ಅರಣ್ಯ ಇಲಾಖೆಗೆ ಸೇರಿದ ತಾಲೂಕಿನ ಸಿದ್ಧಾಪುರ ಗ್ರಾಮದ ಸುಮಾರು 44 ಎಕರೆ (ಬ ಖರಾಬ್) ಅರಣ್ಯ ಪ್ರದೇಶದಲ್ಲಿ ಬೆಳೆಸಲಾಗಿದ್ದ ಮರಗಿಡಗಳನ್ನು ಕಡಿದು ಭೂಮಿ ಸಾಗುವಳಿ ಮಾಡಲು ಮುಂದಾಗಿದ್ದ ಸ್ಥಳಕ್ಕೆ ಅರಣ್ಯಾಧಿಕಾರಿ ಲೋಕೇಶ ಚವ್ಹಾಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬ್ಯಾಡಗಿ: ಅರಣ್ಯ ಇಲಾಖೆಗೆ ಸೇರಿದ ತಾಲೂಕಿನ ಸಿದ್ಧಾಪುರ ಗ್ರಾಮದ ಸುಮಾರು 44 ಎಕರೆ (ಬ ಖರಾಬ್) ಅರಣ್ಯ ಪ್ರದೇಶದಲ್ಲಿ ಬೆಳೆಸಲಾಗಿದ್ದ ಮರಗಿಡಗಳನ್ನು ಕಡಿದು ಭೂಮಿ ಸಾಗುವಳಿ ಮಾಡಲು ಮುಂದಾಗಿದ್ದ ಸ್ಥಳಕ್ಕೆ ಅರಣ್ಯಾಧಿಕಾರಿ ಲೋಕೇಶ ಚವ್ಹಾಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಗ್ರಾಮದ ಜನರು ಲಿಖಿತ ಮನವಿಯೊಂದನ್ನು ಸಲ್ಲಿಸಿ, ಕಾಯ್ದಿಟ್ಟ ಅರಣ್ಯ ಪ್ರದೇಶಗಳ ಒತ್ತುವರಿ ಮಾಡಿ 8 ಜನರು ಅನಧಿಕೃತ ಸಾಗುವಳಿಗೆ ಮುಂದಾಗಿದ್ದು, ಮರಗಿಡಗಳನ್ನು ಕಡಿದು ಭೂಮಿಯನ್ನು ಸಾಗುವಳಿ ಮಾಡಲು ಮುಂದಾಗಿರುವ ವಿಷಯವನ್ನು ಗ್ರಾಮ ಆಡಳಿತಾಧಿಕಾರಿಗಳಿಗೆ ತಿಳಿಸಿದರಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಅರಣ್ಯ ಇಲಾಖೆ ಕಚೇರಿಗೆ ಅಗಮಿಸಿ, ಕೂಡಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು. ಅರಣ್ಯ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಗ್ರಾಮದ ಚನ್ನಬಸಪ್ಪ ಮಲ್ಲಾಪುರ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.ಅರಣ್ಯ ಇಲಾಖೆ ಭೂಮಿಯನ್ನು ಗ್ರಾಮದ ಜನರೇ ಹಗಲು ರಾತ್ರಿಯನ್ನದೇ ಕಾಯ್ದುಕೊಳ್ಳುತ್ತಿದ್ದೇವೆ. ಗ್ರಾಮಸ್ಥರಿಗೆ ಇರುವ ಕಾಳಜಿ ಅಧಿಕಾರಿಗಳಿಗೆ ಇಲ್ಲವೆನ್ನುವುದು ನೋವಿನ ಸಂಗತಿ. ಹೀಗಾಗಿ ಗ್ರಾಮಸ್ಥರ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಇಲ್ಲಿರುವ ಅರಣ್ಯವನ್ನು ರಕ್ಷಿಸಿ ಗ್ರಾಮಸ್ಥರಿಗೆ ಉಳಿಸಿಕೊಳ್ಳುವ ಕೆಲಸವಾಗಬೇಕಾಗಿದೆ ಎಂದು ಗ್ರಾಮದ ಅಜ್ಜಪ್ಪ ತಳವಾರ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಬಾಳಂಬೀಡ, ಪ್ರಕಾಶ ಕರೆಮ್ಮನವರ, ಬಸವರಾಜ ಹೊಸ್ಮನಿ, ಶಿವರುದ್ರಪ್ಪ ಮೂಲಿಕೇರಿ, ಅಜ್ಜಪ್ಪ ತಿಳವಳ್ಳಿ, ರಾಜು ಹುಗ್ಗಿ, ಮಂಜುನಾಥ ಹುಗ್ಗಿ, ಮೂಕಪ್ಪ ತಿಳವಳ್ಳಿ, ಶಿವನಗೌಡ ಹುಗ್ಗಿ, ಬಸವಂತಪ್ಪ ಹೊಸ್ಮನಿ, ನಾಗರಾಜ ಹುಗ್ಗಿ, ಹರೀಶ ಹೊಸ್ಮನಿ, ಜಯಪ್ಪ ತಿಳವಳ್ಳಿ, ಈರಪ್ಪ ಪುಟ್ಟಣ್ಣನವರ ಹಾಗೂ ಇನ್ನಿತರಿದ್ದರು.ಕಟ್ಟುನಿಟ್ಟಿನ ಕ್ರಮ ಎಚ್ಚರಿಕೆ: ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅರಣ್ಯಾಧಿಕಾರಿ ಲೋಕೇಶ ಚವ್ಹಾಣ, ಈ ಪ್ರದೇಶ ಅರಣ್ಯ ಇಲಾಖೆಗೆ ಸಂಬಂಧಿಸಿದ್ದ ಎನ್ನುವ ವಿಷಯವೇ ತಮ್ಮಿಂದ ತಿಳಿದು ಬಂದಿದೆ ಇದಕ್ಕೆ ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅದಾಗ್ಯೂ ಯಾರಾದರೂ ತಾಲೂಕಿನ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶಗಳನ್ನು ಒತ್ತುವರಿಗೆ ಮುಂದಾದಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಮೂಲಕ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.