ಸಾರಾಂಶ
ಗೋಪಾಲ್ ಯಡಗೆರೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗಭದ್ರಾ ಜಲಾಶಯದಿಂದ ನೀರು ಸೋರಿಕೆಯಾದ ಬೆನ್ನಲ್ಲೇ ಭದ್ರಾ ಜಲಾಶಯದ ಬಲ್ಕ್ ಹೆಡ್ ಕಾಮಗಾರಿ ನಡೆಸುವ ಸಂಬಂಧ ಅಧಿಕಾರಿಗಳು ಯೋಜನೆಯೊಂದನ್ನು ರೂಪಿಸಿದ್ದು, ಇದಕ್ಕಾಗಿ ಕರೆಯಲಾದ ಟೆಂಡರ್ ಮತ್ತು ಇಡೀ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರದ ಸಂಶಯ ಹೆಡೆಯಾಡುತ್ತಿದೆ.
ಟೆಂಡರ್ ಕರೆಯುವ ಮುನ್ನ ಬಲ್ಕ್ ಹೆಡ್ ದುರಸ್ತಿಗೆ ಕರ್ನಾಟಕ ನೀರಾವರಿ ನಿಗಮದ ಭದ್ರಾ ಯೋಜನಾ ಅಧಿಕಾರಿಗಳು ಅಸ್ತಿತ್ವದಲ್ಲಿಯೇ ಇಲ್ಲದ ಎರಡು ಕಂಪನಿಗಳಿಂದ ಕೊಟೇಶನ್ ಪಡೆದಿದ್ದು, ಇದನ್ನು ಮುಂದಿಟ್ಟುಕೊಂಡು ಟೆಂಡರ್ ಕರೆದಿದ್ದಾರೆ.ಇದೇ ರೀತಿಯ ಕಾಮಗಾರಿಯೊಂದನ್ನು ಕಾವೇರಿ ನೀರಾವರಿ ನಿಗಮಕ್ಕೆ ಒಳಪಡುವ ಹೇಮಾವತಿ ಜಲಾಶಯದಲ್ಲಿನ ಬಲ್ಕ್ ಹೆಡ್ ಕಾಮಗಾರಿಯನ್ನು ಸರಿ ಸುಮಾರು ₹70 ಲಕ್ಷದಲ್ಲಿ ಮುಗಿದಿರುವ ಇತಿಹಾಸ ಎದುರಿಗೆ ಇರುವಾಗಲೇ ಇದೇ ರೀತಿಯ ಕಾಮಗಾರಿಗೆ ₹6.38 ಕೋಟಿ ವೆಚ್ಚದ ಟೆಂಡರ್ ಅಂತಿಮಗೊಳಿಸಿರುವುದು ಈ ಸಂಶಯಕ್ಕೆಕಾರಣವಾಗಿದೆ.
ಇದರ ಬೆನ್ನಲ್ಲೇ ರಾಜ್ಯ ಮುಖ್ಯಕಾರ್ಯದರ್ಶಿಗಳು ಟೆಂಡರ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿದಿರುವುದು ಗಮನಾರ್ಹ.ಅಸ್ತಿತ್ವದಲ್ಲಿಯೇ ಇಲ್ಲದ ಕಂಪನಿಯಿಂದ ಕೋಟೇಶನ್: ಯೋಜನೆಯ ವೆಚ್ಚ ಲೆಕ್ಕ ಹಾಕಲು ಮೂರು ಕಂಪನಿಗಳಿಂದ ಕೋಟೇಶನ್ ತರಿಸಲಾಗಿದ್ದು, ಇದರಲ್ಲಿ ಎರಡು ಕಂಪನಿಗಳು ಸದ್ಯ ಅಸ್ತಿತ್ವದಲ್ಲಿಯೇ ಇರಲಿಲ್ಲ ಎಂಬುದು ಬಳಿಕ ಬಯಲಾಗಿದೆ. ಜೊತೆಗೆ ಚುನಾವಣೆ ಸಂದರ್ಭ ಬಳಸಿಕೊಂಡ ಅಧಿಕಾರಿಗಳು ತುರ್ತು ಕಾಮಗಾರಿಗೆ ಇರುವ ನಿಯಮ ಬಳಸಿಕೊಂಡು ಯಾವುದೇ ಎಸ್‌ಆರ್ ದರ ಇಲ್ಲದೆಯೇ ಟೆಂಡರ್ ಕರೆದಿದ್ದು, ಇದರಲ್ಲಿ ಅವ್ಯವಹಾರದ ಸಂಶಯ ವ್ಯಕ್ತವಾಯಿತು. ಕೆಲವರು ಈ ಅವ್ಯಹಾರದ ಕುರಿತು ಸಂಶಯ ವ್ಯಕ್ತಪಡಿಸಿ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿದರು. ಈ ದೂರಿನಲ್ಲಿ ಮೇಲ್ನೋಟಕ್ಕೆ ಸತ್ಯ ಕಂಡು ಬಂದಿದ್ದರಿಂದ ಇದಕ್ಕೆ ತಡೆ ನೀಡಲಾಯಿತು. ಆದರೂ ತುರ್ತು ಕಾಮಗಾರಿಯನ್ನು ಮುಂದಿಟ್ಟುಕೊಂಡು ಕೆಲಸ ಕೈಗೊಳ್ಳಲು ಚುನಾವಣಾ ಆಯೋಗದಿಂದ ಅನುಮತಿ ಪಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದರು ಎಂಬುದು ಗಮನಾರ್ಹ. ಜೊತೆಗೆ ನೀತಿ ಸಂಹಿತೆ ನೆಪವಾಗಿಟ್ಟುಕೊಂಡು ಟೆಂಡರ್ ಕರೆದ ಅಧಿಕಾರಿಗಳು. ಇದು ಇಡೀ ಕಾಮಗಾರಿಯ ಹಿಂದಿನ ಲಾಭದ ಲೆಕ್ಕಾಚಾರವನ್ನು ಬಯಲುಗೊಳಿಸಿದೆ.ಟೆಂಡರ್‌ನಲ್ಲಿ ಭಾಗಿಯಾದ ಕಂಪನಿಗೆ ಅನುಕೂಲವಾಗುವಂತೆ ನಿಯಮಗಳನ್ನು ರೂಪಿಸಿ ಟೆಂಡರ್ ಕರೆಯಲಾಗಿದೆ ಎಂದು ಗಂಭೀರವಾದ ಆರೋಪ ಕೇಳಿ ಬಂದಿದೆ. ಜೊತೆಗೆ ಟೆಂಡರ್ ಕರೆದ 7 ದಿನದೊಳಗೆ ಟೆಂಡರ್ ಮುಕ್ತಾಯಗೊಳಿಸಿರುವುದು ಕೂಡ ಸಂಶಯಕ್ಕೆ ಕಾರಣವಾಗಿದೆ. ವಿಶೇಷವೆಂದರೆ ಯಾವುದೇ ರಜಾ ದಿನದಂದು ಟೆಂಡರ್ ಅಂತಿಮ ದಿನವಾಗಿರುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಚುನಾವಣೆ ನಡೆದ ಮೇ 7ರಂದು ಟೆಂಡರ್‌ಗೆ ಕೊನೆಯ ದಿನವಾಗಿದ್ದು, ಅಂದೇ ಟೆಂಡರ್ ಮುಕ್ತಾಯಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಕಲಿ ಕೊಟೇಶನ್?: ಟೆಂಡ್‌ರ್‌ಗೆ ಮುನ್ನ ಕರೆಯಲಾದ ಮೂರು ಕೊಟೇಶನ್‌ಗಳಲ್ಲಿ ಎರಡು ಕಂಪನಿಗಳ ಕುರಿತು ಸಂಶಯ ವ್ಯಕ್ತವಾಗಿದೆ. ಈ ಹೆಸರಿನಲ್ಲಿ ಸಲ್ಲಿಕೆಯಾಗಿರುವ ಕೊಟೇಶನ್‌ನಲ್ಲಿ ಜಿಎಸ್‌ಟಿ ಸಂಖ್ಯೆಯೇ ಇಲ್ಲ. ರಿಜಿಸ್ಟ್ರೇಷನ್ ನಂಬರ್ ಇಲ್ಲದ ಕಂಪನಿಗಳ ಹೆಸರಿನಲ್ಲಿ ನಕಲಿ ಲೆಟರ್ ಹೆಡ್ ನಲ್ಲಿ ಕೊಟೇಷನ್ ಪಡೆದಿರುವ ಶಂಕೆ ವ್ಯಕ್ತವಾಗಿದೆ. ಮುಖ್ಯ ಕಾರ್ಯದರ್ಶಿಗಳು ನೀಡಿರುವ ತಡೆ ಆದೇಶವನ್ನು ತೆರವುಗೊಳಿಸಲು ಜಿಲ್ಲೆಯ ಶಾಸಕರೊಬ್ಬರು ಪ್ರಭಾವ ಬೀರುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಇಡೀ ಪ್ರಕರಣದ ಕುರಿತು ವಿಸ್ತೃತವಾದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.ಏನಿದು ಅವ್ಯವಹಾರ?: ಭದ್ರಾ ಜಲಾಶಯದ ಸ್ಲುಯೀಸ್ ಗೇಟ್ ಮತ್ತು ನಾಲೆಯಲ್ಲಿ ಸಮಸ್ಯೆಯಿದ್ದು, ಜಲಾಶಯದ ಅತ್ಯಂತ ತಳಭಾಗದಲ್ಲಿನ ಈ ಸಮಸ್ಯೆ ಬಗೆಹರಿಸಲು ಬೇಸಿಗೆಯಲ್ಲಿ ಜಲಾಶಯದಲ್ಲಿ ನೀರು ಕಡಿಮೆಯಾದಾಗ ಮಾತ್ರ ಮಾಡಬೇಕು ಅಥವಾ ಅನಿವಾರ್ಯವಾದಲ್ಲಿ ಜಲಾಶಯದ ನೀರಿನ ತಳಭಾಗಕ್ಕೆ ಹೋಗಿ ಮಾಡಬೇಕು. ಹೀಗೆ ದುರಸ್ತಿ ಮಾಡಬೇಕಾದರೆ ಬಲ್ಕ್ ಹೆಡ್ ಮುಚ್ಚಬೇಕು. ಈ ಬಲ್ಕ್ ಹೆಡ್ ಸೇರಿದಂತೆ ಹಲವು ಕೆಲಸಗಳ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಸ್ಲೂಯೀಸ್ ಹಾಗೂ ರಿವರ್ಸ್ ಸ್ಲೂಯೀಸ್ ಗೇಟ್‌ನಿಂದ ನೀರು ಪೋಲಾಗಿದ್ದೆ ಅಧಿಕಾರಿಗಳಿಗೆ ವರದಾನವಾಗಿದ್ದು, ತರಾತುರಿಯಲ್ಲಿ ಬಲ್ಕ್ ಹೆಡ್ ಕಾಮಗಾರಿ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.