ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಎಲ್ಲವೂ ಅಂದುಕೊಂಡಂತೆ ನಡೆದರೆ ಸಾಹಿತ್ಯ ಪರಿಷತ್ ಚುನಾವಣೆ ಡಿಸೆಂಬರ್‌ನಲ್ಲಿ ನಡೆಯಬೇಕು. ಚುನಾವಣೆಗೆ ಇನ್ನೂ 8 ತಿಂಗಳಿದೆ. ಆಗಲೇ ಅಭ್ಯರ್ಥಿಗಳಾಗಲು ನಾ ಮುಂದು ತಾ ಮುಂದು ಎಂದು ಆಕಾಂಕ್ಷಿಗಳು ದುಂಬಾಲು ಬಿದ್ದಿದ್ದಾರೆ. ಕೆಲವರು ಈಗಾಗಲೇ ಚುನಾವಣಾ ಪೂರ್ವತಯಾರಿಯನ್ನೂ ಆರಂಭಿಸಿದ್ದಾರೆ. ಇದರ ನಡುವೆ ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ಬೆಂಬಲಕ್ಕೆ ನಿಂತಿದ್ದ ಪ್ರೊ.ಎಚ್.ಎಸ್.ಮುದ್ದೇಗೌಡರ ಬಣದ ವಿಚಾರದಲ್ಲಿ ಹಿರಿಯ ಸಾಹಿತಿಗಳು ವಿರೋಧಿ ನಿಲುವು ಹೊಂದಿದ್ದಾರೆ. ಕೊನೆಯಲ್ಲಿ ಈ ವಿಚಾರ ಯಾವ ತಿರುವನ್ನು ಪಡೆಯಲಿದೆ ಎನ್ನುವುದೇ ಈಗಿರುವ ಕುತೂಹಲವಾಗಿದೆ.
ಕೇಂದ್ರ ಕಸಾಪ ಅಧ್ಯಕ್ಷರಾಗಿದ್ದ ಡಾ.ಮಹೇಶ್ ಜೋಶಿ ಅವರು ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ಒಡೆದ ಮನೆಯನ್ನಾಗಿಸಿದರು. ಅವರಿಗೆ ಬೆಂಬಲವಾಗಿ ನಿಂತಿದ್ದವರು ಪ್ರೊ.ಹೆಚ್.ಎಸ್.ಮುದ್ದೇಗೌಡರ ಬಣ. ಜೋಶಿ ಒಬ್ಬರಿಗಾಗಿ ಸ್ಥಳೀಯವಾಗಿ ಹಿರಿಯ ಸಾಹಿತಿಗಳು, ಪರಿಷತ್ತಿನ ಪದಾಧಿಕಾರಿಗಳೆಲ್ಲರ ವಿರೋಧ ಕಟ್ಟಿಕೊಂಡರು. ಈಗ ಮುದ್ದೇಗೌಡರ ಬಣ ಹಿಂಬಾಗಿಲಿನ ಮೂಲಕ ಸಾಹಿತ್ಯ ಪರಿಷತ್ತನ್ನು ಪ್ರವೇಶಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಉತ್ಸಾಹದಲ್ಲಿರುವ ಕೆ.ಟಿ.ಹನುಮಂತು ಅವರ ಆಸರೆಯನ್ನು ಪಡೆದುಕೊಂಡಿದ್ದಾರೆ ಎನ್ನುವುದು ಸಾರ್ವಜನಿಕವಾಗಿ ಕೇಳಿಬರುತ್ತಿರುವ ಮಾತು.ಅಧಿಕಾರ ಸಿಗುತ್ತದೆಂಬ ಕಾರಣಕ್ಕೆ ಹಿರಿಯ ಸಾಹಿತಿಗಳಿಗೆ ವಿರುದ್ಧವಾಗಿ ದನಿ ಎತ್ತಿದರು. ಸಮ್ಮೇಳನ ಸಂಚಾಲಕಿಯಾಗಿದ್ದ ಮೀರಾ ಶಿವಲಿಂಗಯ್ಯ ಅವರಿಗೆ ಜೋಶಿ ಅವರಿಂದ ಅವಮಾನವಾಗುತ್ತಿದ್ದರೂ ಮೌನದಿಂದ ಇದ್ದರು. ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳನ್ನು ಕಾರಣವಿಲ್ಲದೆ ವಜಾಗೊಳಿಸಿದರು. ಸಾಹಿತ್ಯ ಪರಿಷತ್ ವಿರೋಧಿ ಚಟುವಟಿಕೆ ನಡೆಸಿರುವ ಪ್ರೊ.ಎಚ್.ಎಸ್.ಮುದ್ದೇಗೌಡರ ಬಣವನ್ನು ಈಗ ಒಪ್ಪಿಕೊಳ್ಳುವುದಾದರೂ ಹೇಗೆ ಎನ್ನುವುದು ಹಿರಿಯ ಸಾಹಿತಿಗಳನೇಕರು ಕೇಳುತ್ತಿರುವ ಪ್ರಶ್ನೆಯಾಗಿದೆ. ಹುಡುಕಿದರೆ ಹುಳುಕುಗಳು ಸಾಕಷ್ಟಿವೆಹುಳುಕುಗಳನ್ನು ಹುಡುಕುತ್ತಾ ಹೊರಟರೆ ಸಾಕಷ್ಟು ಕಾಣಸಿಗುತ್ತವೆ. ಪರಿಷತ್ತಿನಿಂದ ಅನುದಾನ ಬರುತ್ತಿಲ್ಲ. ಸಾಹಿತ್ಯ ಪರಿಷತ್ತಿಗೆ ಮುದ್ದೇಗೌಡರನ್ನು ಅಧ್ಯಕ್ಷರೆಂದು ರಾಜ್ಯಾಧ್ಯಕ್ಷರು ಘೋಷಿಸಿದ್ದರೂ ಅದು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಈ ನಡುವೆ ಮತ್ತೊಬ್ಬರು ನಾನೇ ಅಧ್ಯಕ್ಷ ಎಂದು ಫ್ಲೆಕ್ಸ್ ಹಾಕಿಕೊಂಡು ಎಲ್ಲೆಡೆ ಪ್ರಚಾರ ಗಿಟ್ಟಿಸುತ್ತಿರುವುದು ಪರಿಷತ್ತಿನ ನಿಯಮಗಳ ಉಲ್ಲಂಘನೆಯಲ್ಲವೇ. ಹಿಂದೆ ನಡೆದುದ್ದೆಲ್ಲವೂ ಈಗ ಮುಗಿದ ಅಧ್ಯಾಯ. ಈಗ ಹೊಸ ರೀತಿಯಲ್ಲಿ ಪರಿಷತ್ತನ್ನು ಕಟ್ಟಬೇಕಿದೆ. ಅದಕ್ಕೊಬ್ಬ ಸಮರ್ಥ ನಾಯಕರಾಗಿ ಕೆ.ಟಿ.ಹನುಮಂತು ಸಿಕ್ಕಿದ್ದಾರೆ. ಅವರನ್ನು ಬೆಂಬಲಿಸಿ ಗೆಲ್ಲಿಸಿದರೆ ಸಾಹಿತ್ಯ ಪರಿಷತ್ತಿನ ಸ್ಥಾನ-ಮಾನ ಹೆಚ್ಚುತ್ತದೆ. ಆ ದೃಷ್ಟಿಯಿಂದ ಹನುಮಂತು ಅವರ ಬೆಂಬಲಕ್ಕೆ ನಿಂತಿದ್ದೇವೆಯೇ ವಿನಃ ಇದರಲ್ಲಿ ಹಿಂಬಾಗಿಲು-ಮುಂಬಾಗಿಲೆಂಬ ಪ್ರಶ್ನೆಯೇ ಇಲ್ಲ ಎನ್ನುವುದು ಪ್ರೊ.ಹೆಚ್.ಎಸ್.ಮುದ್ದೇಗೌಡರ ಬಣದಿಂದ ಕೇಳಿಬರುತ್ತಿರುವ ಮಾತಾಗಿದೆ.ಅಡಕತ್ತರಿಯಲ್ಲಿ ಹನುಮಂತುಕೆ.ಟಿ.ಹನುಮಂತು ಒಳ್ಳೆಯ ವ್ಯಕ್ತಿ. ಹಲವು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಸಾಂಸ್ಕೃತಿಕ ಮತ್ತು ಸಂಘಟನಾತ್ಮಕವಾಗಿ ಕೆಲಸ ಮಾಡುತ್ತಿದ್ದಾರೆ. ವಿವಾದತೀತ ವ್ಯಕ್ತಿಯಾಗಿರುವ ಅವರು ಅಧ್ಯಕ್ಷರಾಗಿ ಸ್ಪರ್ಧಿಸುತ್ತಿರುವುದಕ್ಕೆ ಹಿರಿಯ ಸಾಹಿತಿಗಳೂ ಬೆಂಬಲವಾಗಿದ್ದಾರೆ. ಆದರೆ, ಹನುಮಂತು ಹಿಂದಿರುವ ಪ್ರೊ.ಮುದ್ದೇಗೌಡರ ಬಣವನ್ನು ಒಪ್ಪಿಕೊಳ್ಳುವುದಕ್ಕೆ ಮಾತ್ರ ಅವರು ಸಿದ್ಧರಿಲ್ಲ. ಆ ಕಾರಣಕ್ಕಾಗಿ ಕೆ.ಟಿ.ಹನುಮಂತು ಅವರನ್ನು ವಿರೋಧಿಸುತ್ತಿದ್ದಾರೆ. ಪರಿಷತ್ತಿನ ಕೆಲವು ಹಿರಿಯರು ಪ್ರಮುಖವಾಗಿರುವವರ ಸಭೆ ಕರೆದು ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬರಬೇಕು. ಮುದ್ದೇಗೌಡರನ್ನು ಜೊತೆಗಿಟ್ಟುಕೊಂಡೇ ಮುಂದುವರೆಯುವುದಾದರೆ ಬೇರೆ ಬೇರೆ ಪರಿಣಾಮಗಳು ಎದುರಾಗಬಹುದೆಂಬ ಎಚ್ಚರಿಕೆಯನ್ನೂ ಕೆ.ಟಿ.ಹನುಮಂತು ಅವರಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಈ ವಿಚಾರವಾಗಿ ಕೆ.ಟಿ.ಹನುಮಂತು ಅವರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ.ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸೋಣಹಿರಿಯ ಸಾಹಿತಿಗಳ ಜೊತಗಿರುವ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಪ್ರೊ.ಹೆಚ್.ಎಸ್.ಮುದ್ದೇಗೌಡರ ಬಣವನ್ನು ಕೆ.ಟಿ.ಹನುಮಂತು ಬಿಟ್ಟು ಬರಲಾಗದಿದ್ದರೆ ಅವರನ್ನು ಬಿಟ್ಟು ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಲಹೆಯನ್ನೂ ನೀಡಿದ್ದಾರೆ. ಆದರೆ, ಚುನಾವಣೆಗೆ ಇನ್ನೂ ಸಮಯವಿದೆ. ಅವರಿಗೂ ಸಮಯಾವಕಾಶ ನೀಡೋಣ. ಆತುರಪಡದೆ ಸಮಾಧಾನದಿಂದ ಇರುವಂತೆ ಹಿರಿಯ ಸಾಹಿತಿಗಳು ಸಲಹೆ ನೀಡಿದ್ದಾರೆ ಎನ್ನಲಾಗಿದೆ.ಕೆ.ನಾಗೇಶ್ ಸ್ಪರ್ಧೆಗೆ ಉತ್ಸಾಹಇನ್ನೊಂದೆಡೆ ಸಾಹಿತ್ಯ ಪರಿಷತ್ತಿನ ಕೆಲವರು ಕೆ.ಟಿ.ಹನುಮಂತು ಅವರನ್ನು ಜೆಡಿಎಸ್ ಅಭ್ಯರ್ಥಿ ಎಂದು ಬಿಂಬಿಸುತ್ತಾ, ಅವರಿಗೆ ಪರ್ಯಾಯವಾಗಿ ಕಾಂಗ್ರೆಸ್ ಪಕ್ಷದಿಂದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ನಾಗೇಶ್ ಅವರನ್ನು ಕರೆತರುವ ಪ್ರಯತ್ನವೂ ಒಳಗೊಳಗೇ ನಡೆಯುತ್ತಿದೆ. ಈ ಸಮಯವನ್ನು ಉಪಯೋಗಿಸಿಕೊಂಡು ಜಿಲ್ಲಾ ಸಾಹಿತ್ಯ ಪರಿಷತ್ ಅಖಾಡ ಪ್ರವೇಶಕ್ಕೆ ನಾಗೇಶ್ ಕೂಡ ಉತ್ಸಾಹದಲ್ಲಿದ್ದಾರೆ. ಇದಕ್ಕೆ ತಮ್ಮ ರಾಜಕೀಯ ಗುರು ಸಚಿವ ಎನ್.ಚಲುವರಾಯಸ್ವಾಮಿ ಅವರ ಬೆಂಬಲ ಕೋರುತ್ತಿದ್ದಾರೆ ಎನ್ನಲಾಗಿದೆ. ಪ್ರೊ.ಜಯಪ್ರಕಾಶಗೌಡರಿಗೆ ಹತ್ತಿರದ ಸಂಬಂಧಿ ಎನ್ನಲಾಗುತ್ತಿದ್ದು, ಅದರ ಲಾಭವನ್ನು ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿ ಮುಂದುವರೆದಿದ್ದಾರೆ ಎನ್ನಲಾಗಿದೆ. ಇನ್ನುಳಿದಂತೆ ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಕೀಲಾರ ಕೃಷ್ಣೇಗೌಡ, ಎಸ್.ಕೃಷ್ಣ ಸ್ವರ್ಣಸಂದ್ರ ಅವರು ಮತ್ತೊಮ್ಮೆ ಅದೃಷ್ಟಪರೀಕ್ಷೆಗಿಳಿಯಲು ಸಜ್ಜಾಗುತ್ತಿದ್ದಾರೆ. ಹೊಸ ಮುಖಗಳಾಗಿ ಪಣ್ಣೇದೊಡ್ಡಿ ಹರ್ಷ, ಎಂ.ಆರ್.ಎಂ.ಪ್ರಕಾಶನದ ಮುತ್ತೇಗೆರೆ ಮಂಜು, ಕನ್ನಿಕಾ ಶಿಲ್ಪ ನವೋದಯ ಟ್ರಸ್ಟ್‌ನ ಹೆಚ್.ಆರ್.ಕನ್ನಿಕ ಅವರ ಹೆಸರುಗಳೂ ಕೇಳಿಬರುತ್ತಿವೆ. ಅಂತಿಮವಾಗಿ ಯಾರೆಲ್ಲಾ ಕಣದಲ್ಲಿ ಉಳಿಯಲಿದ್ದಾರೆಂಬುದನ್ನು ಕಾದುನೋಡಬೇಕಿದೆ.ಸಾಹಿತ್ಯ ಪರಿಷತ್ ಚುನಾವಣೆಗೆ ಇನ್ನೂ ಬಹಳ ಸಮಯವಿದೆ. ಈಗ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಕೆ.ಟಿ.ಹನುಮಂತುಗೆ ಪ್ರಮುಖರ ಸಭೆ ಕರೆದು ಚರ್ಚಿಸಿ ನಿರ್ಧಾರಕ್ಕೆ ಬರುವಂತೆ ಸೂಚನೆ ನೀಡಿದ್ದೇನೆ. ನಾನೂ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸುವೆ. ಬಹುಮತ ಯಾವ ಕಡೆಗಿರುವುದೋ ಅದನ್ನು ಬೆಂಬಲಿಸುವೆ.- ಪ್ರೊ.ಬಿ.ಜಯಪ್ರಕಾಶಗೌಡ, ಅಧ್ಯಕ್ಷರು, ಕರ್ನಾಟಕ ಸಂಘಕೆ.ಟಿ.ಹನುಮಂತು ಒಳ್ಳೆಯ ವ್ಯಕ್ತಿ. ಯಾರ ಕೈಗೊಂಬೆಯಾಗಿ ವರ್ತಿಸುವುದಿಲ್ಲ. ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರನ್ನು ಬೆಂಬಲಿಸುತ್ತಿದ್ದೇವೆ. ಅವರ ಆಯ್ಕೆಯಿಂದ ಪರಿಷತ್ತಿನ ಘನತೆ-ಗೌರವ ಹೆಚ್ಚುತ್ತವೆ. ಇಲ್ಲಿ ಆ ಬಣ-ಈ ಬಣ ಎಂಬ ಪ್ರಶ್ನೆಯೇ ಇಲ್ಲ. ಎಲ್ಲರೂ ಅವರಿಗೆ ಬೆಂಬಲವಾಗಿ ನಿಲ್ಲಬೇಕು. ಪರಿಷತ್ತನ್ನು ಮತ್ತಷ್ಟು ಗಟ್ಟಿಯಾಗಿ ಕಟ್ಟಬೇಕು.
- ಪ್ರೊ.ಹೆಚ್.ಎಸ್.ಮುದ್ದೇಗೌಡ, ಮಾಜಿ ಅಧ್ಯಕ್ಷರು, ಜಿಲ್ಲಾ ಕಸಾಪಕೆ.ಟಿ.ಹನುಮಂತು ಸಾಂಸ್ಕೃತಿಕ ಮತ್ತು ಸಂಘಟನಾತ್ಮಕ ವ್ಯಕ್ತಿ. ತೆರೆ-ಮರೆಯಲ್ಲಿ ಸಾಕಷ್ಟು ಕೆಲಸಗಳನ್ನು ಅವರು ಮಾಡುತ್ತಿದ್ದಾರೆ. ಅವರ ಕಾರಣಕ್ಕೆ ಪ್ರೊ.ಹೆಚ್.ಎಸ್.ಮುದ್ದೇಗೌಡರನ್ನು ಒಪ್ಪಿಕೊಳ್ಳುವುದಕ್ಕೆ ನಾವು ತಯಾರಿಲ್ಲ. ಅವರನ್ನು ಬಿಟ್ಟು ಬಂದರೆ ಬೆಂಬಲಿಸುತ್ತೇವೆ. ಇಲ್ಲದಿದ್ದರೆ ಅದರ ಪರಿಣಾಮಗಳನ್ನು ಹನುಮಂತು ಅವರೇ ಎದುರಿಸಬೇಕಾಗಬಹುದು.- ಪ್ರೊ.ಜಿ.ಟಿ.ವೀರಪ್ಪ, ಮಾಜಿ ಅಧ್ಯಕ್ಷರು, ಜಿಲ್ಲಾ ಕಸಾಪಪರಿಷತ್ತಿನ ಚುನಾವಣೆ ಏಳೆಂಟು ತಿಂಗಳಿದೆ. ಸದ್ಯಕ್ಕೆ ಅದರ ಬಗ್ಗೆ ನಾನೇನೂ ಯೋಚನೆ ಮಾಡಿಲ್ಲ. ಸಮ್ಮೇಳನದ ಸಂಚಾಲಕಿಯಾಗಿದ್ದ ಸಮಯದಲ್ಲಿ ನನಗೆ ನೋವುಗಳನ್ನು ಮರೆಯುವುದಿಲ್ಲ. ಆದರೆ, ಚುನಾವಣೆ ಸಮಯದಲ್ಲಿ ಜಿಲ್ಲೆಯ ಹಿರಿಯ ಸಾಹಿತಿಗಳೆಲ್ಲರೂ ಸಭೆ ಸೇರಿ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಬಹುಮತ ಯಾರ ಕಡೆಗೆ ಬರುವುದೋ ಅವರನ್ನು ಬೆಂಬಲಿಸುತ್ತೇನೆ.-ಡಾ.ಮೀರಾ ಶಿವಲಿಂಗಯ್ಯ, ಮಾಜಿ ಅಧ್ಯಕ್ಷರು, ಜಿಲ್ಲಾ ಕಸಾಪನಾನು ಮುದ್ದೇಗೌಡರನ್ನು ಅತಿಯಾಗಿ ಓಲೈಸಿಕೊಂಡೇನೂ ಹೋಗುತ್ತಿಲ್ಲ. ಎಲ್ಲಾ ಹಿರಿಯ ಸಾಹಿತಿಗಳ ಬೆಂಬಲ ಕೋರಿದಂತೆ ಅವರ ಬೆಂಬಲವನ್ನೂ ಕೋರುತ್ತಿದ್ದೇನೆ. ಅವರೂ ಬೆಂಬಲಿಸುವುದಾಗಿ ಭರವಸೆ ನೀಡಿದ್ದಾರೆ. ಚುನಾವಣೆ ವೇಳೆಗೆ ಎಲ್ಲರ ಬೆಂಬಲವೂ ನನಗೆ ಸಿಗುವ ವಿಶ್ವಾಸದಲ್ಲಿದ್ದೇನೆ. ಯಾರಿಂದಲೂ ಅಪಸ್ವರಗಳು ಎದುರಾಗದಂತೆ ನೋಡಿಕೊಂಡು ಎಚ್ಚರದಿಂದ ಮುನ್ನಡೆಯುತ್ತಿದ್ದೇನೆ. -ಕೆ.ಟಿ.ಹನುಮಂತು, ಮುಂಚೂಣಿಯಲ್ಲಿರುವ ಆಕಾಂಕ್ಷಿತ ಅಭ್ಯರ್ಥಿ