ರಾಜ್ಯ ಪ್ರಸಿದ್ಧ ಮಾರಿಕಾಂಬಾ ದೇವಿಯ ಜಾತ್ರೆಯ ಸಿದ್ಧತೆಯು ಆಡಳಿತ ಮಂಡಳಿಯಿಂದ ಭರದಿಂದ ಸಾಗುತ್ತಿದ್ದು, ದೇವಾಲಯದ ವಿಶಿಷ್ಟ ಕಾವಿ ಕಲೆಗೆ ಹೊಳಪು ನೀಡುವ ಕಾರ್ಯ ಜೋರಾಗಿ ನಡೆಯುತ್ತಿದೆ. ಎರಡು ವರ್ಷಕ್ಕೊಮ್ಮೆ ಜರುಗುವ ಜಾತ್ರೆ ಮುನ್ನ ಈ ಕಲೆಗೆ ರಂಗು ಹೆಚ್ಚಿಸುವ ಕಾರ್ಯ ಮಾಡಲಾಗುತ್ತಿದೆ.
ಶಿರಸಿ: ರಾಜ್ಯ ಪ್ರಸಿದ್ಧ ಮಾರಿಕಾಂಬಾ ದೇವಿಯ ಜಾತ್ರೆಯ ಸಿದ್ಧತೆಯು ಆಡಳಿತ ಮಂಡಳಿಯಿಂದ ಭರದಿಂದ ಸಾಗುತ್ತಿದ್ದು, ದೇವಾಲಯದ ವಿಶಿಷ್ಟ ಕಾವಿ ಕಲೆಗೆ ಹೊಳಪು ನೀಡುವ ಕಾರ್ಯ ಜೋರಾಗಿ ನಡೆಯುತ್ತಿದೆ. ಎರಡು ವರ್ಷಕ್ಕೊಮ್ಮೆ ಜರುಗುವ ಜಾತ್ರೆ ಮುನ್ನ ಈ ಕಲೆಗೆ ರಂಗು ಹೆಚ್ಚಿಸುವ ಕಾರ್ಯ ಮಾಡಲಾಗುತ್ತಿದೆ.
ಶಕ್ತಿದೇವತೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಫೆ. 24ರಿಂದ ನಡೆಯಲಿದೆ. ಜಾತ್ರೆಗೆ ಮುಂಚೆ ಕಾವಿ ಕಲೆಗೆ ಮೆರಗು ನೀಡುವುದು ಸಂಪ್ರದಾಯವೇ ಆಗಿದೆ. ಅಚ್ಚಳಿಯದೇ ಉಳಿದುಕೊಂಡಿರುವ ಕಾವಿಕಲೆ ಚಿತ್ತಾರಗಳು ಸ್ವಲ್ಪ ಮಸುಕು ಆಗಿರುವುದರಿಂದ ಅದಕ್ಕೆ ಹೊಳಪು ನೀಡುವ ಕಾರ್ಯ ಮಾಡಲಾಗುತ್ತದೆ. ಕಳೆದ ತಿಂಗಳ ಅವಧಿಯಿಂದ ದೇವಾಲಯದ ಗರ್ಭಗುಡಿ, ಚಂದ್ರಶಾಲೆ, ಸಭಾಭವನ ಹಾಗೂ ದೇವಾಲಯದ ಹೊರಭಾಗದ ಗೋಡೆ, ಕಂಬಗಳಿಗೆ ಈ ಕಲೆಯ ಸೊಗಸನ್ನು ಮುಂದುವರಿಸಲಾಗುತ್ತಿದೆ. ಹತ್ತಾರು ಕಲಾವಿದರು ಈ ಕಲೆಗೆ ಮತ್ತೆ ಹೊಳಪು ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.ಗೋಡೆಗಳ ಮೇಲೆ ಈ ಮೊದಲೇ ಕಾವಿ ಕಲೆ ಮೂಲಚಿತ್ರದ ಅಚ್ಚಿದೆ. ಇದರ ಮೇಲಿನ ಹಳೆಯ ಚಿತ್ತಾರಗಳ ಮೇಲೆ ಬಿಳಿ ಬಣ್ಣದ ಆಯಿಲ್ ಪೇಂಟ್ ಮಾಡಿಕೊಂಡು ತದನಂತರ ಕೆಂಪುಬಣ್ಣದ ಎನೆಮಲ್ ಪೇಂಟ್‌ನಿಂದ ಮೂಲ ಅಚ್ಚಿನ ಮೇಲೆ ಪುನಃ ಕಾವಿಕಲೆ ಮೂಡಿಸಲಾಗುತ್ತಿದೆ. ಈ ಮೂಲಕ ದೇಗುಲದ ಗೋಡೆಗಳ ಮೇಲೆ ಹೊಸ ಕಳೆ ತರಲಾಗುತ್ತಿದೆ. ಹಿಂದಿನ ಕಾಲದಲ್ಲಿ ಗಾರೆಸುಣ್ಣ, ಕೆಂಪುಮಣ್ಣು ಮಿಶ್ರಣ ಮಾಡಿ ಕಾವಿ ಬಣ್ಣ ತೆಗೆಯುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಆಯಿಲ್ ಪೇಂಟ್ ಬಳಕೆಯಾಗುತ್ತಿದೆ.
ಪ್ರತಿ ಜಾತ್ರೆಗೂ ಮೊದಲು ದೇವಾಲಯದಲ್ಲಿ ಮಾಸಿದ ಕಾವಿ ಕಲೆಯನ್ನು ಮತ್ತೊಮ್ಮೆ ಚಿತ್ರಿಸಲಾಗುತ್ತದೆ. ಈಗಾಗಲೇ ತಿಂಗಳಿನಿಂದ ಈ ಕೆಲಸ ನಡೆಯುತ್ತಿದೆ ಎಂದು ದೇವಾಲಯದ ಧರ್ಮದರ್ಶಿ ಸುಧೀರ ಹಂದ್ರಾಳ ಹೇಳಿದರು.ಹೊಳೆಯುತ್ತಿರುವ ರಸ್ತೆ: ಕಳೆದ ಕೆಲವು ವರ್ಷಗಳಿಂದ ರಸ್ತೆ ಕಾಮಗಾರಿ ವಿವಿಧ ಕಾರಣಗಳಿಂದ ನಿಧಾನವಾಗಿ ನಡೆಯುತ್ತಿತ್ತು. ಕಳೆದ 2 ತಿಂಗಳಿನಿಂದ ವೇಗ ಪಡೆದ ಪರಿಣಾಮ ಮಾರಿಕಾಂಬಾ ದೇವಿ ಜಾತ್ರೆಗೆ ನಗರದ ಎಪಿಎಂಸಿ ಕ್ರಾಸ್‌ನಿಂದ ಪಂಡಿತ ಸಾರ್ವಜನಿಕ ಆಸ್ಪತ್ರೆ ವರೆಗಿನ ರಸ್ತೆಗೆ ಜೀವಕಳೆ ಬಂದಂತಾಗಿದೆ. ಡಿವೈಡರ್, ಡಾಂಬರೀಕರಣ, ಸೂಚನಾ ಫಲಕಗಳ ಅಳವಡಿಕೆ ಕಾರ್ಯ ಮಾಡಲಾಗಿದೆ. ರಸ್ತೆ ಅಗಲೀಕರಣಗೊಳಿಸಿ, ಮರು ಡಾಂಬರೀಕರಣ ಮಾಡಿ ಡಿವೈಡರ್ ಅಳವಡಿಸಿ, ಅಲಂಕಾರಿಕ ದೀಪಗಳ ಅಳವಡಿಕೆಗೆ ಲೋಕೋಪಯೋಗಿ ಇಲಾಖೆಯಿಂದ ಸರ್ಕಾರಕ್ಕೆ ₹1.85 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.