ವಿರೋಧದ ನಡುವೆಯೂ ಟೋಲ್ ಆರಂಭಕ್ಕೆ ಸಿದ್ಧತೆ

| Published : Feb 13 2025, 12:49 AM IST

ಸಾರಾಂಶ

ಹಾನಗಲ್ಲಿನಿಂದ ಹುಬ್ಬಳ್ಳಿ ಹಾಗೂ ಗದಗಿಗೆ ಹೋಗುವ ಮಾರ್ಗದಲ್ಲಿ ಕರಗುದರಿ ಬಳಿಯ ಬಂಕಾಪುರ ಕ್ರಾಸ್ ಹತ್ತಿರ ಟೋಲ್ ಸಂಗ್ರಹಕ್ಕಾಗಿ ಕಳೆದ ಒಂದು ತಿಂಗಳಿನಿಂದ ಸಿದ್ಧತೆ ಆರಂಭವಾಗಿದೆ.

ಹಾನಗಲ್ಲ: ತಡಸ, ಶಿವಮೊಗ್ಗ ರಾಜ್ಯ ಹೆದ್ದಾರಿಯ ಹಾನಗಲ್ಲ ಹೊರವಲಯದ ಹುಬ್ಬಳ್ಳಿ-ಗದಗ ಮಾರ್ಗಕ್ಕೆ ಟೋಲ್ ಗೇಟ್‌ ಆರಂಭವಾಗುತ್ತಿದೆ. ಸಾರ್ವಜನಿಕರು ಟೋಲ್ ಬೇಡ ಎಂದು ವಿರೋಧಿಸುತ್ತಿದ್ದಾರೆ. ಆದರೂ, ಕಾಮಗಾರಿ ಭರದಿಂದ ಸಾಗಿದೆ. 15 ದಿನಗಳಲ್ಲಿ ಟೋಲ್ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ.

ಹಾನಗಲ್ಲಿನಿಂದ ಹುಬ್ಬಳ್ಳಿ ಹಾಗೂ ಗದಗಿಗೆ ಹೋಗುವ ಮಾರ್ಗದಲ್ಲಿ ಕರಗುದರಿ ಬಳಿಯ ಬಂಕಾಪುರ ಕ್ರಾಸ್ ಹತ್ತಿರ ಟೋಲ್ ಸಂಗ್ರಹಕ್ಕಾಗಿ ಕಳೆದ ಒಂದು ತಿಂಗಳಿನಿಂದ ಸಿದ್ಧತೆ ಆರಂಭವಾಗಿದೆ. ಈ ವರೆಗೆ ಯಾವುದಕ್ಕಾಗಿ ಈ ಸಿದ್ಧತೆ ಎಂದು ಜನರಿಗೆ ತಿಳಿದಿರಲಿಲ್ಲ. ಈಗ ಇದು ಟೋಲ್ ಗೇಟ್‌ ಎಂದು ಗೊತ್ತಾಗಿದ್ದು, ಭಾರೀ ವಿರೋಧ ವ್ಯಕ್ತವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭೋಜರಾಜ ಕರೂದಿ, ಈ ಟೋಲ್ ಅಪ್ರಸ್ತುತ. ಗುಣಮಟ್ಟದ ರಾಜ್ಯ ಹೆದ್ದಾರಿ ನಿರ್ಮಿಸಿ, ಟೋಲ್ ಸಂಗ್ರಹಕ್ಕೂ ಮುನ್ನ ಸಾರ್ವಜನಿಕ ಪ್ರಕಟಣೆ ನೀಡಿ, ಎಲ್ಲ ನಿಯಮ ಪಾಲಿಸಬೇಕು. ಆದರೆ 2019ರಲ್ಲಿ ಮುಗಿದ ಈ ರಸ್ತೆಗೆ ಈಗ ಟೋಲ್ ಆರಂಭಿಸುತ್ತಿರುವುದು ಸರಿಯಲ್ಲ. ಯಾವುದೇ ನಿಯಮವನ್ನೂ ಪಾಲಿಸಿಲ್ಲ. ಇದನ್ನು ನಾವು ವಿರೋಧಿಸುತ್ತೇವೆ. ಅಲ್ಲದೆ, ಸರಕಾರ ಕೂಡಲೇ ಈ ಟೋಲ್ ಗೇಟ್‌ ನಿರ್ಮಾಣ ಕಾರ್ಯ ನಿಲ್ಲಿಸದಿದ್ದರೆ ಸಂಘ ಸಂಸ್ಥೆಗಳು, ಸಾರ್ವಜನಿಕರನ್ನೊಳಗೊಂಡು ಧರಣಿ ನಡೆಸಲಾಗುವುದು. ಈ ವಿಷಯವನ್ನು ತಾಲೂಕಿನ ಶಾಸಕರ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದ್ದಾರೆ.

2019ರಲ್ಲೇ ರಸ್ತೆ ಮುಗಿದಿದ್ದರೂ ಟೋಲ್ ಆರಂಭಿಸಲು ಹಲವು ಬಾರಿ ಟೆಂಡರ್ ಕರೆದರೂ ಯಾರೂ ಪಡೆಯಲಿಲ್ಲ ಎಂದು ತಿಳಿದಿದೆ. ಅಲ್ಲದೆ ಕೆಆರ್‌ಡಿಸಿಎಲ್ ಬೇಡುವಷ್ಟು ಟೋಲ್ ಇಲ್ಲಿ ಸಂಗ್ರಹವಾಗುವುದಿಲ್ಲ. ಈ ಎಲ್ಲ ಕಾರಣಕ್ಕಾಗಿ ಟೆಂಡರ್ ವಿಳಂಬವಾಗಿ ಈಗ ದಾವಣಗೆರೆಯ ಗುತ್ತಿಗೆದಾರರೊಬ್ಬರು ಈ ಟೆಂಡರ್‌ ಅನ್ನು ಒಂದು ವರ್ಷಕ್ಕೆ ₹3 ಕೋಟಿಗೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿಯೇ ತರಾತುರಿಯಲ್ಲಿ ಕಾಮಗಾರಿ ಆರಂಭವಾಗಿದೆ. ಈಗ 15 ದಿನಗಳ ಹಿಂದೆ ಈ ಭಾಗದ ರಸ್ತೆಯ ಮರು ದುರಸ್ತಿ ಕೂಡ ಮಾಡಲಾಗಿದೆ. ಈಗ ಟೋಲ್ ಸಂಗ್ರಹಕ್ಕೆ ಬೇಕಾಗುವ ಸುರಕ್ಷತಾ ವ್ಯವಸ್ಥೆಯ ನಿರ್ಮಾಣ ಆರಂಭವಾದ ಮೇಲೆ ಸಾರ್ವಜನಿಕರು ಈ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಸದ್ಯದ ಮಾಹಿತಿಯಂತೆ ಕಾರುಗಳಿಗೆ ₹30, ಗೂಡ್ಸ್‌ ವಾಹನಗಳಿಗೆ ₹50, ಲಾರಿ ಹಾಗೂ ಬಸ್‌ಗಳಿಗೆ ₹100 ಟೋಲ್ ವಸೂಲಿ ನಡೆಯಲಿದೆ ಎನ್ನಲಾಗಿದೆ. ಈ ಟೋಲ್‌ನೊಂದಿಗೆ ಇದೇ ರಸ್ತೆಗೆ ಶಿಕಾರಿಪುರ, ಶಿವಮೊಗ್ಗ ಬಳಿಯೂ ಟೋಲ್ ಸಂಗ್ರಹ ನಡೆಯಲಿದೆ ಎಂದು ತಿಳಿದಿದೆ. 60 ಕಿಮೀ ಅಂತರಕ್ಕೊಂದು ಟೋಲ್ ಸಂಗ್ರಹ ಕೇಂದ್ರ ಆರಂಭವಾಗಲಿವೆ ಎಂಬ ಮಾಹಿತಿ ಇದೆ.