ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಈಶ ಸೇವೆಯ ಜೊತೆಗೆ ದೇಶ ಸೇವೆಯನ್ನೂ ನಡೆಸಿ ಮಾದರಿಯಾದ ಯತಿ ಶ್ರೇಷ್ಠ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಹಿಂದೆ ಅವರ ದೂರದೃಷ್ಟಿ ಮತ್ತು ಕೃತುಶಕ್ತಿ ಇದೆ ಎಂದು ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು.ಕೀರ್ತಿಶೇಷ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಚತುರ್ಥ ಆರಾಧನೋತ್ಸವ ಪ್ರಯುಕ್ತ ಭಾನುವಾರ ಪೇಜಾವರ ಮಠದಲ್ಲಿ ನಡೆದ ಗುರುಸಂಸ್ಮರಣೆ ಕಾರ್ಯಕ್ರಮದಲ್ಲಿ ಪಲಿಮಾರು ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭ ರಾಮತಾರಕ ಮಂತ್ರವನ್ನು ಸಾಮೂಹಿಕವಾಗಿ ಬೋಧಿಸಿದರು. ಶ್ರೀಗಳ ದಿವ್ಯ ಪಾದುಕೆ ಆರತಿ ಬೆಳಗಿದರು.ಸಾನ್ನಿಧ್ಯ ವಹಿಸಿದ್ದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಎಲ್ಲರಲ್ಲೂ ಪರಮ ಕಾರುಣ್ಯದ ಮೂರ್ತಿಯಾಗಿದ್ದರು. ಸಜ್ಜನ ಮತ್ತು ವಿದ್ವಜ್ಜನ ಪಕ್ಷಪಾತಿಯಾಗಿದ್ದರು. ಕಿರಿಯರು ಹಿರಿಯರ ಮೇಲೆ ಏಕಪ್ರಕಾರದ ಪ್ರೀತಿ ಅಭಿಮಾನಗಳನ್ನು ಧಾರೆಯೆರೆದಿರುವುದಕ್ಕೆ ತಾನೇ ಸಾಕ್ಷಿ ಎಂದು ಸ್ಮರಿಸಿಕೊಂಡರು.
ಪೇಜಾವರ ಮಠದ ದಿವಾನ ಎಂ. ರಘುರಾಮಾಚಾರ್ಯ, ಕಾರ್ಯನಿರ್ವಾಹಕ ಸುಬ್ರಹ್ಮಣ್ಯ ಭಟ್ ಮತ್ತು ಮಠದ ವಿದ್ಯಾರ್ಥಿಗಳು ಉಭಯ ಶ್ರೀಗಳನ್ನು ಆದರದಿಂದ ಬರಮಾಡಿಕೊಂಡು ಭಕ್ತಿ ಗೌರವ ಸಮರ್ಪಿಸಿದರು.ವಿದ್ವಾಂಸರಾದ ರಾಮಚಂದ್ರ ಭಟ್, ಗೋಪಾಲ ಜೋಯಿಸ್, ಬಾಲಕೃಷ್ಣ ಭಟ್ ನೀರೆ, ಹೆರ್ಗ ಹರಿಪ್ರಸಾದ ಭಟ್, ನರಸಿಂಹ ಭಟ್, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಪ್ರೊ. ಎಂ.ಬಿ. ಪುರಾಣಿಕ್, ಮಾಜಿ ಶಾಸಕ ರಘುಪತಿ ಭಟ್, ಉಮೇಶ್ ರಾವ್, ಮುರಲಿ ಕಡೆಕಾರ್, ಎಸ್. ವಿ. ಭಟ್, ಗಂಗಾಧರ ರಾವ್, ಪದ್ಮನಾಭ ಭಟ್, ರಾಘವೇಂದ್ರ ಕಿಣಿ, ಮಠದ ಕೊಟ್ಟಾರಿ ಸಂತೋಷ ಭಟ್, ವ್ಯವಸ್ಥಾಪಕ ಇಂದುಶೇಖರ, ವೇದವ್ಯಾಸ ಭಟ್, ಕೃಷ್ಣ ಸಾಮಗ, ಸುಬ್ರಹ್ಮಣ್ಯ ಹೆಬ್ಬಾರ್ ಮೊದಲಾದವರಿದ್ದರು. ವಾಸುದೇವ ಭಟ್ ಪೆರಂಪಳ್ಳಿ ನಿರೂಪಿಸಿದರು. ಕಡಿಯಾಳಿ ಮಾತೃಮಂಡಳಿ ಸದಸ್ಯೆಯರಿಂದ ಭಜನೆ ನಡೆಯಿತು.ಫೋಟೋ ಃ ಪೇಜಾವರ ಸ್ಮರಣೆ