ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ನಗರದ ಕೋಟೆ ರಸ್ತೆಯಲ್ಲಿರುವ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಅದ್ಧೂರಿ ಮಹಾ ಶಿವರಾತ್ರಿ ಹಬ್ಬದ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ದೇವಸ್ಥಾನ ಜೀರ್ಣೋದ್ಧಾರ ಸೇವಾ ಟ್ರಸ್ಟ್ ಅಧ್ಯಕ್ಷ ಆರ್.ಎನ್.ಲೋಕೇಶ್ (ರಾಂಪುರ ರಾಜಣ್ಣ) ತಿಳಿಸಿದರು.ನಗರದ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.೨೬ ಬುಧವಾರದಂದು ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಕಾಶಿ ವಿಶ್ವನಾಥಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ ೬-೩೦ ಗಂಟೆಗೆ ಶ್ರೀ ಕಾಶಿ ವಿಶ್ವನಾಥಸ್ವಾಮಿಯವರಿಗೆ ಏಕ ದಶಾವರ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಅರ್ಚನೆ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಅಂದು ಮಧ್ಯಾಹ್ನ ೩.೩೦ಕ್ಕೆ ಮೊದಲ ಜಾವದ ಅಭಿಷೇಕ, ಪೂಜೆ, ಅರ್ಚನೆ ಮತ್ತು ವಿಶೇಷ ಅಲಂಕಾರ ನಂತರ ಸ್ವಾಮಿಯವರ ದರ್ಶನ ಪ್ರಾರಂಭವಾಗುತ್ತದೆ.
ಮಹಾಶಿವರಾತ್ರಿ ಹಬ್ಬದಂದು ಬೆಳಗಿನ ಜಾವ ೬-೩೦ಕ್ಕೆ ನಡೆಯುವ ರುದ್ರಾಭಿಷೇಕದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳು ೫೦೧ ರು. ನೀಡಿ, ರುದ್ರಾಭಿಷೇಕದಲ್ಲಿ ಭಾಗವಹಿಸಬಹುದು. ಫೆ.೨೭ರ ಗುರುವಾರ ಬೆಳಗ್ಗೆ ೭-೩೦ ಗಂಟೆಗೆ ಪ್ರತಿ ವರ್ಷದಂತೆ ಈ ವರ್ಷವೂ ಅನ್ನಸಂತರ್ಪಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಪ್ರತಿ ವರ್ಷವೂ ಸುಮಾರು ೧೫ ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸುತ್ತಿದ್ದರು. ಆದರೆ ಈ ಬಾರಿ ೨೦ ರಿಂದ ೨೫ ಸಾವಿರಕ್ಕೂ ಹೆಚ್ಚಿನ ಭಕ್ತಾದಿಗಳು ಆಗಮಿಸುತ್ತಾರೆ ಎನ್ನುವ ನಿರೀಕ್ಷೆ ಇದೆ ಎಂದರು.ದೇವರ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದರು.
ಸುಜೀಂದ್ರಬಾಬು ಮಾತನಾಡಿ, ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಬುಧವಾರ ರಾತ್ರಿಯಿಂದ ಬೆಳಗಿನ ಜಾವದವರೆಗೂ ಜೈ ಭುವನೇಶ್ವರಿ ಮಹಿಳಾ ಭಜನಾ ಮಂಡಳಿಯಿಂದ ನಾಮಸಂಕೀರ್ತನೆ, ಭಾರತ ವಿಕಾಸ ಪರಿಷತ್ತು ಮಹಿಳಾ ಭಜನಾ ಮಂಡಳಿ ಅವರಿಂದ ಶಿವಾನಂದ ಲಹರಿ, ನಾಮ ಸಂಕೀರ್ತನೆ, ರಜತಾದ್ರಿ ಮಹಿಳಾ ಭಜನಾ ಮಂಡಳಿ ಅವರಿಂದ ದೇವರ ನಾಮ, ಅಂಜನಾದ್ರಿ ಮಂಡಳಿ ನಾಮ ಸಂಕೀರ್ತನೆ, ಕಲ್ಪಶ್ರೀ ಫರ್ ಫಾರ್ಮಿಂಗ್ ಆರ್ಟ್ಸ್ ಸೆಂಟರ್ ಟ್ರಸ್ಟ್‌ನಿಂದ ಭರತ ನಾಟ್ಯ, ಕೂಚುಪುಡಿ, ಓಡಿಸ್ಸ್, ಕಥಕ್ ನೃತ್ಯ ಹಾಗೂ ಶಾಸ್ತ್ರೀಯ ಸಂಗೀತ, ಶಾರದ ನಾಗೇಶ್ ಮತ್ತು ತಂಡದಿಂದ ನಾಮ ಸಂಕೀರ್ತನೆ, ಸಾಯಿಬಾಬಾ ದೇವಸ್ಥಾನ ಮಕ್ಕಳಿಂದ ಭಜನೆ, ಕೆರೆಗೋಡು ಉಮೇಶ್ ಮತ್ತು ತಂಡದವರಿಂದ ಹರಿಕಥೆ ಜರುಗಲಿವೆ ಎಂದರು.ಟ್ರಸ್ಟಿನ ಉಪಾಧ್ಯಕ್ಷ ಡಿ.ಎಂ.ಮಂಜುನಾಥ್, ಕಾರ್ಯದರ್ಶಿ ಪುಟ್ಟಮಾದಯ್ಯ, ಖಜಾಂಚಿ ಪುಟ್ಟಸ್ವಾಮಿ, ಅರ್ಚಕರಾದ ಎಸ್.ಜಿ.ರಮೇಶ್, ಟ್ರಸ್ಟಿಗಳಾದ ಬಿ.ಶಿವಶಂಕರ್, ಎಂ.ಸುರೇಶ್, ಎಂ.ಶ್ಯಾಮ್‌ಸುಂದರ್, ತಮ್ಮಣ್ಣಗೌಡ, ಚಂದ್ರಶೇಖರ್, ಮಧು.ಪಿ. ಎಸ್.ಬಿ. ಕೃಷ್ಣ, ಯೋಗಲಿಂಗ್, ಸಿ.ಪಿ.ವಿದ್ಯಾಧರಜಟ್ಟಿ, ರವಿ ಉಪಸ್ಥಿತರಿದ್ದರು.