ಸಾರಾಂಶ
ಕಾರವಾರ: ಇಲ್ಲಿನ ಕಾಳಿ ನದಿಗೆ ನಿರ್ಮಿಸಲಾಗಿದ್ದ ಹಳೆಯ ಸೇತುವೆ ಕುಸಿದು ತಿಂಗಳು ಉರುಳಿದ್ದು, ನದಿಯಲ್ಲಿ ಇರುವ ಅವಶೇಷಗಳನ್ನು ತೆರವು ಮಾಡಲು ಮುಂಬೈ ಮೂಲದ ಬೃಹತ್ ಗಾತ್ರದ ಬಾರ್ಜ್ ಆಗಮಿಸಿ ನಗರದ ವಾಣಿಜ್ಯ ಬಂದರಿನಲ್ಲಿ ಲಂಗರು ಹಾಕಿದೆ. ಈ ಮೂಲಕ ಕುಸಿದು ಬಿದ್ದ ಸೇತುವೆಯ ಅವಶೇಷ ತೆರವು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದಶಕಗಳ ಹಿಂದೆ ಕಟ್ಟಲಾಗಿದ್ದ ಸೇತುವೆ ಕಳೆದ ಆ. ೭ರಂದು ತಡರಾತ್ರಿ ಕುಸಿದು ಬಿದ್ದಿತ್ತು. ಅದೃಷ್ಟವಶಾತ್ ಜೀವಪಾಯವಾಗಿರಲಿಲ್ಲ. ರಸ್ತೆ ಮಾರ್ಗದಲ್ಲಿ ಗೋವಾ ಕರ್ನಾಟಕ ಸಂಪರ್ಕಿಸಲು ಪ್ರಮುಖವಾಗಿತ್ತು. ಚತುಷ್ಪಥವಾಗಿರುವುದರಿಂದ ಮತ್ತೊಂದು ಸೇತುವೆಯ ಮೇಲೆ ವಾಹನಗಳ ಓಡಾಟ ನಡೆಯುತ್ತಿದೆ. ನೀರಿನಲ್ಲಿ ಬಿದ್ದ ಸೇತುವೆಯ ಭಾಗ ಹಾಗೂ ಕಾಂಕ್ರೀಟ್ ಸ್ಲ್ಯಾಬ್‌ಗಳನ್ನು ಹೊರತೆಗೆಯಲು ಮುಂಬೈ ಮೂಲದ ಬಾರ್ಜ್ ತರಿಸಲಾಗಿದೆ. ಕಳೆದ ಮೂರು ವರ್ಷದಿಂದ ಅರಗಾದ ನೌಕಾನೆಲೆಯಲ್ಲಿಯೇ ಈ ಬಾರ್ಜ್ ಕೆಲಸ ಮಾಡುತ್ತಿತ್ತು. ಅದನ್ನೇ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬಾರ್ಜಿನ ಮೇಲೆ ಸಾಕಷ್ಟು ಸ್ಥಳಾವಕಾಶವಿದ್ದು, ಕ್ರೇನ್ ಸೇರಿದಂತೆ ಸೇತುವೆ ಅವಶೇಷ ತೆರವು ಮಾಡಲು ಅಗತ್ಯವಿರುವ ಉಪಕರಣಗಳನ್ನು ಇಟ್ಟುಕೊಳ್ಳಬಹುದಾಗಿದೆ. ವಾಣಿಜ್ಯ ಬಂದರಿನಲ್ಲಿಯೇ ಕುಸಿದು ಬಿದ್ದ ಸೇತುವೆಯ ಬಿಡಿ ಭಾಗವನ್ನು(ಅವಶೇಷ) ತಾತ್ಕಾಲಿಕವಾಗಿ ಡಂಪ್ ಮಾಡಲು ಚಿಂತನೆ ಮಾಡಿದ್ದು, ಬಳಿಕ ಬೇರೆಡೆ ಸ್ಥಳಾಂತರವನ್ನು ರಾಷ್ಟ್ರೀಯ ಹೆದ್ದಾರಿ ೬೬ರ ಚತುಷ್ಪಥ ಕಾಮಗಾರಿ ಗುತ್ತಿಗೆ ಪಡೆದ ಕಂಪನಿ ಮಾಡಲಿದೆ. ಹಗಲು- ರಾತ್ರಿ ಕೆಲಸ ಮಾಡಿದರೂ ಆರರಿಂದ ಏಳು ತಿಂಗಳು ತೆರವು ಮಾಡಲು ಬೇಕು ಎಂದು ಅಂದಾಜಿಸಲಾಗಿದೆ. ಜಿಲ್ಲಾಡಳಿತವು ಕಾರ್ಯಾಚರ|ಣೆಯ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು, ಲೈಟಿಂಗ್ ವ್ಯವಸ್ಥೆ ಮಾಡಿಕೊಳ್ಳಲು ಒಳಗೊಂಡು ವಿವಿಧ ಷರತ್ತುಗಳನ್ನು ವಿಧಿಸಿದೆ. ಸೇತುವೆಯ ಕೆಲವು ಭಾಗ ಮಾತ್ರ ಜೆಸಿಬಿ ಮೂಲಕ ತೆರವು ಮಾಡಲಾಗುತ್ತಿದೆ. ಬಾರ್ಜ್ ನಿಲುಗಡೆಗೆ ಕಾಮಗಾರಿಯ ಸ್ಥಳದಲ್ಲಿಯೇ ಜಟ್ಟಿ ಕೂಡ ನಿರ್ಮಾಣ ಮಾಡಲಾಗಿದೆ. ಸದ್ಯ ಬಾರ್ಜ್ ಸಾಗುವ ದಾರಿ ಹಾಗೂ ಕಾಮಗಾರಿಯ ರೂಪುರೇಷೆಯನ್ನು ಐಆರ್‌ಬಿ ಕಂಪನಿ ನೀಡಬೇಕಿದೆ. ಜತೆಗೆ ಅಗತ್ಯ ಯಂತ್ರೋಪಕರಣಗಳು ಬಂದ ಬಳಿಕವೇ ಕಾಮಗಾರಿ ಆರಂಭವಾಗಲಿದೆ.ಗೋವಾದಿಂದ ತರಲಾಗುತ್ತಿದ್ದ ಅಕ್ರಮ ಮದ್ಯ ವಶ
ಜೋಯಿಡಾ: ತಾಲೂಕಿನ ಅನಮೋಡ ಅಬಕಾರಿ ತನಿಖಾ ಠಾಣೆಯ ಅಧಿಕಾರಿಗಳು, ಸಿಬ್ಬಂದಿ, ಅಕ್ರಮವಾಗಿ ಗೋವಾದಿಂದ ತರಲಾಗುತ್ತಿದ್ದ ಮದ್ಯ ವಶಪಡಿಸಿಕೊಂಡು ಕ್ರಮ ಜರುಗಿಸಿದ್ದಾರೆ. ಗೂಡ್ಸ್ ಕ್ಯಾರಿಯರ್ ವಾಹನದಲ್ಲಿ ವಿವಿಧ ಮಾದರಿಯ ₹19 ಸಾವಿರ ಮೌಲ್ಯದ ಅಕ್ರಮ ಮದ್ಯ ಮತ್ತು ₹3 ಲಕ್ಷದ ವಾಹನವನ್ನು ವಶಪಡಿಸಿಕೊಂಡು ಆರೋಪಿ ಜಮೀರ್ ನಿಜಾಮುದ್ದೀನ್ ಶಿರಹಟ್ಟಿ ಹಾವೇರಿ ಈತನ ಮೇಲೆ ಕ್ರಮ ಜರುಗಿಸಿದ್ದಾರೆ.