ಸಾರಾಂಶ
ಹಾವೇರಿ: ಹೋಳಿ ಹಬ್ಬದ ಪ್ರಯುಕ್ತ ನಗರದಲ್ಲಿ ಮಾ. 14ರಂದು ಸಂಜೆ 6 ಗಂಟೆಗೆ ಪ್ರಯಾಗರಾಜ್ ಮಹಾಕುಂಭಮೇಳ ಮರುಕಲ್ಪನೆಯ ಬೃಹತ್ ಸೋಗಿನ ಮೆರವಣಿಗೆ ನಡೆಯಲಿದೆ ಎಂದು ಹೋಳಿ ಹಬ್ಬದ ಆಚರಣಾ ಸಮಿತಿ ಅಧ್ಯಕ್ಷ ವಿಜಯಕುಮಾರ ಚಿನ್ನಿಕಟ್ಟಿ ತಿಳಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬಾಗಲಕೋಟೆ ಹೊರತುಪಡಿಸಿದರೆ ಹಾವೇರಿಯಲ್ಲಿ ವಿಜೃಂಭಣೆಯಿಂದ ಹೋಳಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಮರಿಕಲ್ಯಾಣ ಖ್ಯಾತಿಯ ಹಾವೇರಿ ನಗರದಲ್ಲಿ ಮಾ. 15ರಂದು ರಂಗಪಂಚಮಿ ನಡೆಯಲಿದೆ. ಈ ಸಲದ ಹೋಳಿ ಹಬ್ಬವನ್ನು ವಿಶೇಷ ಹಾಗೂ ವಿನೂತನವಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಯಾಗರಾಜ್‌ನಲ್ಲಿ ನಡೆದ ಮಹಾ ಕುಂಭಮೇಳ ಮಾದರಿಯ ದೃಶ್ಯಗಳನ್ನು ಮರುಸೃಷ್ಟಿ ಮಾಡಲು ತಯಾರಿ ನಡೆಸಲಾಗಿದೆ. ಕಾರ್ಯಕ್ರಮಕ್ಕೆ ನಗರದ ಜನತೆ, ಸಂಘ ಸಂಸ್ಥೆಗಳು ಸಹಕಾರ ನೀಡಬೇಕು ಎಂದರು.ಮಾ. 14ರಂದು ಸಂಜೆ ನಡೆಯುವ ಬೃಹತ್ ಮೆರವಣಿಗೆಯಲ್ಲಿ 2 ಆನೆ, ನಾಲ್ಕು ಒಂಟೆ, ಕುದುರೆಗಳು ಸೇರಿದಂತೆ ಅಘೋರಿಗಳು, ನಾಗಾ ಸಾಧುಗಳ ವೇಷಧಾರಿಗಳು ಮೆರವಣಿಗೆಯಲ್ಲಿ ಇರಲಿದ್ದಾರೆ. ಮಹಾಶಿವನ ಮೂರ್ತಿ, ಹಿಮ ಶಿವಲಿಂಗದಲ್ಲಿ ಮೂಡಿದ ಶಿವ ಮತ್ತು ತಪಸ್ವಿಗಳು, ಟ್ರ್ಯಾಕ್ಟರ್ ಬಾಬಾಗಳು, ಮುಳ್ಳಿನ ಮೇಲೆ ಕುಳಿತ ನಾಗಾಸಾಧು, ಯಮ ಬಾಬಾ, ರುದ್ರಾಕ್ಷಿ ಬಾಬಾಗಳು ಪಾಲ್ಗೊಳ್ಳಲಿದ್ದಾರೆ. ಕೋಣದ ಮೇಲೆ ಕುಳಿತ ನಾಗಾಸಾಧು, ನಂದಿ ಮೇಲೆ, ಕಿನ್ನರಿ ಜೋಗಿ ಮಾತಾ, ಬೆಂಕಿ ಉಗುಳುವ ನಾಗಾಸಾಧುಗಳು, ಮೊನಾಲಿಸಾ ಮಾದರಿ ಹೀಗೆ ಸುಮಾರು 60ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳಲಿದ್ದಾರೆ. ನಗರ, ಹಾವೇರಿ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಗಳಿಂದ ಕಲಾವಿದರು ಭಾಗವಹಿಸಿ ಮಹಾ ಕುಂಭಮೇಳದ ಮರುಕಲ್ಪನೆಯ ಮೆರುಗನ್ನು ಹೆಚ್ಚಿಸಲಿದ್ದಾರೆ ಎಂದರು.ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ ಮಾತನಾಡಿ, ಮಾ. 14ರಂದು ಬೆಳಗ್ಗೆ ಹಳೇ ಚಾವಡಿ ಬಳಿ ಸರ್ಕಾರಿ ಕಾಮಣ್ಣನನ್ನು ಪ್ರತಿಷ್ಠಾಪಿಸಲಾಗುವುದು. ಸಂಜೆ ಮಹಾಕುಂಭ ಮೇಳದ ಭವ್ಯ ಮೆರವಣಿಗೆ ನಡೆಯಲಿದೆ. ಮಾ. 15ರ ನಸುಕಿನ ಜಾವ ಕಾಮದಹನ ನಡೆಯಲಿದೆ. ಅಲ್ಲಿಂದ ಸಾಂಪ್ರದಾಯಿಕವಾಗಿ ಕಿಚ್ಚು ತೆಗೆದುಕೊಂಡು ಹೋಗಿ ವಿವಿಧೆಡೆ ಕಾಮದಹನ ನಡೆಯಲಿದೆ. ಮಧ್ಯಾಹ್ನದ ಬಳಿಕ ಅಡ್ಡಸೋಗಿನ ಮೆರವಣಿಗೆ ನಡೆಯಲಿದೆ ಎಂದರು.ನಗರಸಭೆ ಸದಸ್ಯ ಶಿವಯೋಗಿ ಹುಲಿಕಂತಿಮಠ, ಕರಬಸಪ್ಪ ಹಲಗಣ್ಣವರ, ಉಡಚಪ್ಪ ಮಾಳಗಿ, ರಮೇಶ ಆನವಟ್ಟಿ, ನಾಗಯ್ಯ ಹಿರೇಮಠ, ವಿರುಪಾಕ್ಷಪ್ಪ ಹತ್ತಿಮತ್ತೂರ, ಶಂಭು ಹತ್ತಿ, ವಿಜಯಕುಮಾರ ಕೂಡ್ಲಪ್ಪನವರ, ಗೂರಪ್ಪ ಸೀಮಿಕೆರಿ, ಪ್ರಭು ಹಿಟ್ನಳ್ಳಿ, ಪ್ರಕಾಶ ಉಜ್ಜಿನಿಕೊಪ್ಪ, ಶಿವರಾಜ ಮತ್ತಿಹಳ್ಳಿ, ಅಶೋಕ ಮರೆಣ್ಣವರ, ಹನುಮಂತಪ್ಪ ದೊಡ್ಡತಳವಾರ, ವೆಂಕಟೇಶ ದೈವಜ್ಞ, ಬಸವರಾಜ ಹಲಗಣ್ಣನವರ ಇದ್ದರು.ಮಠಾಧೀಶರಿಂದ ಮೆರವಣಿಗೆಗೆ ಚಾಲನೆನಗರದ ಅಕ್ಕಿಪೇಟೆ ಅರಳಿಮರದ(ಹರಸೂರ ಬಣ್ಣದಮಠ ಸಮೀಪ) ಬಳಿ ಮಾ. 14ರಂದು ಸಂಜೆ 6 ಗಂಟೆಗೆ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಅರಳಿಮರದಿಂದ ಶಿವಲಿಂಗನಗರ, ಕೆಸಿಸಿ ಬ್ಯಾಂಕ್ ಸಮೀಪ, ಯಾಲಕ್ಕಿ ಓಣಿ, ಪುರದ ಓಣಿ, ಚೌಡೇಶ್ವರಿ ಸರ್ಕಲ್, ಕುಂಬಾರ ಗಲ್ಲಿ, ಎಂ.ಜಿ. ರಸ್ತೆ, ಹೇರೂರ ಅಂಗಡಿ ಕೂಟ್, ಸುಭಾಷ ಸರ್ಕಲ್, ರೈತರ ಓಣಿ, ಎಂ.ಜಿ. ವೃತ್ತ ಸೇರಿದಂತೆ ವಿವಿಧೆಡೆ ಸಂಚರಿಸಿ ಮರಳಿ ಮೂಲ ಸ್ಥಳಕ್ಕೆ ಬಂದು ತಲುಪಲಿದೆ. ಮೆರವಣಿಗೆಗೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶ್ರೀಗಳು, ಗೌರಿಮಠದ ಶಿವಯೋಗಿ ಶಿವಾಚಾರ್ಯರು, ಹೊಸಮಠದ ಬಸವಶಾಂತಲಿಂಗ ಶ್ರೀಗಳು ಚಾಲನೆ ನೀಡಲಿದ್ದು, ಈ ವೇಳೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.