ಸಾರಾಂಶ
5 ಎಕರೆ ಪ್ರದೇಶದಲ್ಲಿ ಕಟ್ಟಡ ನಿರ್ಮಾಣದ ಹೊಣೆ ಕರ್ನಾಟಕ ಗೃಹ ಮಂಡಳಿಗೆ । 5 ಹೋಬಳಿಯ 142 ಗ್ರಾಮಗಳಿಗೆ ಅನೂಕೂಲ
ಇಂದರಪಾಶ ಚಿಂಚರಕಿಕನ್ನಡಪ್ರಭ ವಾರ್ತೆ ಮಸ್ಕಿ
ತಾಲೂಕು ಆಡಳಿತ ಕೇಂದ್ರದ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಅದಕ್ಕಾಗಿ ಸರ್ಕಾರ ₹8 ಕೋಟಿ 60 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಕಟ್ಟಡ ನಿರ್ಮಾಣ ಹೊಣೆಯನ್ನು ಕರ್ನಾಟಕ ಗೃಹ ಮಂಡಳಿಗೆ ವಹಿಸಲಾಗಿದ್ದು, ಶೀಘ್ರದಲ್ಲಿಯೇ ಕೆಲಸ ಆರಂಭಗೊಳ್ಳಲಿದೆ.2017ರಲ್ಲಿ ಮಸ್ಕಿ ಪಟ್ಟಣವನ್ನು ನೂತನ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಲಾಗಿತ್ತು. ಕಳೆದ ನಾಲ್ಕೈದು ವರ್ಷಗಳಿಂದ ಬಸವೇಶ್ವರ ನಗರದ ಪುರಸಭೆಯ ಸಾಮರ್ಥ್ಯಸೌಧದಲ್ಲಿ ತಹಸೀಲ್ದಾರ್ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಮಸ್ಕಿ ತಾಲೂಕು ಕೇಂದ್ರವನ್ನು ಮೂರು ತಾಲೂಕಿನ ಹಳ್ಳಿಗಳನ್ನು ವಿಂಗಡಿಸಿ 5 ಹೋಬಳಿಗಳ ವ್ಯಾಪ್ತಿಯ 142 ಗ್ರಾಮಗಳನ್ನು ಸೇರಿಸಿ ಹೊಸ ತಾಲೂಕು ಕೇಂದ್ರವನ್ನಾಗಿಸಿ 7 ವರ್ಷ ಗತಿಸುತ್ತಿದೆ. ಆದರೆ ಇವರೆಗೂ ತಾಲೂಕು ಕಚೇರಿಗಳು ಇಲ್ಲದೆ ಜನರು ಸರ್ಕಾರಿ ಕಾಗದ ಪತ್ರಗಳಿಗಾಗಿ ಮಾನ್ವಿ, ಸಿಂದನೂರು, ಲಿಂಗಸಗೂರಿಗೆ ಅಲೆದಾಡುವ ಪರಿಸ್ಥಿತಿ ಇದೆ. ಆದರೆ ಇದೀಗ ಸರ್ಕಾರ ಕಂದಾಯ ಇಲಾಖೆವತಿಯಿಂದ ಪಟ್ಟಣದ ಪಿಡಬ್ಲ್ಯೂಡಿ ಕ್ಯಾಂಪ್ ಬಳಿ 5ಎಕರೆ ಪ್ರದೇಶದಲ್ಲಿ ಪ್ರಜಾಸೌಧ ನಿರ್ಮಿಸಲು ಉದ್ದೇಶಿಸಿರುವ ಪ್ರದೇಶದ ಮಣ್ಣಿನ ಪರೀಕ್ಷೆ ಸೇರಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಂಡಿದೆ.
*ಎಷ್ಟು ಅನುದಾನ: ಪಟ್ಟಣದ ಲಿಂಗಸಗೂರು ರಸ್ತೆಯ ಕವಿತಾಳ ಕ್ರಾಸ್ ಹತ್ತಿರದ ಸರ್ವೇ ನಂ:17ರಲ್ಲಿ 5ಎಕರೆ ಪ್ರದೇಶದಲ್ಲಿ ನಿರ್ಮಿಸಲಿ ನೀಲ ನಕ್ಷೆ ಸಿದ್ದಪಡಿಸಲಾಗಿದೆ. ಕಂದಾಯ ಇಲಾಖೆಯಿಂದ 4 ಕೋಟಿ 30 ಲಕ್ಷ ಅನುಧಾನ ಹಾಗೂ ಕೆಕೆಆರ್‌ಡಿಬಿಯಿಂದ 4 ಕೋಟಿ 30 ಲಕ್ಷ ಸೇರಿ ಒಟ್ಟ ₹8 ಕೋಟಿ 60 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ಪ್ರಜಾಸೌಧ ನಿರ್ಮಾಣಕ್ಕೆ ಅನುದಾನ ಪಡೆದುಕೊಂಡು ನಿರ್ಮಾಣದ ಹೊಣೆಯನ್ನು ಈಗಾಗಲೇ ಕರ್ನಾಟಕ ಗೃಹ ಮಂಡಳಿಯವರಿಗೆ ವಹಿಸಲಾಗಿದೆ ಎಂದು ತಿಳಿದು ಬಂದಿದ್ದು, ಕಟ್ಟಡ ನಿರ್ಮಿಸಲು ಮಣ್ಣಿನ ಪರೀಕ್ಷೆ ನಡೆಸಲಾಗಿದೆ. ಆದಷ್ಟು ಬೇಗ ಕಾಮಗಾರಿ ಆರಂಭಿಸಲು ಎಲ್ಲ ಸಿದ್ಧತೆ ನಡೆಸಲಾಗುತ್ತಿದೆ.*ದಾಖಲೆಗಳ ಸಂಗ್ರಹಕ್ಕೆ ತಲೇನೋವು: ಮಸ್ಕಿ ತಾಲೂಕಿಗೆ ಮೂರು ತಾಲೂಕಿನ ಹಳ್ಳಿಗಳು ಸೇರಿಸಿರುವುದರಿಂದ ಈಗವರಗೆ ರೈತರ ಜಮೀನುಗಳಿಗೆ ಸಂಬಂಧ ಪಟ್ಟ ಕೇಲವೊಂದು ಧಾಖಲೆಗಳು ಇನ್ನು ಮಸ್ಕಿ ತಾಲೂಕು ಕಚೇರಿಗೆ ಬರದೇ ಇರುವುದರಿಂದ ಜನರು ಕಾಗದ ಪತ್ರಗಳಿಗಾಗಿ ಹಳೆಯ ತಾಲೂಕು ಕಚೇರಿಗಳಿಗೆ ತೆರಳಿ ಹುಡಕಾಡುವಂತಾಗಿದೆ ಈಗಲಾದರೂ ಆದಷ್ಟು ಬೇಗ ಎಲ್ಲಾ ಅಗತ್ಯ ದಾಖಲೆಗಳನ್ನು ಮಸ್ಕಿ ತಾಲೂಕು ಕೇಂದ್ರಕ್ಕೆ ತರಿಸಿಕೊಡು ರೈತರಿಗೆ ಹಾಗೂ ಸಾರ್ವಜನಿಕರಿಗೆ ಒಂದೇಡೆ ಸಿಗುವತಾಗಲಿ ಎನ್ನುವುದೇ ಸಾರ್ವಜನಿಕರ ಒತ್ತಾಯವಾಗಿದೆ.