ಕನ್ನಡಪ್ರಭ ವಾರ್ತೆ ಸಂಕೇಶ್ವರ

ಸಂಕೇಶ್ವರದ ಐತಿಹಾಸಿಕ ಮಹಾಲಕ್ಷ್ಮೀ ದೇವಿ ಜಾತ್ರೆ ಹಿನ್ನೆಲೆಯಲ್ಲಿ ದೇವಿಯ ಮೆರವಣಿಗೆ ಸಾಗುವ ಪ್ರಮುಖ 7 ರಿಂದ 8 ರಸ್ತೆಗಳನ್ನು ತುರ್ತಾಗಿ ದುರಸ್ತಿ ಮಾಡಿ ಸಮರ್ಪಕ ನಿರ್ವಹಣೆ ಕೈಗೊಳ್ಳಲಾಗುವುದು. ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ವಾರದ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಜಾತ್ರಾ ಪೂರ್ವ ತಯಾರಿ ಸೇರಿದಂತೆ ಅಗತ್ಯ ಸೌಲಭ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು. ಇದೇ ವೇಳೆ ಅಮೃತ್- 2 ಯೋಜನೆಯಡಿ ₹ 9.6 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಓವರ್‌ಹೆಡ್ ಟ್ಯಾಂಕ್ ಕಾಮಗಾರಿ ವೀಕ್ಷಿಸಿ ಮಾತನಾಡಿದ ಶಾಸಕರು, ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಆಗಸ್ಟ್ ತಿಂಗಳೊಳಗೆ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮೂರನೇ ಹಂತದ ಎಸ್‌ಐಆರ್ ಪ್ರಕ್ರಿಯೆ ಜೂನ್ 30ರಿಂದ ಜುಲೈ 29ರವರೆಗೆ ನಡೆಯಲಿದ್ದು, ಮತದಾರರ ಮಾಹಿತಿ ಪರಿಶೀಲನೆ ಹಾಗೂ ನವೀಕರಣ ಕಾರ್ಯ ಯಶಸ್ವಿಯಾಗಲು ಸಾರ್ವಜನಿಕರು, ಬಿಎಲ್‌ಓಗಳು ಮತ್ತು ರಾಜಕೀಯ ಪಕ್ಷಗಳ ಬಿಎಲ್‌ಎಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಎಸ್‌ಐಆರ್ ಪ್ರಕ್ರಿಯೆ ಯಶಸ್ಸಿಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.

ಅಂಕಲೆ ಗ್ರಾಮದ ಕುಡಿಯುವ ನೀರಿನ ಸಮಸ್ಯೆ, ಹೆದ್ದಾರಿ ಕಾಮಗಾರಿಯಿಂದ ಉಂಟಾಗಿರುವ ಮಾಲಿನ್ಯದಿಂದ ಹಿರಣ್ಯಕೇಶಿ ನದಿಪಾತ್ರ ಸ್ವಚ್ಛತೆ ಹಾಗೂ ಕೆಶಿಪ್ ರಸ್ತೆ ಕಾಮಗಾರಿ ಕುರಿತ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸಂಬಂಧಿತ ಎಲ್ಲ ವಿಷಯಗಳು ಗಮನದಲ್ಲಿವೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಕೆಇಬಿ ನಿರ್ದೇಶಕರಾದ ಗಜಾನನ ಕ್ವಳ್ಳಿ, ಶಿವಾನಂದ ಮುಡಶಿ, ಪ್ರಮುಖರಾದ ಸುನೀಲ ಪರ್ವತರಾವ, ಪ್ರಶಾಂತ ಪಾಟೀಲ, ಆನಂದ ಸಂಸುದ್ದಿ, ರೋಹನ ನೇಸರಿ, ಹರುಣ ಮುಲ್ಲಾ, ಚೇತನ್ ಬಶೆಟ್ಟಿ, ಸಾಗರ ಜಕಾತಿ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮಠದ, ಅಭಿಯಂತರ ರವೀಂದ್ರ ಗಡಾದ ಸೇರಿದಂತೆ ಸಾರ್ವಜನಿಕರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.------

ಬಾಕ್ಸ್ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ಕ್ಷೇತ್ರದ 72 ಹಳ್ಳಿಗಳನ್ನು ಒಳಗೊಂಡ ₹ 265 ಕೋಟಿ ವೆಚ್ಚದ ನೂತನ ನೀರು ಸರಬರಾಜು ಯೋಜನೆ ತಾಲೂಕಿನಲ್ಲಿ ಜಾರಿಗೊಳ್ಳಲಿದೆ. ಇದರ ಮೂಲಕ ಗ್ರಾಮೀಣ ಭಾಗದ ಜನರ ಬಹುಕಾಲದ ನೀರಿನ ಬವಣೆಗೆ ಪರಿಹಾರ ದೊರೆಯಲಿದೆ.

ಹಿಡಕಲ್ ಜಲಾಶಯದಿಂದ ನೀರು ಪೂರೈಸುವ ಈಗಿನ ಪೈಪ್‌ಲೈನ್‌ಗಳು ಸುಮಾರು 35 ರಿಂದ 40 ವರ್ಷ ಹಳೆಯದಾಗಿದ್ದು, ದುರಸ್ತಿ ಸಂದರ್ಭಗಳಲ್ಲಿ ನೀರಿನ ವ್ಯತ್ಯಯ ಉಂಟಾಗುತ್ತಿದೆ. ಹೊಸ ಯೋಜನೆಯಡಿ ನೀರು ಸರಬರಾಜು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುವುದು. ಇದರಿಂದ ತಾಲೂಕಿನ ಬಹುತೇಕ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ಶಾಸಕ ನಿಖಿಲ ಕತ್ತಿ ವಿಶ್ವಾಸ ವ್ಯಕ್ತಪಡಿಸಿದರು.