ವರ್ಷದ ಮೊದಲನೇ ಹಬ್ಬ ಮಕರ ಸಂಕ್ರಾಂತಿಗೆ ಗುಬ್ಬಿ ಪಟ್ಟಣದಲ್ಲಿ ಸಡಗರದ ತಯಾರಿ
ಕನ್ನಡಪ್ರಭ ವಾರ್ತೆ ಗುಬ್ಬಿ
ವರ್ಷದ ಮೊದಲನೇ ಹಬ್ಬ ಮಕರ ಸಂಕ್ರಾಂತಿಗೆ ಗುಬ್ಬಿ ಪಟ್ಟಣದಲ್ಲಿ ಸಡಗರದ ತಯಾರಿ ಕಂಡು ಬಂದಿದೆ. ಮೂರು ದಿನಗಳಿಂದಲೇ ವರ್ತಕರು ಹಾಗೂ ಬೀದಿ ವ್ಯಾಪಾರಿಗಾರರು ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳಾದ ಅವರೆಕಾಯಿ, ಗೆಣಸು, ಕಬ್ಬಿನ ಜಲ್ಲೆ, ಎಳ್ಳು ಬೆಲ್ಲ, ಸಕ್ಕರೆ ಇನ್ನೂ ಮುಂತಾದ ವಸ್ತುಗಳನ್ನು ಮಾರಲು ಸಿದ್ಧಪಡಿಸಿದ್ದಾರೆ.ಸಂಕ್ರಾಂತಿ ಹಬ್ಬಕ್ಕೆ ಕಬ್ಬುಗಳು ಬೇಡಿಕೆ ಇರುವ ಕಾರಣ ಸುತ್ತಮುತ್ತ ಜಿಲ್ಲೆಯ ಬೆಂಗಳೂರು, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಕಬ್ಬು ಮಾರಾಟವಾಗುತ್ತಿದೆ. ಅಲ್ಲದೇ ಗುಜರಾತ್‌ಗೂ ರವಾನಿಸಲಾಗುತ್ತದೆ. ಈ ಬಾರಿ ಕಬ್ಬಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ರೈತ ಬಸವರಾಜಪ್ಪ ಹೇಳುತ್ತಾರೆ. ವಿವಿಧ ಕಾರಣಗಳಿಂದ ಕಬ್ಬಿನ ಉತ್ಪಾದನೆಯ ಪ್ರಮಾಣ ಕಡಿಮೆಯಾಗಿದೆ. ಸಾಗಣೆ ದರವೂ ಹೆಚ್ಚಾಗಿರುವ ಕಾರಣ ನಿರೀಕ್ಷೆಯಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಕಬ್ಬಿನ ಬೆಲೆ ಗಗನಕ್ಕೇರಿದೆ. ಸ್ವಲ್ಪ ಮಟ್ಟಿಗಾದರೂ ಗ್ರಾಹಕರಿಗೆ ಅನುಕೂಲವಾಗಲೆಂದು ಕಡಿಮೆ ದರದಲ್ಲಿ ವ್ಯಾಪಾರ ಮಾಡಬೇಕಾಗಿದೆ ಎಂದು ಮಾರಾಟಗಾರರು ತಿಳಿಸಿದ್ದಾರೆ.