ಹಬ್ಬದ ಹಿಂದಿನ ದಿನ ಬುಧವಾರ ಮಾರುಕಟ್ಟೆ ಜನಸಂದಣಿಯಿಂದ ಕೂಡಿತ್ತು. ಇನ್ನು ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ, ವೀರಭದ್ರೇಶ್ವರ, ಗಣೇಶ, ಶ್ರೀರಾಮ, ಆಂಜನೇಯ, ಅಮ್ಮನವರ ದೇವಾಲಯ, ಶಿವಾಲಯಗಳನ್ನು ಸ್ವಚ್ಛಗೊಳಿಸಿ ವಿಶೇಷ ಪೂಜೆಗೆ ಸಿದ್ಧತೆ ನಡೆಸಲಾಗಿತ್ತು.
ಕನ್ನಡಪ್ರಭ ವಾರ್ತೆ ದಾವಣಗೆರೆ
2026ರ ನೂತನ ವರ್ಷದ ಆರಂಭದ ಹಬ್ಬ ನ.15ರ ಗುರುವಾರ ಆಚರಿಸುವ ಸಂಕ್ರಾಂತಿ ಹಬ್ಬದ ಆಚರಣೆಗೆ ಎಲ್ಲೆಡೆ ಸಿದ್ಧತೆ ನಡೆದಿತ್ತು.ಹಬ್ಬದ ಹಿಂದಿನ ದಿನ ಬುಧವಾರ ಮಾರುಕಟ್ಟೆ ಜನಸಂದಣಿಯಿಂದ ಕೂಡಿತ್ತು. ಇನ್ನು ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ, ವೀರಭದ್ರೇಶ್ವರ, ಗಣೇಶ, ಶ್ರೀರಾಮ, ಆಂಜನೇಯ, ಅಮ್ಮನವರ ದೇವಾಲಯ, ಶಿವಾಲಯಗಳನ್ನು ಸ್ವಚ್ಛಗೊಳಿಸಿ ವಿಶೇಷ ಪೂಜೆಗೆ ಸಿದ್ಧತೆ ನಡೆಸಲಾಗಿತ್ತು.
ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಡಿದ್ದರೂ ಖರೀದಿಸುವವರು ಕಡಿಮೆ ಇರಲಿಲ್ಲ. ಹಬ್ಬದ ಖರೀದಿ ಜೋರಾಗಿ ನಡೆದಿತ್ತು. ಇಲ್ಲಿನ ಕೆ.ಆರ್.ಮಾರುಕಟ್ಟೆ, ಪಿ.ಜೆ.ಬಡಾವಣೆಯ ರಾಂ ಅಂಡ್ ಕೋ ಸರ್ಕಲ್, ಜಯದೇವ ಸರ್ಕಲ್, ನಿಟುವಳ್ಳಿ, ಗಡಿಯಾರ ಕಂಬ, ಎಂಸಿಸಿ ಎ ಮತ್ತು ಬಿ ಬ್ಲಾಕ್, ಸರಸ್ವತಿ ನಗರ, ಕಾಯಿಪೇಟೆ, ಹಳೇ ಬಸ್ ನಿಲ್ದಾಣದ ಬಳಿ, ಎಸ್.ನಿಜಲಿಂಗಪ್ಪ ಬಡಾವಣೆಯ ರಿಂಗ್ ರಸ್ತೆ, ಎವಿಕೆ ಕಾಲೇಜು ರಸ್ತೆ, ದೇವರಾಜ ಅರಸ್ ಬಡಾವಣೆ, ಅಶೋಕ ರಸ್ತೆ, ದೊಡ್ಡಪೇಟೆ, ಸೇರಿದಂತೆ ವಿವಿಧೆಡೆ ಪೂಜೆಗೆ ಹೂ, ಹಣ್ಣು, ಸಂಕ್ರಾಂತಿಗೆ ಮುಖ್ಯವಾಗಿ ಬೇಕಾಗಿರುವ ಕುಸುರೆಳ್ಳು, ಬೆಲ್ಲ, ಕೊಬ್ಬರಿ, ಶೇಂಗಾಬೀಜ, ಕಡ್ಲಿ, ಸಕ್ಕರೆ ಅಚ್ಚುಗಳು, ಕಬ್ಬಿನ ಕೋಲು, ಇತರೆ ಖರೀದಿ ನಡೆದಿತ್ತು.ಮಾರುಕಟ್ಟೆಯಲ್ಲಿ ಕುಸುರೆಳ್ಳು ಕೆ.ಜಿ.ಗೆ 160-200 ರು., ಎಳ್ಳು, ಬೆಲ್ಲ, ಶೇಂಗಾ, ಕಡ್ಲಿ ಕೊಬ್ಬರಿ ಮಿಕ್ಸ್ ಕೆ.ಜಿ.ಗೆ 240 ರು., ಸಕ್ಕರೆ ಅಚ್ಚು ಕೆ.ಜಿ.ಗೆ 160-200 ರು. ಇತ್ತು. ಜೀರಿಗೆ ಪೇಪರ್‌ಮೆಂಟ್, ಡೈಮೆಂಡ್ ಸಕ್ಕರೆ 200 ರು., ಕಬ್ಬು ಒಂದು ಕೋಲನ್ನು 60-80 ರು.ಗೆ ಮಾರಾಟ ಮಾಡುತ್ತಿದ್ದರು. ಸೇವಂತಿಗೆ, ಮಲ್ಲಿಗೆ, ಕನಕಾಂಬರಿ ಹೂವಿನ ದರ ಮಾತ್ರ ಕಡಿಮೆ ಇತ್ತು.
ಪ್ರೇಕ್ಷಣೀಯ ಸ್ಥಳ, ಪಾರ್ಕುಗಳಲ್ಲಿ ಊಟ:ಸಂಕ್ರಮಣದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು, ಮಕ್ಕಳು, ಸ್ನೇಹಿತರು ಸೇರಿಕೊಂಡು ಮನೆಯಲ್ಲಿ ರೊಟ್ಟಿ, ಬುತ್ತಿ, ಸವಿ ಸವಿಯಾದ ತಿನಿಸುಗಳನ್ನು ಕಟ್ಟಿಕೊಂಡು ಇಲ್ಲಿನ ಗ್ಲಾಸ್ ಹೌಸ್, ಟಿವಿ ಸ್ಟೇಷನ್ ಕೆರೆ, ಉದ್ಯಾನಗಳು, ತೋಟ, ಪಾರ್ಕು, ಪ್ರವಾಸಿ ತಾಣಗಳಾದ ಹರಿಹರದ ಹೊಳೆ, ಚನ್ನಗಿರಿ ಸಂತೆ ಹೊಂಡ, ಆನಗೋಡು ಪಾರ್ಕ್, ಕೊಂಡಜ್ಜಿ ಕೆರೆ, ಚಿತ್ರದುರ್ಗದ ಕೋಟೆ, ಸೇರಿದಂತೆ ಅನೇಕ ಸ್ಥಳಗಳಿಗೆ ತೆರಳಿ ಆಟಗಳನ್ನು ಆಡಿ, ಖುಷಿಯಿಂದ ಊಟ ಸವಿದು ಬರುತ್ತಾರೆ. ಒಟ್ಟಾರೆ ನೂತನ ವರ್ಷದ ಆರಂಭದ ಸಂಕ್ರಾಂತಿ ಆಚರಣೆಗೆ ಸಕಲ ಸಿದ್ಧತೆ ಎಲ್ಲೆಡೆ ನಡೆದಿತ್ತು.
ಹಬ್ಬದ ತಯಾರಿಗಾಗಿ 15 ದಿನಗಳಿಂದ ಸಿದ್ಧತೆ ಮಾಡಿಕೊಂಡಿರುತ್ತೇವೆ. ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಬೆಲೆಗಳು ಏರಿಕೆ ಇದ್ದರೂ ಸಹಾ ಜನರು ಖರೀದಿಸಲು ಬರುತ್ತಿದ್ದಾರೆ. ಸಂಕ್ರಾಂತಿ ಮಕ್ಕಳೊಂದಿಗೆ ಹೊರ ಸಂಚಾರಕ್ಕೆ ಹೋಗಿ ಖುಷಿ ಪಡುವ ಹಬ್ಬವಾಗಿದೆ.ಬಿ.ಎಸ್.ರಾಘವೇಂದ್ರ ಶೆಟ್ಟಿ, ವ್ಯಾಪಾರಿ.