ಸುರಕ್ಷತೆಗೆ ಮತ್ತಷ್ಟು ವ್ಯವಸ್ಥೆಯಾಗಬೇಕು ಎನ್ನುವ ಉದ್ದೇಶದಿಂದ ಕಡಲತೀರಗಳಿಗೆ ರಕ್ಷಣಾ ಸೌಕರ್ಯ ಕಲ್ಪಿಸಲು ಸಿದ್ಧತೆ

| Published : Dec 14 2024, 12:48 AM IST / Updated: Dec 14 2024, 12:25 PM IST

ಸುರಕ್ಷತೆಗೆ ಮತ್ತಷ್ಟು ವ್ಯವಸ್ಥೆಯಾಗಬೇಕು ಎನ್ನುವ ಉದ್ದೇಶದಿಂದ ಕಡಲತೀರಗಳಿಗೆ ರಕ್ಷಣಾ ಸೌಕರ್ಯ ಕಲ್ಪಿಸಲು ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಜನರ ಸುರಕ್ಷತೆಗೆ ಮತ್ತಷ್ಟು ವ್ಯವಸ್ಥೆಯಾಗಬೇಕು ಎನ್ನುವ ಉದ್ದೇಶದಿಂದ ಪ್ರವಾಸಿಗರ ರಕ್ಷಣೆಗೆ ಅಗತ್ಯವಿರುವ ಮೂಲ ಸಾಧನ ಸಲಕರಣೆ ಬಗ್ಗೆ ಸರ್ವೆ ಮಾಡಲು ವಿವಿಧ ಇಲಾಖೆ ಅಧಿಕಾರಿಗಳ ಸಮಿತಿ ರಚನೆ ಮಾಡಲಾಗಿದೆ.

ಜಿ.ಡಿ. ಹೆಗಡೆ

ಕಾರವಾರ: ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ಸ್ಥಳದ ಪರಿಚಯವಿಲ್ಲದೇ ಮೋಜುಮಸ್ತಿಯಲ್ಲಿ ತೊಡಗಿಕೊಂಡು ಜೀವಕ್ಕೆ ಅಪಾಯ ತಂದುಕೊಳ್ಳುತ್ತಿರುವುದಕ್ಕೆ ತಡೆಯೊಡ್ಡಲು ಜಿಲ್ಲಾಡಳಿತ ಮುಂದಾಗಿದೆ. ಕಡಲ ತೀರಗಳಲ್ಲಿ ಸರ್ವೆ ನಡೆಸಿ ಅಪಾಯಕಾರಿ, ಅಪಾಯಕಾರಿಯಲ್ಲದ ಸ್ಥಳ ಗುರುತು ಜತೆಗೆ ರಕ್ಷಣಾ ಕಾರ್ಯಕ್ಕೆ ಅಗತ್ಯವಿರುವ ಸಾಧನ ಸಕಲರಣೆ ಒದಗಿಸಲು ಮುಂದಾಗಿದೆ.ಗೋಕರ್ಣ ಹಾಗೂ ಮುರುಡೇಶ್ವರದ ಕಡಲ ತೀರಗಳಲ್ಲಿ ಈಗಾಗಲೇ ಸಾಕಷ್ಟು ಜನರು ಅಲೆಗಳ ಅಬ್ಬರಕ್ಕೆ ಸಿಲುಕಿ ಜೀವ ಕಳೆದುಕೊಂಡಿದ್ದು, ಮುರುಡೇಶ್ವರದಲ್ಲಿ ಮೂರು ದಿನದ ಹಿಂದೆ ಪ್ರವಾಸಕ್ಕೆ ಬಂದಿದ್ದ ನಾಲ್ವರು ವಿದ್ಯಾರ್ಥಿನಿಯರು ಜೀವ ಕಳೆದುಕೊಂಡಿದ್ದಾರೆ.

ಶಾಲೆಗಳ ಪ್ರವಾಸ ಕೈಗೊಳ್ಳುವ ಸಮಯವಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಇಲ್ಲಿನ ವಿಶಾಲವಾದ ಕಡಲ ತೀರವನ್ನು ನೋಡುತ್ತಿದ್ದಂತೆ ಮೈ ಮರೆತು ಅಲೆಗಳ ಅಬ್ಬರವನ್ನು ಲೆಕ್ಕಿಸದೇ ಕಡಲಿಗೆ ಇಳಿದು ಜೀವ ಕಳೆದುಕೊಳ್ಳುತ್ತಿದ್ದಾರೆ. ತೀರದಲ್ಲಿ ನಿಯೋಜಿತ ಲೈಫ್‌ಗಾರ್ಡ್ ಸಿಬ್ಬಂದಿ ನಿತ್ಯ ಒಂದಿಲ್ಲೊಂದು ಕಡೆ ಅಪಾಯಕ್ಕೆ ಸಿಲುಕಿದ ಪ್ರವಾಸಿಗರನ್ನು ರಕ್ಷಣೆ ಮಾಡುತ್ತಿದ್ದಾರೆ. ಇಂತಹ ದುರ್ಘಟನೆ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದಾಗಿದೆ. ಆಯಾ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಅರಣ್ಯ, ಪೊಲೀಸ್, ಬಂದರು, ಕರಾವಳಿ ಕಾವಲು ಪಡೆ ಹಿರಿಯ ಅಧಿಕಾರಿಗಳ ತಂಡವನ್ನು ರಚನೆ ಮಾಡಲಾಗಿದ್ದು, ಈ ತಂಡ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಅಪಾಯಕಾರಿ ಹಾಗೂ ಅಪಾಯಕಾರಿಯಲ್ಲದ ಸ್ಥಳವನ್ನು ಗುರುತು ಮಾಡುತ್ತದೆ. 

ಅಪಾಯಕಾರಿ ಸ್ಥಳಕ್ಕೆ ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.

ಇಲ್ಲಿ ಈಜುವುದು ಅಥವಾ ಬೇರಾವುದೇ ಚಟುವಟಿಕೆಗೆ ಅವಕಾಶವಿಲ್ಲ. ಇಂತಹ ಸ್ಥಳಕ್ಕೆ ಪೊಲೀಸರನ್ನು ನಿಯೋಜನೆ ಮಾಡಿ ಜನರ ನಿಯಂತ್ರಣ ಮಾಡಲಾಗುತ್ತದೆ. ಅಪಾಯಕಾರಿ ಅಲ್ಲದ ಸ್ಥಳಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಇಂತಹ ಪ್ರದೇಶದಲ್ಲಿ ಲೈಫ್ ಗಾರ್ಡ್, ಪ್ರವಾಸಿ ಮಿತ್ರ ಸಿಬ್ಬಂದಿಯನ್ನು ನಿಯೋಜನೆ ಮಾಡಿರಲಾಗುತ್ತದೆ. ಯಾರಾದರೂ ಅಪಾಯಕ್ಕೆ ಸಿಲುಕಿದಲ್ಲಿ ಅಂಥವರ ರಕ್ಷಣೆಯ ಹೊಣೆ ಹೊತ್ತಿರುತ್ತಾರೆ. ನಿಯೋಜಿತ ಅಧಿಕಾರಿಗಳು ಸ್ಥಳೀಯರೊಂದಿಗೆ ಚರ್ಚೆ ನಡೆಸಿ ಅಗತ್ಯವಿರುವ ಸೌಲಭ್ಯದ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಜಿಲ್ಲಾಡಳಿತಕ್ಕೆ ನೀಡುತ್ತಾರೆ. ಉದಾಹರಣೆಗೆ ಒಂದು ಕಿಮೀ ಕಡಲತೀರವಿದ್ದರೆ ಅಲ್ಲಿ ಎಷ್ಟು ಕಡೆ ಅಪಾಯಕಾರಿ ಜಾಗವಿದೆ? ಭದ್ರತೆಗೆ ಎಷ್ಟು ಜನರು ಬೇಕು? ಪ್ರವಾಸಿಗರು ಅಪಾಯಕ್ಕೆ ಸಿಲುಕಿದರೆ ಅವರ ರಕ್ಷಣೆಗೆ ಯಾವ ರೀತಿ ಸಾಧನ ಸಲಕರಣೆ ಬೇಕು ಎನ್ನುವುದನ್ನು ಸರ್ವೆ ನಡೆಸಲಿದ್ದಾರೆ. ಮುಂದಿನ ವಾರದಲ್ಲಿ ಸರ್ವೆ ಕಾರ್ಯ ಪೂರ್ಣಗೊಳಿಸಿ ವರದಿ ಜಿಲ್ಲಾಧಿಕಾರಿಗೆ ನೀಡಲಿದ್ದು, ತಿಂಗಳ ಒಳಗೆ ಟೆಂಡರ್ ಪ್ರಕ್ರಿಯೆ ಮುಗಿಯುವ ಸಾಧ್ಯತೆಯಿದೆ.

ಸಮಿತಿ ರಚನೆ: ಜಿಲ್ಲೆಯ ಕಡಲತೀರಗಳಲ್ಲಿ ಈಗಾಗಲೆ ಲೈಫ್‌ಗಾರ್ಡ್ ಒಳಗೊಂಡು ಅಗತ್ಯವಿರುವ ಸೌಕರ್ಯ ಒದಗಿಸಲಾಗಿದೆ. ಆದರೂ ಜನರ ಸುರಕ್ಷತೆಗೆ ಮತ್ತಷ್ಟು ವ್ಯವಸ್ಥೆಯಾಗಬೇಕು ಎನ್ನುವ ಉದ್ದೇಶದಿಂದ ಪ್ರವಾಸಿಗರ ರಕ್ಷಣೆಗೆ ಅಗತ್ಯವಿರುವ ಮೂಲ ಸಾಧನ ಸಲಕರಣೆ ಬಗ್ಗೆ ಸರ್ವೆ ಮಾಡಲು ವಿವಿಧ ಇಲಾಖೆ ಅಧಿಕಾರಿಗಳ ಸಮಿತಿ ರಚನೆ ಮಾಡಲಾಗಿದೆ. ಅವರ ವರದಿ ಆಧರಿಸಿ ಅಗತ್ಯವಿರುವ ಸಲಕರಣೆ ಪೂರೈಕೆಗೆ ಟೆಂಡರ್ ಕರೆಯಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದರು.