ಬಸವ ಜಯಂತಿ ಆಚರಣೆಗೆ ಸಿದ್ಧತೆ

| Published : Apr 28 2025, 11:48 PM IST

ಸಾರಾಂಶ

ಸರ್ಕಾರ ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಒಂದು ವರ್ಷವಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಗುವುದು.

ಗಂಗಾವತಿ:

ನಗರದಲ್ಲಿ ಏ. 30ರಂದು ಬಸವ ಜಯಂತಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಸವ ಜಯಂತಿ ಸಮಿತಿ ಅಧ್ಯಕ್ಷ ಗಾಳಿ ರುದ್ರಪ್ಪ, ಕಾರ್ಯಾಧ್ಯಕ್ಷ ಹೊಸಳ್ಳಿ ಶಂಕರಗೌಡ, ಮಹಿಳಾ ವಿಭಾಗದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು ತಿಳಿಸಿದರು.

ಇಲ್ಲಿನ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕಾರ್ಯಕ್ರಮದ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸರ್ಕಾರ ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಒಂದು ವರ್ಷವಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಗುವುದು ಎಂದು ಹೇಳಿದರು.

ಜಯಂತಿ ಅಂಗವಾಗಿ ಉತ್ಸವ ಸಮಿತಿ ನೇತೃತ್ವ ಮತ್ತು ಸರ್ವ ಸಮಾಜ, ಸರ್ವ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಹಿಮಾಲಯದಲ್ಲಿ ಆರು ವರ್ಷಗಳ ಕಾಲ ಯೋಗ ಸಾಧನೆ ಮಾಡಿರುವ ನಿರಂಜನ ಸ್ವಾಮಿಗಳಿಂದ ಏ. 30ರಿಂದ ಮೇ 15ರ ವರೆಗೆ ಬೆಳೆಗ್ಗೆ 5.30ರಿಂದ 6.30ರ ವರೆಗೆ ಹಿಮಾಲಯನ್ ಧ್ಯಾನಯೋಗ ಮತ್ತು ಸಂಜೆ 6.30ರಿಂದ 7.30ರ ವರೆಗೆ ಸಾಮೂಹಿಕ ಭಜನೆ ಮತ್ತು ಅಧ್ಯಾತ್ಮಿಕ ಪ್ರವಚನ ಕಾರ್ಯಕ್ರಮವನ್ನು ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದೆ ಎಂದರು.

ಏ. 30ರಂದು ಬೆಳೆಗ್ಗೆ ತಾಲೂಕು ಆಡಳಿತದಿಂದ ಬಸವೇಶ್ವರ ವೃತ್ತದಲ್ಲಿ ಜಯಂತಿಗೆ ಚಾಲನೆ ನೀಡಲಾಗುವುದು. ನಂತರ ಶ್ರೀಕೃಷ್ಣದೇವರಾಯ ವೃತ್ತದಲ್ಲಿನ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅಂಬೇಡ್ಕರ್ ವೃತ್ತದ ಮೂಲಕ ಬಾಲಕಿಯರ ಶಾಲೆಯ ಆವರಣದ ವರೆಗೆ ಮೆರವಣಿಗೆ ನಡೆಯಲಿದೆ. ಅಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕೆಂದು ಹೇಳಿದರು.

ಮೇ 12ರಂದು ಪ್ರೌಢ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ವಚನ ಕಂಠಪಾಠ ಸ್ಪರ್ಧೆ ಮತ್ತು ಸಾಂಸ್ಕೃತಿಕ ನಾಯಕ ಬಸವಣ್ಣ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುವುದು. ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.

ಈ ವೇಳೆ ಸಮಿತಿಯ ಶ್ರೀಶೈಲ ಪಟ್ಟಣಶೆಟ್ಟಿ, ನಿಜಲಿಂಗಪ್ಪ ಮೆಣಸಿಗಿ, ಯೋಗ ಶಿಕ್ಷಕ ಶಾಂತವೀರಯ್ಯಸ್ವಾಮಿ, ಜಗದೀಶಸ್ವಾಮಿ, ಮಹಾಲೀಂಗಪ್ಪ ಬನ್ನಿಕೊಪ್ಪ, ಡಾ. ಶಿವಕುಮಾರ, ಎ.ಕೆ. ಮಹೇಶಕುಮಾರ, ಹೊಸಳ್ಳಿ ಶಂಕರಗೌಡ, ಸಿದ್ದಾಪುರ ರಾಚಪ್ಪ, ಬ್ಯಾಂಕ್ ಬಸವರಾಜ್, ದೀಲಿಪ್ ಮತ್ತಿತರು ಇದ್ದರು.