ರುದ್ರಭೂಮಿ ಇಲ್ಲದೇ ಗ್ರಾಮದ ಮಧ್ಯೆಯೇ ಶವಸಂಸ್ಕಾರಕ್ಕೆ ಸಿದ್ಧತೆ

| Published : Jul 15 2025, 01:00 AM IST

ರುದ್ರಭೂಮಿ ಇಲ್ಲದೇ ಗ್ರಾಮದ ಮಧ್ಯೆಯೇ ಶವಸಂಸ್ಕಾರಕ್ಕೆ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಅಂತ್ಯಸಂಸ್ಕಾರಕ್ಕೆ ರುದ್ರಭೂಮಿ ಇಲ್ಲದೇ ಇರುವುದರಿಂದ ಆಕ್ರೋಶಗೊಂಡ ಕೊಪ್ಪಳ ತಾಲೂಕಿನ ಮಂಗಳಾಪುರ ಗ್ರಾಮಸ್ಥರು ಮೃತ ಮಹಿಳೆಯನ್ನು ಗ್ರಾಮದ ಮಧ್ಯದ ರಸ್ತೆಯಲ್ಲಿಯೇ ಸಂಸ್ಕಾರ ಮಾಡಲು (ಸುಡಲು) ಮುಂದಾದ ಘಟನೆ ಸೋಮವಾರ ನಡೆಯಿತು.

ಕೊಪ್ಪಳ:

ಅಂತ್ಯಸಂಸ್ಕಾರಕ್ಕೆ ರುದ್ರಭೂಮಿ ಇಲ್ಲದೇ ಇರುವುದರಿಂದ ಆಕ್ರೋಶಗೊಂಡ ತಾಲೂಕಿನ ಮಂಗಳಾಪುರ ಗ್ರಾಮಸ್ಥರು ಮೃತ ಮಹಿಳೆಯನ್ನು ಗ್ರಾಮದ ಮಧ್ಯದ ರಸ್ತೆಯಲ್ಲಿಯೇ ಸಂಸ್ಕಾರ ಮಾಡಲು (ಸುಡಲು) ಮುಂದಾದ ಘಟನೆ ಸೋಮವಾರ ನಡೆಯಿತು. ಬಳಿಕ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಸ್ಮಶಾನಕ್ಕೆ ತಾತ್ಕಾಲಿಕ ಜಾಗದ ವ್ಯವಸ್ಥೆ ಮಾಡಿದ ಬಳಿಕವೇ ಪ್ರತಿಭಟನೆ ಕೈಬಿಡಲಾಯಿತು.

ಗ್ರಾಮದ ಸಾವಂತ್ರೆಮ್ಮ ಮೆಳ್ಳಿಕೇರಿ (85) ಭಾನುವಾರ ರಾತ್ರಿ ನಿಧನರಾಗಿದ್ದರು. ಸೋಮವಾರ ಅಂತ್ಯಕ್ರಿಯೆ ಮಾಡಬೇಕಿತ್ತು. ಆದರೆ, ಸ್ಮಶಾನವಿಲ್ಲದೆ ಹಿಂದೂಗಳು ಆಕ್ರೋಶಗೊಂಡು ರಸ್ತೆ ಮಧ್ಯೆಯೇ ಕಟ್ಟಿಗೆ ಒಟ್ಟಿ ಸುಡಲು ಸಿದ್ಧತೆ ಮಾಡಿಕೊಂಡಿದ್ದರು.

ಆಗಿರುವುದೇನು?

ಇಷ್ಟು ದಿನ ಗ್ರಾಮದ ಖಬರಸ್ಥಾನ ಬಳಿಯೇ ಹಿಂದೂಗಳ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತಿತ್ತು. ಇದೀಗ ಖಬರಸ್ತಾನಕ್ಕೆ ಕಾಂಪೌಂಡ್ ಹಾಕಿದ್ದರಿಂದ ಅಂತ್ಯಸಂಸ್ಕಾರಕ್ಕೆ ತೊಂದರೆಯಾಗಿದೆ. ಈ ಜಾಗದ ಕುರಿತು ವಿವಾದವಿದ್ದು ಇಲ್ಲಿರುವ ಮಾರುತೇಶ್ವರ ದೇವಸ್ಥಾನ ಮುಚ್ಚಿಹಾಕಲಾಗಿದೆ ಎಂದು ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಇದರ ಮಧ್ಯೆ ವಿವಾದ ಇತ್ಯರ್ಥವಾಗಿದೆ ಎಂದು ಮುಸ್ಲಿಂರು ಖಬರಸ್ತಾನಕ್ಕೆ ಕಾಂಪೌಂಡ್ ಹಾಕಿದ್ದರಿಂದ ಹಿಂದೂಗಳಿಗೆ ಸಮಸ್ಯೆಯಾಗಿದೆ.

ಸಾವೆಂತ್ರಮ್ಮ ಮೆಳ್ಳಿಕೇರಿ (85) ನಿಧನವಾಗಿದ್ದು, ಆಕೆಯನ್ನು ಹೂಳುವುದಕ್ಕೆ ಜಾಗ ಇಲ್ಲವೆಂದು ಗ್ರಾಮಸ್ಥರೆಲ್ಲರೂ ಸೇರಿ ಗ್ರಾಮದ ಮಧ್ಯೆಯೇ ರಸ್ತೆಯಲ್ಲಿಯೇ ಶವಸಂಸ್ಕಾರ(ಸುಡಲು) ನಿರ್ಧರಿಸಿ, ರಸ್ತೆಯ ಮಧ್ಯೆಯೇ ಕಟ್ಟಿಗೆ ಒಟ್ಟಿ, ಸಿದ್ಧತೆ ಮಾಡಿಕೊಂಡು, ಪ್ರತಿಭಟನೆ ನಡೆಸಿದರು.

ತಾತ್ಕಾಲಿಕ ಇತ್ಯರ್ಥ:

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ತಹಸೀಲ್ದಾರ್‌ ವಿಠ್ಠಲ್ ಚೌಗಲಿ ಹಾಗೂ ಇತರೆ ಅಧಿಕಾರಿಗಳು, ಗ್ರಾಮದಲ್ಲಿ ಸ್ಮಶಾನಕ್ಕೆ ಶೀಘದಲ್ಲಿಯೇ ಜಾಗ ನೀಡಲಾಗುವುದು ಎಂದ ಭರವಸೆ ನೀಡಿದರು. ಜತೆಗೆ ಅಂತ್ಯಕ್ರಿಯೆಗೆ ಗ್ರಾಮದ ಹಳ್ಳದ ಬಳಿ ಜಾಗವನ್ನು ತಾತ್ಕಾಲಿಕವಾಗಿ ಗುರುತಿಸಿ ಸಮಸ್ಯೆ ನಿವಾರಿಸಿದರು.

ನಾವೇನು ಪಾಪ ಮಾಡಿದ್ದೇವೆ:

ಸ್ಮಶಾನ ಜಾಗದ ವಿವಾದ ನ್ಯಾಯಾಲಯದಲ್ಲಿ ಇರುವಾಗಲೇ ಖಬರಸ್ತಾನಕ್ಕೆ ಕಾಂಪೌಂಡ್ ಹಾಕಲು ಏಕೆ ಅವರಿಗೆ ಅವಕಾಶ ನೀಡಿದಿರಿ ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹಿಂದೂಗಳೇನು ಮನುಷ್ಯರಲ್ಲವೇ, ನಾವೇನು ಪಾಪ ಮಾಡಿದ್ದೇವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ನ್ಯಾಯಾಲಯದ ಆದೇಶವನ್ನು ತಂದುಕೊಟ್ಟಿದ್ದರಿಂದ ಅವರಿಗೆ ಕಾಂಪೌಂಡ್ ಕಟ್ಟಲು ಅವಕಾಶ ನೀಡಿದ್ದೇವೆ. ನಿಮ್ಮ ಬಳಿ ಇರುವ ದಾಖಲೆ ತಂದುತೋರಿಸಿ ಎಂದು ಹೇಳಿದರು.