಾಲಿನಲ್ಲಿ ನಿಲ್ಲಿಸಿ ಅವರು ಸುಗಮವಾಗಿ ಪ್ರಸಾದ ಸೇವನೆಗೆ ಪೊಲೀಸ್ ಇಲಾಖೆ ಹಾಗೂ ಗೃಹ ರಕ್ಷಕ ದಳದವರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸ್ವಯಂ ಸೇವಕರು, ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳು ವ್ಯವಸ್ಥೆ ಮಾಡಿದ್ದರು. ಭಕ್ತರಿಗೆ ಸಮರ್ಪಕವಾಗಿ ತಿಳಿವಳಿಕೆ ಮೂಡಿಸುತ್ತಿದ್ದರು.ನೆರಳು ವ್ಯವಸ್ಥೆ:ಊಟಕ್ಕೆ ಬಂದ ಮಹಾಭಕ್ತರಿಗೆ ದಾಸೋಹದ ಜೊತೆಗೆ ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ಕೆಲವರು ನಿಂತುಕೊಂಡು ಊಟ ಮಾಡಿದರೆ ಕೆಲವರು ಕುಳಿತು ಪ್ರಸಾದ ಸೇವಿಸಿದರು.ಜಾತ್ರೆಯಲ್ಲಿ ಪ್ರಸಾದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಮನೆಯಲ್ಲೂ ಇಂತಹ ಭೂರಿ ಭೋಜನ ಸವಿಯುವುದು ಆಗುವುದಿಲ್ಲ. ಜಾತ್ರೆಗೆ ಬಂದು ಗವಿಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದ ಪಡೆದುಕೊಂಡು ಪ್ರಸಾದ ಸ್ವೀಕರಿಸುವುದು ದೊಡ್ಡ ಪುಣ್ಯವಾಗಿದೆ ಎನ್ನುತ್ತಾರೆ ಗವಿಮಠದ ಭಕ್ತ ಮಲ್ಲಪ್ಪ ಕುಷ್ಟಗಿ.