3 ಲೋಕಸಭಾ ಕ್ಷೇತ್ರಗಳ ಮತ ಎಣಿಕೆಗೆ ಸಿದ್ಧತೆ

| Published : Jun 03 2024, 01:15 AM IST / Updated: Jun 03 2024, 09:24 AM IST

ಸಾರಾಂಶ

ಲೋಕಸಭಾ ಚುನಾವಣೆಯ ಮತ ಎಣಿಕೆ ಜೂನ್‌ 4ರಂದು ನಡೆಯುವ ಹಿನ್ನೆಲೆಯಲ್ಲಿ ಬೆಂಗಳೂರಿನ ಮೂರು ಮತ ಎಣಿಕಾ ಕೇಂದ್ರಗಳಿಗೆ ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.

 ಬೆಂಗಳೂರು :  ಲೋಕಸಭಾ ಚುನಾವಣೆಯ ಮತ ಎಣಿಕೆ ಜೂನ್‌ 4ರಂದು ನಡೆಯುವ ಹಿನ್ನೆಲೆಯಲ್ಲಿ ಬೆಂಗಳೂರಿನ ಮೂರು ಮತ ಎಣಿಕಾ ಕೇಂದ್ರಗಳಿಗೆ ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.

ಅರಮನೆ ರಸ್ತೆಯ ಮೌಂಟ್ ಕಾರ್ಮೆಲ್ ಕಾಲೇಜು, ಮಲ್ಯ ರಸ್ತೆಯ ಸೇಂಟ್ ಜೋಸೆಫ್ ಕಾಲೇಜು ಹಾಗೂ ಜಯನಗರದ ಎಸ್.ಎಸ್.ಎಂ.ಆರ್.ವಿ. ಕಾಲೇಜಿನ ಮತ ಎಣಿಕೆ ಕೇಂದ್ರಗಳಿಗೆ ಅವರು ಭೇಟಿ ನೀಡಿ ಮತ ಎಣಿಕೆ ಕೊಠಡಿ ವ್ಯವಸ್ಥೆ, ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಮಂಗಳವಾರ ಬೆಳಗ್ಗೆ 7.45ಕ್ಕೆ ಸ್ಟ್ರಾಂಗ್ ರೂಂಗಳನ್ನು ತೆರೆಯಲಾಗುತ್ತದೆ. 8 ಗಂಟೆಗೆ ಪೋಸ್ಟಲ್ ಬ್ಯಾಲೆಟ್‌ಗಳ ಎಣಿಕೆ ಪ್ರಾರಂಭವಾದ ಬಳಿಕ ಇವಿಎಂ ಎಣಿಕೆ ಆರಂಭವಾಗಲಿದೆ. ಎಣಿಕೆ ಕಾರ್ಯಕ್ಕೆ ನಿಯೋಜನೆ ಮಾಡಿರುವ ಸಿಬ್ಬಂದಿಗೆ ಮತ ಎಣಿಕೆ ಕೇಂದ್ರಕ್ಕೆ ಬರುವವರೆಗೆ ಯಾವ ಟೇಬಲ್‌ನಲ್ಲಿ ಕಾರ್ಯ ನಿರ್ವಹಿಸಬೇಕೆಂಬ ಮಾಹಿತಿ ಇರುವುದಿಲ್ಲ. ಜೂನ್ 4ರ ಬೆಳಗ್ಗೆ ಎಣಿಕಾ ಕೇಂದ್ರಕ್ಕೆ ಬಂದ ನಂತರ ಮಾಹಿತಿ ನೀಡಲಾಗುವುದು ಎಂದರು.

ಮತ ಎಣಿಕೆಯ ಸಿಬ್ಬಂದಿ ಮೂರು ವಿಧದಲ್ಲಿದ್ದು, ಪ್ರತಿ ಟೇಬಲ್‌ಗೆ ಮೈಕ್ರೋ ಅಬ್ಸರ್ವರ್‌, ಮತ ಎಣಿಕೆ ಮೇಲ್ವಿಚಾರಕರು ಮತ್ತು ಮತ ಎಣಿಕೆ ಸಹಾಯಕರನ್ನು ನಿಯೋಜಿಸಲಾಗುವುದು. ಮತ ಎಣಿಕೆ ಸಿಬ್ಬಂದಿ ಹಾಗೂ ಅಭ್ಯರ್ಥಿಗಳ ಮತ ಎಣಿಕೆ ಏಜೆಂಟ್‌ರನ್ನು ಬೆಳಗ್ಗೆ 6 ಗಂಟೆಗೆ ಮತ ಎಣಿಕೆ ಕೇಂದ್ರದಲ್ಲಿ ಹಾಜರಾಗುವಂತೆ ನಿರ್ದೇಶಿಸಲಾಗಿದೆ. ಚುನಾವಣಾ ಆಯೋಗದಿಂದ ನೀಡಲಾದ ಗುರುತಿನ ಚೀಟಿ ಹೊಂದಿರುವವರಿಗೆ ಮಾತ್ರ ಮತ ಎಣಿಕೆ ಕೇಂದ್ರದ ಒಳಗೆ ಪ್ರವೇಶವಿರಲಿದೆ. ಒಂದು ಕೊಠಡಿಯಲ್ಲಿ 14 ಟೇಬಲ್ ಇರಲಿದೆ. ದೊಡ್ಡ ಕೊಠಡಿಗಳಿದ್ದರೆ ಹೆಚ್ಚಿನ ಟೇಬಲ್ ಹಾಕಲಾಗುತ್ತದೆ ಎಂದರು.

ಅಂಚೆ ಮತದಾನ ಈ ಬಾರಿ ಹೆಚ್ಚಾಗಿ ನಡೆದಿದೆ. ಇವಿಎಂ ಮತ ಎಣಿಕೆಯ ಜೊತೆಗೆ ಅಂಚೆ ಮತ ಎಣಿಕೆಯೂ ನಡೆಯಲಿದೆ. ಇವಿಎಂನ ಮತ ಎಣಿಕೆ ಕೊನೆ ರೌಂಡ್‌ ಬಾಕಿ ಇರುವಂತೆ ಅಂಚೆ ಮತ ಎಣಿಕೆ ಪೂರ್ಣಗೊಳಿಸಬೇಕೆಂದು ಸೂಚಿಸಲಾಗಿದೆ. ಪ್ರತಿ ಕೊಠಡಿಯಲ್ಲಿಯೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಅದರ ಜೊತೆಗೆ ಚುನಾವಣಾಧಿಕಾರಿ ನಿರ್ದೇಶನದ ಮೇರೆಗೆ ಇನ್ನಿತರ ಕಡೆ ಸಿಸಿ ಕ್ಯಾಮೆರಾ ಹಾಗೂ ವಿಡಿಯೋಗ್ರಾಫಿ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

ಮತ ಎಣಿಕೆ ಕೇಂದ್ರದಲ್ಲಿ ವೀಕ್ಷಕರಿಗೆ ಒಂದು ಕೊಠಡಿ, ಚುನಾವಣಾಧಿಕಾರಿಗೆ ಒಂದು ಕೊಠಡಿ ಹಾಗೂ ಮಾಧ್ಯಮದವರಿಗಾಗಿ ಮಾಧ್ಯಮ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ. ಮಾಧ್ಯಮದವರಿಗೆ ಮಾಧ್ಯಮ ಕೇಂದ್ರದಲ್ಲಿ ಮಾತ್ರ ಮೊಬೈಲ್ ಬಳಸಲು ಅವಕಾಶವಿರುತ್ತದೆ. ಹೊರಗಡೆ ಮೊಬೈಲ್ ಬಳಸಲು ಅವಕಾಶವಿರುವುದಿಲ್ಲ. ಮತ ಎಣಿಕೆ ಕಾರ್ಯದಲ್ಲಿ ಕಾರ್ಯ ನಿರ್ವಹಿಸುವ ಯಾವುದೇ ಸಿಬ್ಬಂದಿ ಹಾಗೂ ಏಜೆಂಟ್‌ರಿಗೆ ಎಣಿಕೆ ಕೇಂದ್ರದಲ್ಲಿ ಮೊಬೈಲ್ ಮತ್ತು ಬ್ಯಾಗ್ ತರಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಚುನಾವಣಾಧಿಕಾರಿಗಳಾದ ಡಾ। ಕೆ.ಹರೀಶ್ ಕುಮಾರ್, ದಯಾನಂದ್, ವಿನೋತ್ ಪ್ರಿಯಾ, ಅಧಿಕಾರಿಗಳು ಉಪಸ್ಥಿತರಿದ್ದರು.

ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಮತ್ತು ಸ್ಟ್ರಾಂಗ್ ರೂಂ ವಿವರ 

ಲೋಕಸಭಾ ಕ್ಷೇತ್ರ: ಬೆಂಗಳೂರು ಕೇಂದ್ರಮತ ಎಣಿಕಾ ಕೇಂದ್ರ: ಅರಮನೆ ರಸ್ತೆಯ ಮೌಂಟ್ ಕಾರ್ಮೆಲ್ ಕಾಲೇಜುಮತಗಟ್ಟೆಗಳ ಸಂಖ್ಯೆ: 2,125ಮತ ಎಣಿಕೆ ಕೊಠಡಿಗಳ ಸಂಖ್ಯೆ: 10ಒಟ್ಟು ಟೇಬಲ್ ಗಳ ಸಂಖ್ಯೆ: 135ಒಟ್ಟು ಸಿಬ್ಬಂದಿ: 416

ಲೋಕಸಭಾ ಕ್ಷೇತ್ರ: ಬೆಂಗಳೂರು ಉತ್ತರ

ಮತ ಎಣಿಕಾ ಕೇಂದ್ರ: ಮಲ್ಯ ರಸ್ತೆಯ ಸೇಂಟ್ ಜೋಸೆಫ್ ಕಾಲೇಜುಮತಗಟ್ಟೆಗಳ ಸಂಖ್ಯೆ: 2,911ಮತ ಎಣಿಕೆ ಕೊಠಡಿ ಸಂಖ್ಯೆ: 19ಒಟ್ಟು ಟೇಬಲ್ ಸಂಖ್ಯೆ: 130ಒಟ್ಟು ಸಿಬ್ಬಂದಿ ಸಂಖ್ಯೆ: 390

ಲೋಕಸಭಾ ಕ್ಷೇತ್ರ: ಬೆಂಗಳೂರು ದಕ್ಷಿಣ

ಮತ ಎಣಿಕಾ ಕೇಂದ್ರ: ಜಯನಗರದ ಎಸ್ಎಸ್ಎರ್‌ಆರ್‌ವಿ ಕಾಲೇಜು

ಮತಗಟ್ಟೆಗಳ ಸಂಖ್ಯೆ: 2,120

ಮತ ಎಣಿಕೆ ಕೊಠಡಿ ಸಂಖ್ಯೆ: 9

ಒಟ್ಟು ಟೇಬಲ್ ಸಂಖ್ಯೆ: 118

ಒಟ್ಟು ಸಿಬ್ಬಂದಿ ಸಂಖ್ಯೆ: 354