ಸಾರಾಂಶ
ಮಡಿಕೇರಿ : ಇತಿಹಾಸ ಪ್ರಸಿದ್ಧ ವಿರಾಜಪೇಟೆ ಶ್ರೀ ಬಸವೇಶ್ವರ ದೇವಸ್ಥಾನ ಆಶ್ರಯದಲ್ಲಿ 2024 ನೇ ಸಾಲಿನ ಅದ್ಧೂರಿ ಗೌರಿ ಗಣೇಶೋತ್ಸವ ಆಚರಿಸಲಾಗುವುದು ಎಂದು ಗೌರಿ ಗಣೇಶ ಉತ್ಸವ ಸಮಿತಿ ಅಧ್ಯಕ್ಷ ಎನ್. ಗೋಪಾಲಕೃಷ್ಣ ಕಾಮತ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊಡಗನ್ನು ಆಳಿದ್ದ ದೊಡ್ಡ ವೀರ ರಾಜೇಂದ್ರ ಒಡೆಯರ್ 1792 ರಲ್ಲಿ ವಿರಾಜಪೇಟೆ ನಗರವನ್ನು ನಿರ್ಮಾಣ ಮಾಡಿದ್ದ ಸಂದರ್ಭ ಶ್ರೀ ಬಸವೇಶ್ವರ ದೇವಸ್ಥಾನವೂ ನಿರ್ಮಾಣವಾಗಿತ್ತು. ಅಂದಿನಿಂದಲೂ ಉದ್ಧೇಶಿತ ದೇವಸ್ಥಾನದಲ್ಲಿ ವರ್ಷಂ ಪ್ರತಿ ಭಕ್ತಿಭಾವದೊಂದಿಗೆ ವಿಜೃಂಭಣೆಯಿಂದ ಗೌರಿ ಗಣೇಶೋತ್ಸವವನ್ನು ಆಚರಿಸುತ್ತಾ ಬರುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.
ಗೌರಿ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಕೂರಿಸಿ ವಿರಾಜಪೇಟೆ ನಗರಾದ್ಯಂತ ಮೆರವಣಿಗೆ ಮಾಡುವುದು ವಿಶೇಷವಾಗಿದ್ದು ಮಂತರೆಯರು, ಕುಮಾರಿಯರು, ಮಹಿಳೆಯರು ಗೌರಮ್ಮನಿಗೆ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ ಎಂದರು.
ಪ್ರಸ್ತುತ ಸೆ. 6 ರಂದು ಗೌರಿ ಪಲ್ಲಕ್ಕಿ ಮೆರವಣಿಗೆ ಹಾಗೂ ಪ್ರತಿಷ್ಠಾಪನೆ, ಸೆ.7 ರಂದು ವಿನಾಯಕ ಪ್ರ ತಿಷ್ಠಾಪನೆ ಮತ್ತು ಸೆ. 8 ರಿಂದ ಸೆ.16 ರ ವರೆಗೆ ಮಧ್ಯಾಹ್ನ ಹಾಗೂ ರಾತ್ರಿ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸೆ. 8 ರಿಂದ ರಾತ್ರಿ 8 ಗಂಟೆಗೆ ನಿತ್ಯವೂ ಸಭಾ ಕಾರ್ಯಕ್ರಮ ಮತ್ತು ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶ್ರೀ ಬಸವೇಶ್ವರ ದೇವಸ್ಥಾನ ಹಾಗೂ ಎನ್.ವೆಂಕಟೇಶ್ ಕಾಮತ್ ಅವರ ನೇತೃತ್ವದಲ್ಲಿ ವಾಯ್ಸ್ಆಫ್ ವಿರಾಜಪೇಟೆ ಸಂಗೀತ ಸ್ಪರ್ಧೆ ಕಾರ್ಯಕ್ರಮ ಸೆ.15ರಂದು ಪೂರ್ವಾಹ್ನ 11 ಗಂಟೆಗೆ ಆರಂಭವಾಗಲಿದೆ. ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ನೆರವೇರಿಸಲಿದ್ದಾರೆ.
ಸ್ಪರ್ಧಾ ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ವಿರಾಜಪೇಟೆ ಮಹಾವೀರ ಮೆಡಿಕಲ್ಸ್ ಮಾಲೀಕರಾದ ಸಂಪತ್ ಕುಮಾರ್ (9008509929) ಅವರಿಂದ ಪಡೆದುಕೊಳ್ಳಬಹುದಾಗಿದೆ.
ಕಾರ್ಯಕ್ರಮದಲ್ಲಿ ಏನಾದರೂ ಬದಲಾವಣೆ ಇದ್ದಲ್ಲಿ ಮುಂಚಿತವಾಗಿ ತಿಳಿಸಲಾಗುವುದು ಎಂದು ಸ್ಪರ್ಧಾ ಕಾರ್ಯಕ್ರಮ ಹಾಗೂ ಹಬ್ಬದ ಉಸ್ತುವಾರಿ ವಹಿಸಿರುವ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯ ಹಿರಿಯ ನ್ಯಾಯವಾದಿ ಎನ್. ರವೀಂದ್ರ ನಾಥ್ ಕಾಮತ್ ತಿಳಿಸಿದ್ದಾರೆ.
ಸೆ.16 ರಂದು ಬಾಳುಗೋಡು ಫೆಡರೇಷನ್ ಆಫ್ ಕೊಡವ ಸಮಾಜ ಅಧ್ಯಕ್ಷ ಕಳ್ಳಿಚಂಡವಿಷ್ಣು ಕಾರ್ಯಪ್ಪ ಅವರಿಗೆ 2024 ನೇ ಸಾಲಿನ ‘ಬಸವಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಅಂದಿನ ಸಮಾರೋಪ ಕಾರ್ಯಕ್ರಮ ದಲ್ಲಿ ಮೈಸೂರು ಕೊಡಗು ಸಂಸದ ಯದುವೀರ್ ಒಡೆಯರ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ ಮತ್ತು ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಗೋಪಾಲಕೃಷ್ಣ ಕಾಮತ್ ತಿಳಿಸಿದ್ದಾರೆ.