ಸಾರಾಂಶ
ರಾಮನಗರ: ಯಶಸ್ವಿ ಕಂಡಿರುವ ಅಕ್ಕಾ ಐಎಎಸ್ ಅಕಾಡೆಮಿ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸಿ, ಅವರ ಭವಿಷ್ಯ ಉಜ್ವಲವಾಗಿಸುವುದೇ ನಗರಸಭೆಯ ಪ್ರಮುಖ ಉದ್ದೇಶ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಗರಸಭೆ ಆಯೋಜಿಸಿದ್ದ ವೃತ್ತಿಪರ ಪ್ರವೇಶ ತರಬೇತಿಯ ಓರಿಯಂಟಲ್ ತರಗತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿರುವ ಯೋಚನಾ ಲಹರಿ, ಆತ್ಮವಿಶ್ವಾಸ ನಿಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಆಸಕ್ತಿಯಿರುವ ವಿದ್ಯಾರ್ಥಿಗಳು ಇಚ್ಚಾಶಕ್ತಿಯಿಂದ ತರಬೇತಿ ಪಡೆದು ತಮ್ಮ ಕನಸನ್ನು ನನಸು ಮಾಡಿಕೊಳ್ಳಿ ಎಂದರು.ತರಬೇತಿ ಸಂಸ್ಥೆಗಳಲ್ಲಿ ದುಬಾರಿ ಹಣ ಕೊಡಲಾಗದೆ ಎಷ್ಟೋ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಇದನ್ನರಿತು ಅಂತಹ ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗೆ ನಗರಸಭೆ ಸಹಾಯಹಸ್ತ ಚಾಚಿ ಈ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ವಿದ್ಯಾರ್ಥಿಗಳು ಆಸಕ್ತಿಯಿಂದ ತರಬೇತಿ ಪಡೆಯುವಂತೆ ಕಿವಿಮಾತು ಹೇಳಿದರು.
ತರಬೇತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ನೆರವಾಗುವ ಪಠ್ಯ ವಿಷಯಗಳು, ಸಾಮಾನ್ಯ ಜ್ಞಾನ, ಸ್ಪರ್ಧಾತ್ಮಕ ಪರೀಕ್ಷಾ ಪೂರಕ ವಿಷಯಗಳ ಮಾರ್ಗದರ್ಶನ ನೀಡುವ ಪರಿಣಿತರಿಂದ ತರಬೇತಿ ನೀಡಲಾಗುವುದು ಎಂದರು.ಈ ವೇಳೆ ನಿವೃತ್ತ ಔಷಧ ನಿಯಂತ್ರಣಾಧಿಕಾರಿ ಶ್ರೀನಿವಾಸ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹಾಗೂ ನಗರಸಭೆ ಸದಸ್ಯ ಬೈರೇಗೌಡ, ನಗರಸಭೆ ಸ್ಕೀಂ ಮ್ಯಾನೇಜರ್ ನಟರಾಜ್ ಗೌಡ, ಸಂಪನ್ಮೂಲ ವ್ಯಕ್ತಿಗಳಾದ ಮಹೇಶ್, ನರಸಿಂಹಸ್ವಾಮಿ, ಲಕ್ಷ್ಮಣ್ ಇದ್ದರು.
ಕೋಟ್ ...ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಗಳಿಂದ ತರಬೇತಿ ಪಡೆದು ಜ್ಞಾನ ಹೆಚ್ಚಿಸಿಕೊಂಡು ನಿಮ್ಮ ಗುರಿಯನ್ನು ತಲುಪಿ. ಮುಂದಿನ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ನಿಮ್ಮ ಶೈಕ್ಷಣಿಕ ದಡ ಸೇರುವ ವಿಶ್ವಾಸ ನಿಮ್ಮಲ್ಲಿರಲಿ, ಆಗ ನಿಮ್ಮ ಗುರಿ ಸಾಧನೆ ಸಾಧ್ಯ.
-ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ14ಕೆಆರ್ ಎಂಎನ್2.ಜೆಪಿಜಿ
ರಾಮನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಗರಸಭೆ ಆಯೋಜಿಸಿದ್ದ ವೃತ್ತಿಪರ ಪ್ರವೇಶ ತರಬೇತಿಯ ಓರಿಯಂಟಲ್ ತರಗತಿ ವೇಳೆ ನಗರಸಭಾಧ್ಯಕ್ಷ ಶೇಷಾದ್ರಿ ಮಾತನಾಡಿದರು.