ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ಸಡಗರ-ಸಂಭ್ರಮದಿಂದ ಆಚರಿಸಲು ಜಿಲ್ಲೆಯ ಜನರು ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಹಬ್ಬಕ್ಕೆ ಅಗತ್ಯ ಸಾಮಾನುಗಳನ್ನು ಖರೀದಿಸಿ, ದನ-ಕರುಗಳ ಮೈತೊಳೆದು ಶುಚಿಗೊಳಿಸುವುದರೊಂದಿಗೆ ಸಂಕ್ರಾಂತಿಗೆ ವಿಶೇಷ ಕಳೆ ತರಲು ಸನ್ನದ್ಧರಾಗುತ್ತಿದ್ದಾರೆ.ಹಬ್ಬದ ಮುನ್ನಾ ದಿನವಾದ ಭಾನುವಾರ ನಗರದ ಪೇಟೆ ಬೀದಿ, ಹಳೇ ಎಂಸಿ.ರಸ್ತೆ, ತರಕಾರಿ ಮಾರುಕಟ್ಟೆ ರಸ್ತೆಗಳಲ್ಲಿ ಜನಜಂಗುಳಿ ತುಂಬಿತ್ತು. ಗ್ರಾಮೀಣ ಪ್ರದೇಶದಿಂದ ಬಂದ ಜನರು ಹಬ್ಬದ ಸಾಮಾನುಗಳ ಖರೀದಿಯಲ್ಲಿ ನಿರತರಾಗಿದ್ದರು. ರೈತರು ಜಾನುವಾರುಗಳಿಗೆ ಹೊಸ ಹಗ್ಗ, ಕರಿದಾರ, ಗೆಜ್ಜೆ, ಕೊರಳಿಗೆ ಕಟ್ಟುವ ಗಂಟೆ, ಗೊಂಡದ ಹಾರ, ಚಗರೆಯಿಂದ ಮಾಡಿದ ಹಗ್ಗ ಸೇರಿದಂತೆ ಅವುಗಳನ್ನು ಸಿಂಗರಿಸುವ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.
ಎಳ್ಳು-ಬೆಲ್ಲ ಖರೀದಿ ಭರಾಟೆ ಜೋರು:ಪೇಟೆ ಬೀದಿಯ ಪ್ರಮುಖ ಸ್ಥಳಗಳಲ್ಲಿ ಎಳ್ಳು-ಬೆಲ್ಲ ವ್ಯಾಪಾರದ ಭರಾಟೆ ಜೋರಾಗಿತ್ತು. ಸಕ್ಕರೆ ಅಚ್ಚು, ಬೆಲ್ಲದ ಅಚ್ಚು, ಜೀರಿಗೆ ಕಾಳು, ಕಲ್ಯಾಣಸೇವೆಗೆ ವ್ಯಾಪಾರದ ಭರಾಟೆ ಜೋರಾಗಿತ್ತು. ಹುರಿಗಡಲೆ ಹಾಗೂ ಕಡಲೆಬೀಜ ಪ್ರತಿ ಕೆಜಿಗೆ ೧೧೦ ರು., ಬಿಳಿ ಎಳ್ಳು-೨೩೦ ರು., ಸಕ್ಕರೆ ಅಚ್ಚು-೧೦೦ ರಿಂದ ೧೨೦ ರು., ಬೆಲ್ಲದ ಅಚ್ಚು-೭೦ ರಿಂದ ೮೦ ರು., ಮಿಕ್ಸ್-೧೨೦ ರು.ಗೆ ಮಾರಾಟವಾಗುತ್ತಿತ್ತು.
ಸಂಕ್ರಾಂತಿಯ ಮತ್ತೊಂದು ವಿಶೇಷ ಕಬ್ಬು. ಕಬ್ಬಿನ ಜೊಲ್ಲೆಗಳನ್ನು ಇಟ್ಟುಕೊಂಡು ರೈತರು ವ್ಯಾಪಾರದಲ್ಲಿ ನಿರತರಾಗಿದ್ದರು. ಸೊಗಸಾಗಿ ಬೆಳೆದು ಕಬ್ಬಿನ ರಸವನ್ನು ತುಂಬಿಕೊಂಡಿದ್ದ ಒಂದು ಕಬ್ಬಿನ ಜೊಲ್ಲೆ ೫೦ ರು. ಬೆಲೆ ಇತ್ತು. ಜಾನುವಾರುಗಳಿಗೆ ಕಟ್ಟುವ ಉದ್ದನೆಯ ಹಗ್ಗ ಕನಿಷ್ಠ ೫೦ ರಿಂದ ೧೦೦ ರು.ವರೆಗೆ ಮಾರಾಟವಾಗುತ್ತಿತ್ತು. ಮೂಗುದಾರ ಜೊತೆ ೬೦ ರು., ಹಸುವಿನ ಕೊರಳಿಗೆ ಕಟ್ಟುವ ಗಂಟೆ ಸಣ್ಣ ಗಾತ್ರದಿಂದ ದೊಡ್ಡ ಗಾತ್ರದವರೆಗೆ ಕನಿಷ್ಠ ೨೫ ರಿಂದ ೬೦೦ ರು.ವರೆಗೆ ಇತ್ತು. ಕೊರಳಿಗೆ ಕಟ್ಟುವ ವಿವಿಧ ಗಾತ್ರದ ಗಂಟೆಗಳನ್ನು ಒಳಗೊಂಡ ಹಗ್ಗ ಜೊತೆಗೆ ೩೦೦ ರು.ನಿಂದ ೪೦೦ ರು.ವರೆಗೆ ಮಾರಾಟ ಮಾಡುತ್ತಿದ್ದರು.ಹೂವು-ಹಣ್ಣಿನ ಬೆಲೆ ದುಬಾರಿ:
ಹಬ್ಬದ ಕಾರಣದಿಂದ ಹೂವಿನ ಬೆಲೆಯಲ್ಲಿ ಕೊಂಚ ಏರಿಕೆಯಾಗಿತ್ತು. ಮಲ್ಲಿಗೆ ಹೂವು ಕೆಜಿ ೨೦೦ ರು, ಕನಕಾಂಬರ ಕೆಜಿಗೆ ೩೦೦ ರು., ಮರಳೆ ಹೂ-೧೨೦ ರು., ಚೆಂಡು ಹೂ-೬೦ ರು., ಗುಲಾಬಿ ಬಟನ್ ೧೦೦ ಗ್ರಾಂಗೆ ೪೦ ರು., ಸುಗಂಧರಾಜ ಹಾರ ಜೊತೆ ೪೦೦ ರಿಂ ದ ೨೦೦೦ ರು. ಗಡಿ ತಲುಪಿತ್ತು. ಹಣ್ಣುಗಳ ಬೆಲೆಯೂ ಸಾಮಾನ್ಯ ದಿನಗಳಿಗಿಂತ ೧೦ ರಿಂದ ೨೦ ರು. ದುಬಾರಿಯಾಗಿತ್ತು. ಸೇಬು ೧೭೦ ರು.ನಿಂದ ೨೦೦ ರು., ಮೂಸಂಬಿ ಪ್ರತಿ ಕೆಜಿಗೆ ೮೦ ರಿಂದ ೧೦೦ ರು., ದ್ರಾಕ್ಷಿ- ೧೦೦ ರು.ನಿಂದ ೧೬೦ ರು., ದಾಳಿಂಬೆ-೧೦೦ ರು.ನಿಂದ ೧೬೦ ರು., ಕಿತ್ತಳೆ- ೬೦ ರು.ನಿಂದ ೧೦೦ ರು., ಬಾಳೆಹಣ್ಣು-೫೦ ರು.ನಿಂದ ೭೦ ರು., ಮಿಕ್ಸ್ ಹಣ್ಣು-೧೬೦ ರು. ಇತ್ತು.ನಗರ ಪ್ರದೇಶದಲ್ಲಿ ಮಹಿಳೆಯರು ಎಳ್ಳು-ಬೆಲ್ಲ ತಯಾರಿಯಲ್ಲಿ ತೊಡಗಿಸಿಕೊಂಡು ಹಬ್ಬಕ್ಕೆ ಭರ್ಜರಿ ಸಿದ್ಧತೆ ನಡೆಸಿದ್ದರು. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಿರುವ ಮನೆಯಲ್ಲಿ ಹಬ್ಬದ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಹೆಣ್ಣು ಮಕ್ಕಳು ಹೊಸಬಟ್ಟೆಯನ್ನು ತೊಟ್ಟು, ಎಳ್ಳು-ಬೆಲ್ಲ ವಿನಿಮಯ ಮಾಡುವ ಸಂಭ್ರಮದಲ್ಲಿದ್ದರು. ಅದಕ್ಕಾಗಿ ಸಡಗರದ ತಯಾರಿ ನಡೆಸಿದ್ದರು.
ಕ್ಷೀಣಿಸುತ್ತಿರುವ ರಾಸುಗಳ ಸಂಖ್ಯೆವರ್ಷದಿಂದ ವರ್ಷಕ್ಕೆ ರಾಸುಗಳನ್ನು ಸಾಕುತ್ತಿರುವವರ ಸಂಖ್ಯೆ ಕ್ಷೀಣಿಸುತ್ತಿದೆ. ರಾಸುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವುದರಿಂದ ಗ್ರಾಮಾಂತರ ಪ್ರದೇಶದಲ್ಲಿ ಹಬ್ಬ ಕಳೆಗಟ್ಟುತ್ತಿಲ್ಲ. ರಾಸುಗಳಿಗಿಂತಲೂ ಹಾಲು ಕೊಡುವ ಹಸುಗಳ ಸಂಖ್ಯೆ ಹೆಚ್ಚಿದೆ. ಜಮೀನು ಉಳುಮೆಗೂ ರಾಸುಗಳನ್ನು ಬಳಸುವುದು ಕಡಿಮೆಯಾಗಿದೆ. ಆಧುನಿಕ ಕೃಷಿ ಯಂತ್ರೋಪಕರಣಗಳು ಬಂದ ನಂತರದಲ್ಲಿ ರಾಸುಗಳು ರೈತರಿಂದ ದೂರವಾಗುತ್ತಿವೆ. ಹಿಂದೆಲ್ಲಾ ಗ್ರಾಮೀಣ ಪ್ರದೇಶದ ಜನರು ಹಬ್ಬದ ಮುನ್ನಾ ದಿನವೇ ರಾಸುಗಳ ಮೈ ತೊಳೆದು, ಕೊಂಬುಗಳನ್ನು ಸವರಿ ನುಣುಪಾಗಿಸಿ ವಿಶೇಷ ಮೆರುಗು ಬರುವಂತೆ ಮಾಡುವ ಕಾರ್ಯ ನಡೆಸುತ್ತಿದ್ದರು. ದನ-ಕರುಗಳ ಸಿಂಗಾರಕ್ಕೆ ಸಿದ್ಧತೆ ನಡೆಸುತ್ತಾ, ಕಿಚ್ಚು ಹಾಯಿಸುವ ಕ್ಷಣಕ್ಕೆ ಎದುರು ನೋಡುತ್ತಿದ್ದರು. ಈಗ ಆ ಸಂಭ್ರಮದ ದೃಶ್ಯಗಳು ಮರೆಯಾಗಿವೆ. ಸಂಕ್ರಾಂತಿ ಎಳ್ಳು-ಬೆಲ್ಲ ಹಂಚುವುದಕ್ಕಷ್ಟೇ ಸೀಮಿತವಾಗಿದೆ.
ಹಬ್ಬ ಆಚರಣೆ ಬಗ್ಗೆ ಗೊಂದಲ
ಈ ಬಾರಿ ಸಂಕ್ರಾಂತಿ ಹಬ್ಬ ಸೋಮವಾರ ಬಂದಿರುವುದರಿಂದ ಯಾವ ದಿನ ಹಬ್ಬ ಆಚರಿಸಬೇಕೆಂಬ ಬಗ್ಗೆ ಗ್ರಾಮೀಣ ಜನರಲ್ಲಿ ಗೊಂದಲ ಮನೆ ಮಾಡಿದೆ. ಸೋಮವಾರ ಬಸವ ಹುಟ್ಟಿದ ದಿನ ಎಂಬ ನಂಬಿಕೆ ಗ್ರಾಮೀಣರಲ್ಲಿದೆ. ಅದಕ್ಕಾಗಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಭಾನುವಾರವೇ ಹಬ್ಬ ಮಾಡಿ ಮುಗಿಸಿದ್ದಾರೆ. ಇನ್ನು ಹಲವು ಗ್ರಾಮದವರು ಸೋಮವಾರ ಹಬ್ಬ ಆಚರಿಸುವುದಕ್ಕೆ ಸಿದ್ಧತೆ ನಡೆಸಿದ್ದಾರೆ.ಸಂಕ್ರಾಂತಿ ಹಬ್ಬಕ್ಕೆ ೩ ಲಕ್ಷ ಬಂಡವಾಳ ಹಾಕಿ ಹಗ್ಗ, ಗೆಜ್ಜೆಸರ, ಗಂಟೆಗಳು, ಬಾರುಕೋಲು, ಮೂಗುದಾರ ಸೇರಿದಂತೆ ರಾಸುಗಳಿಗೆ ಸಿಂಗರಿಸುವ ವಸ್ತುಗಳನ್ನು ವ್ಯಾಪಾರಕ್ಕಿಟ್ಟಿದ್ದೇವೆ. ಹಬ್ಬದ ಮುನ್ನಾ ದಿನ ೨೦ ಸಾವಿರ ರು. ವ್ಯಾಪಾರ ನಡೆದಿಲ್ಲ. ರಾಸುಗಳನ್ನು ಸಾಕುವವರ ಸಂಖ್ಯೆಯೇ ಕಡಿಮೆಯಾಗಿದೆ. ಯಾರೂ ಸಿಂಗಾರದ ಸಾಮಗ್ರಿಗಳನ್ನು ಕೊಳ್ಳುವುದಕ್ಕೆ ಮುಂದೆ ಬರುತ್ತಿಲ್ಲ. ವ್ಯಾಪಾರವಿಲ್ಲದೆ ನಷ್ಟ ಎದುರಾಗಿದೆ.- ಬಸವರಾಜು, ಕುದೇರು, ಕೊಳ್ಳೇಗಾಲ ತಾಲೂಕು