ಸಾರಾಂಶ
ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗಾಗಿ ಬಿಬಿಎಂಪಿ 40 ಕಿ.ಮೀ ಉದ್ದದ ಸುರಂಗ ರಸ್ತೆ, 40 ಕಿ.ಮೀ ಉದ್ದದ ರೈಲ್ ಕಂ ಮೆಟ್ರೋ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ, 109 ಕಿ.ಮೀ ಉದ್ದದ ಮೇಲ್ಸೇತುವೆಗಳ ನಿರ್ಮಾಣ ಸೇರಿ ಮತ್ತಿತರ ಯೋಜನೆಗಳನ್ನೊಳಗೊಂಡ ವಿವರ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಿದೆ.
ಬೆಂಗಳೂರು : ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗಾಗಿ ಬಿಬಿಎಂಪಿ 40 ಕಿ.ಮೀ ಉದ್ದದ ಸುರಂಗ ರಸ್ತೆ, 40 ಕಿ.ಮೀ ಉದ್ದದ ರೈಲ್ ಕಂ ಮೆಟ್ರೋ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ, 109 ಕಿ.ಮೀ ಉದ್ದದ ಮೇಲ್ಸೇತುವೆಗಳ ನಿರ್ಮಾಣ ಸೇರಿ ಮತ್ತಿತರ ಯೋಜನೆಗಳನ್ನೊಳಗೊಂಡ ವಿವರ ಕಾರ್ಯಸಾಧ್ಯತಾ ವರದಿ (ಡಿಎಫ್‌ಆರ್) ಸಿದ್ಧಪಡಿಸಿದೆ.
ನಗರದ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗಾಗಿ ಸೂಕ್ತ ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ ಮತ್ತಿತರ ಕ್ರಮಗಳನ್ನು ಕೈಗೊಳ್ಳುವ ಕುರಿತಂತೆ ದೆಹಲಿ ಮೂಲದ ಖಾಸಗಿ ಸಂಸ್ಥೆ ಮೂಲಕ ಬಿಬಿಎಂಪಿ ಡಿಎಫ್‌ಆರ್ ಸಿದ್ಧಪಡಿಸಿದೆ. ಈ ಡಿಎಫ್‌ಆರ್‌ನಲ್ಲಿ ನಗರದಲ್ಲಿ ಯಾವೆಲ್ಲ ಭಾಗದಲ್ಲಿ ಮೇಲ್ಸೇತುವೆ ನಿರ್ಮಿಸಬೇಕು, ಟನಲ್ ರಸ್ತೆಯ ವಿನ್ಯಾಸ ಯಾವ ರೀತಿಯಲ್ಲಿರಬೇಕು ಎಂಬುದೂ ಸೇರಿದಂತೆ ಹಲವು ಯೋಜನೆಗಳನ್ನು ವಿವರಿಸಲಾಗಿದೆ. ಸದ್ಯ ಡಿಎಫ್‌ಆರ್‌ನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರಿಂದ ಅದರ ಕುರಿತು ಅಭಿಪ್ರಾಯ ಪಡೆದು ನಂತರ ಅಂತಿಮ ಡಿಎಫ್‌ಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲು ಬಿಬಿಎಂಪಿ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಹಳೇ ಹೆದ್ದಾರಿಗಳಿಗೆ ಸುಗಮ ಸಂಪರ್ಕ ಕಲ್ಪಿಸಲು ಕ್ರಮ:
ಡಿಎಫ್‌ಆರ್‌ನಲ್ಲಿರುವಂತೆ ಬೆಂಗಳೂರು ನಗರ ಸಂಪರ್ಕಿಸುವ ಹಳೇ ಹೆದ್ದಾರಿಗಳಿಗೆ ಸುಗಮವಾಗಿ ವಾಹನ ಸಂಪರ್ಕ ಕಲ್ಪಿಸುವ ಉದ್ದೇಶದೊಂದಿಗೆ ಯೋಜನೆಗಳನ್ನು ವಿವರಿಸಲಾಗಿದೆ. ಪ್ರಮುಖವಾಗಿ ಬಳ್ಳಾರಿ ರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆ, ಹಳೇ ಮದ್ರಾಸು ರಸ್ತೆಗಳಿಗೆ ವಾಹನಗಳು ಸುಲಭವಾಗಿ ತೆರಳುವುದು ಹಾಗು ಅಲ್ಲಿಂದ ನಗರದ ಹೊರಭಾಗಕ್ಕೆ ವಾಹನಗಳ ಸುಗಮ ಸಂಚಾರಕ್ಕೆ ಅನುವಾಗುವಂತೆ ಕೆಳ ಸೇತುವೆ, ಮೇಲ್ಸೇತುವೆಗಳ ನಿರ್ಮಾಣ ಮಾಡಬೇಕು ಎಂದು ತಿಳಿಸಲಾಗಿದೆ.
ಪ್ಲಸ್ ಆಕಾರದಲ್ಲಿ ಸುರಂಗ ರಸ್ತೆ ನಿರ್ಮಾಣ:
ನಗರದ ಸಂಚಾರ ದಟ್ಟಣೆ ನಿವಾರಣೆಗಾಗಿ ಈಗಾಗಲೇ ಸುರಂಗ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಡಿಎಫ್‌ಆರ್‌ನಲ್ಲಿ ಸುರಂಗ ರಸ್ತೆಯನ್ನು ಪ್ಲಸ್ ಆಕಾರದಲ್ಲಿ ಅಂದರೆ ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ದಿಕ್ಕುಗಳ ಮಾರ್ಗ ಸಂಪರ್ಕಿಸುವಂತೆ ನಿರ್ಮಿಸಬೇಕು ಎಂದು ತಿಳಿಸಲಾಗಿದೆ. ಒಟ್ಟಾರೆ 40 ಕಿ.ಮೀ ಉದ್ದದ ಸುರಂಗ ರಸ್ತೆ ನಿರ್ಮಾಣಕ್ಕೂ ಸೂಚಿಸಲಾಗಿದೆ.
ಅದರೊಂದಿಗೆ ಸದ್ಯ ಇರುವ ರಾಗಿಗುಡ್ಡದಿಂದ ಕೇಂದ್ರ ರೇಷ್ಮೇ ಮಂಡಳಿವರೆಗಿನ ಮೆಟ್ರೋ ರೈಲು ಕಂ ರಸ್ತೆ ಮಾರ್ಗದ ಡಬ್ಬಲ್ ಡೆಕ್ಕರ್ ಮೇಲ್ಸೇತುವೆಯನ್ನು ಮತ್ತಷ್ಟು ಹೆಚ್ಚಿಸುವಂತೆ ಡಿಎಫ್‌ಆರ್‌ನಲ್ಲಿ ತಿಳಿಸಲಾಗಿದೆ. ಒಟ್ಟಾರೆ 40 ಕಿಮೀ ಉದ್ದದ ಡಬ್ಬಲ್ ಡೆಕ್ಕರ್ ರಸ್ತೆ ಮತ್ತು ಮೆಟ್ರೋ ಮಾರ್ಗ ನಿರ್ಮಿಸುವಂತೆಯೂ ಸೂಚಿಸಲಾಗಿದೆ. ಜತೆಗೆ ನಗರದ ವಿವಿಧ ಜಂಕ್ಷನ್ ಮತ್ತು ರಸ್ತೆಗಳಲ್ಲಿ 109 ಕಿ.ಮೀ ಉದ್ದದ ಮೆಲ್ಸೇತುವೆಗಳ ನಿರ್ಮಾಣಕ್ಕೂ ಪ್ರಸ್ತಾಪಿಸಲಾಗಿದೆ.
ಈ 3 ಯೋಜನೆಗಳೂ ಸೇರಿ ಮತ್ತಿತರ ಯೋಜನೆಗಳಿಗಾಗಿ ಅಂದಾಜು ₹54 ಸಾವಿರ ಕೋಟಿಗೂ ಹೆಚ್ಚಿನ ಮೊತ್ತ ಅಗತ್ಯವಿದೆ ಎಂದೂ ಡಿಎಫ್‌ಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಅದರಲ್ಲಿ ಸುರಂಗ ರಸ್ತೆಗಾಗಿಯೇ ₹40 ಸಾವಿರ ಕೋಟಿ ವೆಚ್ಚವಾಗಲಿದ್ದು, ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ಅಡಿಯಲ್ಲಿ ಅನುಷ್ಠಾನಗೊಳಿಸುವುದು ಬಿಬಿಎಂಪಿ ಯೋಜನೆಯಾಗಿದೆ. ಅದರಲ್ಲಿ ಬಿಬಿಎಂಪಿ ಅಥವಾ ಸರ್ಕಾರ ₹14 ಸಾವಿರ ಕೋಟಿ ನೀಡಲಿದ್ದರೆ, ಉಳಿದ ₹26 ಸಾವಿರ ಕೋಟಿಗಳನ್ನು ಖಾಸಗಿ ಸಂಸ್ಥೆಗಳಿಂದ ಪಡೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಯೋಜಿತ ನಿರ್ವಹಣಾ ಯೋಜನೆ ಜಾರಿ:
ಬೆಂಗಳೂರಿನಲ್ಲಿನ ಸಮೂಹ ಸಾರಿಗೆ ಮತ್ತು ಖಾಸಗಿ ವಾಹನಗಳ ಕುರಿತಂತೆ ಅಧ್ಯಯನ ನಡೆಸಿ ದೆಹಲಿ ಮೂಲದ ಸಂಸ್ಥೆ ಡಿಎಫ್‌ಆರ್ ಸಿದ್ಧಪಡಿಸಿದೆ. ಅದರಲ್ಲೂ ಯಾವ ರಸ್ತೆಯಲ್ಲಿ ಎಷ್ಟು ಪ್ರಮಾಣದ ಸಮೂಹ ಸಾರಿಗೆ, ಖಾಸಗಿ ವಾಹನಗಳು ಸಂಚರಿಸುತ್ತವೆ, ಯಾವ ಸಮಯದಲ್ಲಿ ಎಷ್ಟು ವಾಹನಗಳು ಓಡಾಡುತ್ತವೆ ಎಂಬುದು ಸೇರಿ ಮತ್ತಿತರ ಅಂಶಗಳ ಅಧ್ಯಯನ ನಡೆಸಿ ಸಮೂಹ ಸಾರಿಗೆ ಬಳಕೆಗೆ ಒತ್ತು ನೀಡುವ ಅಂಶಗಳನ್ನು ಉಲ್ಲೇಖಿಸಿದೆ. ಸಮೂಹ ಸಾರಿಗೆ ಬಳಕೆ ಹೆಚ್ಚಿಸಲು ಸಂಯೋಜಿತ ನಿರ್ವಹಣಾ ಯೋಜನೆ ಜಾರಿ ಮಾಡಬೇಕು. ಅದರಂತೆ ಮೆಟ್ರೋ ಮಾದರಿಯ ಸಮೂಹ ಸಾರಿಗೆಯಲ್ಲಿ ಪ್ರಯಾಣಿಸುವವರಿಗೆ ಫೀಡರ್ ಸೇವೆಗಳನ್ನು ನೀಡಬೇಕು ಎಂಬ ಅಂಶವನ್ನು ತಿಳಿಸಲಾಗಿದೆ.
ಯಾವೆಲ್ಲ ಪ್ರಮುಖ ಯೋಜನೆಗಳ ಅನುಷ್ಠಾನ:
*ಕೋಣನಕುಂಟೆ ಕ್ರಾಸ್‌ನಿಂದ ಬನಶಂಕರಿವರೆಗೂ ಕೆಳ ಮತ್ತು ಮೇಲ್ಸೇತುವೆಗಳ ನಿರ್ಮಾಣ
*ಆನಂದರಾವ್ ವೃತ್ತದ ಬಳಿಯ ಮೇಲ್ಸೇತುವೆ ಕೆ.ಆರ್.ವೃತ್ತದವರೆಗೆ ವಿಸ್ತರಣೆ
*ಕನಕಪುರ ರಸ್ತೆಯ ಆನಂದ್‌ಭವನ, ರಘುವನಹಳ್ಳಿವರೆಗೆ ಮೇಲ್ಸೇತುವೆ ನಿರ್ಮಾಣ*ಮಡಿವಾಳ ಕೆಳಸೇತುವೆಯನ್ನು ಸಂಚಾರ ಪೊಲೀಸ್ ಠಾಣೆ ಜಂಕ್ಷನ್‌ವರೆಗೆ ವಿಸ್ತರಣೆ
* ಹೊಸೂರು ರಸ್ತೆಯಿಂದ ಶೋಲೆ ವೃತ್ತದವರೆಗೆ ಎಲಿವೇಟೆಡ್ ಕಾರಿಡಾರ್
*ಮೈಸೂರು ರಸ್ತೆಯ ಸಿರ್ಸಿ ವೃತ್ತದಿಂದ ನಾಯಂಡಹಳ್ಳಿವರೆಗೂ ಎಲಿವೇಟೆಡ್ ಕಾರಿಡಾರ್*ಹಳೇ ಮದ್ರಾಸ್ ರಸ್ತೆಯಿಂದ ವಿವೇಕಾನಂದ ಮೆಟ್ರೋ ನಿಲ್ದಾಣದವರೆಗೆ ಎಲಿವೇಟೆಡ್ ಕಾರಿಡಾರ್*ನಾಗವಾರ ಜಂಕ್ಷನ್‌ನಿಂದ ರಾಮಕೃಷ್ಣ ಹೆಗಡೆ ನಗರ ಜಂಕ್ಷನ್‌ವರೆಗೆ ಎಲಿವೇಟೆಡ್ ಕಾರಿಡಾರ್
*ಹೊರವರ್ತುಲ ರಸ್ತೆ, ಹೆಣ್ಣೂರು ಮುಖ್ಯರಸ್ತೆ, ಬಾಗಲೂರು ಜಂಕ್ಷನ್‌ವರೆಗೂ ಲಿಂಕ್ ರಸ್ತೆಗಳ ನಿರ್ಮಾಣ*ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಯಲಹಂಕ ನವನಗರದವರೆಗೆ ಎಲಿವೇಟೆಡ್ ಕಾರಿಡಾರ್
*ನಾಗವಾರ ಜಂಕ್ಷನ್‌ನಿಂದ ಮೊದಲಿಯಾರ್ ರಸ್ತೆ ಮೂಲಕ ಟ್ಯಾನರಿ ರಸ್ತೆವರೆಗೆ ಎಲಿವೇಟೆಡ್ ಕಾರಿಡಾರ್*ಪಶ್ಚಿಮ ಕಾರ್ಡ್ ರಸ್ತೆಯಿಂದ ರಿಂಗ್ ರಸ್ತೆವರೆಗೆ ಎಲಿವೇಟೆಡ್ ಕಾರಿಡಾರ್
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ಮೇರೆಗೆ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಡಿಎಫ್‌ಆರ್ ಸಿದ್ಧಪಡಿಸಲಾಗಿದೆ. ಅದರಂತೆ 40 ಕಿ.ಮೀ ಉದ್ದದ ಸುರಂಗ ರಸ್ತೆ, 40 ಕಿಮೀ ಉದ್ದದ ರೈಲ್ ಕಂ ಮೆಟ್ರೋ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ, 109 ಕಿಮೀ ಉದ್ದದ ಮೇಲ್ಸೇತುವೆಗಳ ನಿರ್ಮಾಣ ಸೇರಿ ಮತ್ತಿತರ ಯೋಜನೆಗಳ ಅನುಷ್ಠಾನಕ್ಕೆ ಡಿಎಫ್‌ಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಅದರ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದ್ದು, ಅದಾದ ನಂತರ ಡಿಎಫ್‌ಆರ್ ಅಂತಿಮಗೊಳಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು.
ಬಿ.ಎಸ್. ಪ್ರಹ್ಲಾದ್ ಬಿಬಿಎಂಪಿ ಪ್ರಧಾನ ಎಂಜಿನಿಯರ್