ರಾಷ್ಟ್ರೀಯ ಕ್ರೀಡಾಕೂಟ ಆಯೋಜನೆಗೆ ಸಿದ್ಧತೆ

| Published : Apr 03 2025, 12:31 AM IST

ಸಾರಾಂಶ

ಕ್ರೀಡಾಪಟುಗಳ ಒತ್ತಾಸೆಯ ಹೋರಾಟದಿಂದಾಗಿ ಸುಸಜ್ಜಿತವಾಗಿ ಕ್ರೀಡಾಂಗಣ ರೂಪುಗೊಂಡಿದ್ದು, ಇದೇ ಕ್ರೀಡಾಂಗಣದಲ್ಲಿ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟವೊಂದನ್ನು ಆಯೋಜಿಸಲು ಸಿದ್ಧತೆ ನಡೆಸಲಾಗಿದೆ. ಯುವ ಪೀಳಿಗೆಯ ವಿದ್ಯಾರ್ಥಿಗಳು ಬೇಸಿಗೆ ಶಿಬಿರವನ್ನು ಸದುಪಯೋಗ ಮಾಡಿಕೊಳ್ಳಲಿ.

ಕನ್ನಡಪ್ರಭ ವಾರ್ತೆ ಕೋಲಾರಎರಡು ದಶಕಗಳ ಹೋರಾಟದ ಫಲವಾಗಿ ವಿಶ್ವೇಶ್ವರಯ್ಯ ಕ್ರೀಡಾಂಗಣ ಸಿಂಥೆಟಿಕ್ ಟ್ರ್ಯಾಕ್ ಆಗಿ ಮಾರ್ಪಟ್ಟಿದ್ದು, ಯುವ ಕ್ರೀಡಾಪಟುಗಳು ಕ್ರೀಡಾಂಗಣವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಪ್ಯಾರಾ ಒಲಂಪಿಕ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಕೆ.ಜಯದೇವ್ ಹೇಳಿದರು.

ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬುಧವಾರ ಬೆಳಿಗ್ಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿರುವ ಅಥ್ಲೆಟಿಕ್ಸ್ ಹಾಗೂ ಜೂಡೋ ಕ್ರೀಡಾ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಷ್ಟ್ರೀಯ ಕ್ರೀಡಾಕೂಟ ಆಯೋಜನೆ

ಕ್ರೀಡಾಪಟುಗಳ ಒತ್ತಾಸೆಯ ಹೋರಾಟದಿಂದಾಗಿ ಸುಸಜ್ಜಿತವಾಗಿ ಕ್ರೀಡಾಂಗಣ ರೂಪುಗೊಂಡಿದ್ದು, ಇದೇ ಕ್ರೀಡಾಂಗಣದಲ್ಲಿ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟವೊಂದನ್ನು ಆಯೋಜಿಸಲು ಸಿದ್ಧತೆ ನಡೆಸಲಾಗಿದೆ. ಯುವ ಪೀಳಿಗೆಯ ವಿದ್ಯಾರ್ಥಿಗಳು ಬೇಸಿಗೆ ಶಿಬಿರವನ್ನು ಸದುಪಯೋಗಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಕ್ರೀಡೆಯಲ್ಲಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತರುವ ಕ್ರೀಡಾಪಟುಗಳಾಗಿ ರೂಪುಗೊಳ್ಳಬೇಕು ಎಂದು ಆಶಿಸಿದರು.

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ ಮಾತನಾಡಿ, ಯುವ ಪೀಳಿಗೆಯಲ್ಲಿ ಉತ್ತಮ ಅಥ್ಲೆಟಿಕ್ಸ್ ಹಾಗೂ ಜುಡೋ ಕ್ರೀಡಾಪಟುಗಳನ್ನು ತಯಾರು ಮಾಡುವ ಗುರಿ ಇಟ್ಟುಕೊಂಡು ಇಲಾಖೆಯು ಸಂಪೂರ್ಣ ಉಚಿತವಾಗಿ ಅಥ್ಲೆಟಿಕ್ಸ್ ಹಾಗೂ ಜುಡೋ ಬೇಸಿಗೆ ಶಿಬಿರವನ್ನು ಆರಂಭಿಸಲಾಗಿದೆ. ಮೊದಲ ಹಂತದ ಶಿಬಿರವು ಏ.೨ ರಿಂದ ಮೇ.೧ ರವರೆವಿಗೂ ಹಾಗೂ ಎರಡನೇ ಹಂತದ ಶಿಬಿರವು ಮೇ.೨ ರಿಂದ ೨೬ ರವರೆವಿಗೂ ನಡೆಯಲಿದೆ ಎಂದು ತಿಳಿಸಿದರು.

ವ್ಯಾಸಂಗದ ಜತೆ ಕ್ರೀಡೆ

ಹಿರಿಯ ಕ್ರೀಡಾ ತರಬೇತುದಾರ ಜಗನ್ ಮಾತನಾಡಿ, ವಿದ್ಯಾರ್ಥಿಗಳು ವ್ಯಾಸಂಗದ ಜೊತೆ ಕ್ರೀಡೆಯನ್ನು ನಿಯಮಿತವಾಗಿ ಅಭ್ಯಾಸ ಮಾಡಿದರೆ ಉದ್ಯೋಗ ಗಿಟ್ಟಿಸಿಕೊಳ್ಳುವುದರ ಜೊತೆಗೆ, ಜೀವನ ಪೂರ್ತಿ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವೆಂದರು.ವಾಕಿಂಗ್ ಗೆಳೆಯರ ಬಳಗದ ವೆಂಕಟಶಿವಪ್ಪ ಮಾತನಾಡಿ, ವಿಶ್ವೇಶ್ವರಯ್ಯ ಕ್ರೀಡಾಂಗಣದ ಆಸುಪಾಸಿನಲ್ಲಿ ಮಕ್ಕಳ ಪಾರ್ಕ್ ಸ್ಥಾಪಿಸಿ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡಬೇಕೆಂದು ಸಲಹೆ ನೀಡಿದರು. ಕ್ರೀಡಾಪಟು ರಾಜೇಶ್ ಮಾತನಾಡಿ, ಶಿಬಿರಕ್ಕೆ ಆಗಮಿಸಿರುವವರು ಮತ್ತಷ್ಟು ವಿದ್ಯಾರ್ಥಿಗಳನ್ನು ಗೆಳೆಯರನ್ನು ಶಿಬಿರಕ್ಕೆ ಕರೆ ತರಬೇಕೆಂದು ಸಲಹೆ ನೀಡಿದರು.

ಉತ್ತಮ ಕ್ರೀಡಾಪಟುಗಳಾಗಲಿ

ಕೆ.ಎಸ್.ಗಣೇಶ್ ಮಾತನಾಡಿ, ಹಿಂದೆ ಮಕ್ಕಳು ಬಾಲ್ಯಾವಸ್ಥೆಯಲ್ಲಿ ತಾವಾಗಿಯೇ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಆದರೆ, ಈಗ ಮಕ್ಕಳಿಗೆ ಬೇಸಿಗೆ ಶಿಬಿರಗಳ ಮೂಲಕವೇ ಕ್ರೀಡೆಗಳನ್ನು ಪರಿಚಯಿಸುವಂತ ವಾತಾವರಣ ನಿರ್ಮಾಣವಾಗಿದೆ, ಶಿಬಿರಕ್ಕೆ ಬರುವ ಮಕ್ಕಳಾದರೂ ಉತ್ತಮ ಕ್ರೀಡಾಪಟುಗಳಾಗಿ ರೂಪುಗೊಳ್ಳಲಿ ಎಂದರು.ಶಿಬಿರದಲ್ಲಿ ಹಿರಿಯ ಕ್ರೀಡಾಪಟು ಗೌಸ್‌ಖಾನ್, ಹಾಬಿ ರಮೇಶ್, ವಾಕಿಂಗ್ ಗೆಳೆಯರಾದ ರಾಜಣ್ಣ, ಅಮರನಾರಾಯಣ ಇತರರು ಹಾಜರಿದ್ದು, ಶಿಬಿರಾರ್ಥಿಗಳಿಗೆ ಸಮವಸ್ತ್ರಗಳನ್ನು ವಿತರಿಸಿದರು. ಶಿಬಿರದ ಕ್ರೀಡಾ ತರಬೇತುದಾರರಾದ ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು.