ಸಾರಾಂಶ
ನೂರು ದಿನದಲ್ಲಿ ಮಾಡಬಹುದಾದ ಇಂದ್ರಾಳಿ ರೈಲ್ವೇ ಮೇಲ್ಸೆತುವೆ ಕಾಮಗಾರಿ ಎಂಟು ವರ್ಷವಾದರೂ ಪೂರ್ಣಗೊಂಡಿಲ್ಲ. ಈ ಅವ್ಯವಸ್ಥೆಯನ್ನು ಖಂಡಿಸಿ ಎರಡನೇ ಹಂತದ ಬೃಹತ್ ಹೋರಾಟಕ್ಕೆ ಇಂದ್ರಾಳಿ ರೈಲ್ವೇ ಸೇತುವೆ ಹೋರಾಟ ಸಮಿತಿ ಸಿದ್ದತೆ ನಡೆಸಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ನೂರು ದಿನದಲ್ಲಿ ಮಾಡಬಹುದಾದ ಇಂದ್ರಾಳಿ ರೈಲ್ವೇ ಮೇಲ್ಸೆತುವೆ ಕಾಮಗಾರಿ ಎಂಟು ವರ್ಷವಾದರೂ ಪೂರ್ಣಗೊಂಡಿಲ್ಲ. ಈ ಅವ್ಯವಸ್ಥೆಯನ್ನು ಖಂಡಿಸಿ ಎರಡನೇ ಹಂತದ ಬೃಹತ್ ಹೋರಾಟಕ್ಕೆ ಇಂದ್ರಾಳಿ ರೈಲ್ವೇ ಸೇತುವೆ ಹೋರಾಟ ಸಮಿತಿ ಸಿದ್ದತೆ ನಡೆಸಿದೆ.ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ಅಮೃತ್ ಶೆಣೈ, ಹೋರಾಟ ರೂಪುರೇಷೆಗಳನ್ನು ಚರ್ಚಿಸಲು ಫೆ.8 ರಂದು ಕುಂಜಿಬೆಟ್ಟು ಶಾರಾದಾ ಕಲ್ಯಾಣ ಮಂಟಪದ ಆವರಣದಲ್ಲಿರುವ ಜ್ಞಾನ ಮಂದಿರದಲ್ಲಿ ಸಂಜೆ 4 ಗಂಟೆಗೆ ಸಮಾಲೋಚನೆ ಸಭೆ ನಡೆಯಲಿದೆ ಎಂದರು.
ರೈಲ್ವೇ ಸೇತುವೆ ಕಾಮಗಾರಿಯನ್ನು ಜ.30 ರೊಳಗೆ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು. ಆದರೆ ಇನ್ನೂ ಪೂರ್ಣಗೊಂಡಿಲ್ಲ. ಪರ್ಕಳ, ಸಂತೆಕಟ್ಟೆ, ಆದಿಉಡುಪಿ, ಅಂಬಲಪಾಡಿ ಇತ್ಯಾದಿ ಭಾಗದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಅವ್ಯವಸ್ಥೆಯ ವಿರುದ್ದವೂ ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ. ಸಮಿತಿಯ ಹೆಸರನ್ನು ಉಡುಪಿ ನಗರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ, ಹೋರಾಟ ಸಮಿತಿ ಎಂದು ಬದಲಾಯಿಸುವ ಯೋಚನೆ ಇದೆ ಎಂದರು.ಸಮಿತಿಯ ಮುಖಂಡ ರಮೇಶ್ ಕಾಂಚನ್ ಮಾತನಾಡಿ, ಹೈವೇ ಕಾಮಗಾರಿ ಬಗ್ಗೆ ಉಡುಪಿಯ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಶಾಸಕರು, ಸಂಸದರು ಇನ್ನೊಬ್ಬರ ಮೇಲೆ ಆರೋಪ ಮಾಡುವ ಬದಲು ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು, ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಜ್ಯೋತಿ ಹೆಬ್ಬಾರ್, ಕೀರ್ತಿ ಶೆಟ್ಟಿ, ಸುರೇಶ್ ಶೆಟ್ಟಿ ಬನ್ನಂಜೆ, ಅನ್ಸರ್ ಅಹಮ್ಮದ್ ಉಪಸ್ಥಿತರಿದ್ದರು.