ಮೂರು ವರ್ಷಕ್ಕೊಮ್ಮೆ ಜರುಗುವ ಕರ್ನಾಟಕದ ಅತಿದೊಡ್ಡ ಜಾತ್ರೆಗಳಲ್ಲಿ ಒಂದಾದ ಯಲ್ಲಾಪುರ ಗ್ರಾಮದೇವಿಯರ ಜಾತ್ರೆಯು ಫೆ.೧೧ರಿಂದ ೧೯ರವರೆಗೆ ನಡೆಯಲಿದೆ. ಜಾತ್ರೆಯ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಜಾತ್ರೆ ವಿಧಿವಿಧಾನದ ಮೊದಲ ಹಂತ ಮುಕ್ತಾಯ । ೧೦ರಂದು ದೇವಸ್ಥಾನದಲ್ಲಿ ದೇವಿಯರ ಪುನರ್ ಪ್ರತಿಷ್ಠಾಪನೆಶಂಕರ ಭಟ್ಟ ತಾರೀಮಕ್ಕಿ
ಕನ್ನಡಪ್ರಭ ವಾರ್ತೆ ಯಲ್ಲಾಪುರಮೂರು ವರ್ಷಕ್ಕೊಮ್ಮೆ ಜರುಗುವ ಕರ್ನಾಟಕದ ಅತಿದೊಡ್ಡ ಜಾತ್ರೆಗಳಲ್ಲಿ ಒಂದಾದ ಯಲ್ಲಾಪುರ ಗ್ರಾಮದೇವಿಯರ ಜಾತ್ರೆಯು ಫೆ.೧೧ರಿಂದ ೧೯ರವರೆಗೆ ನಡೆಯಲಿದೆ. ಜಾತ್ರೆಯ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಮೂರು ಹೊರಮಂಗಳವಾರ ಆಚರಣೆ ಯ ನಂತರ ದೇವಿಯರಿಗೆ ಅಂಕೆ ಹಾಕಲಾಗಿದ್ದು, ದೇವಸ್ಥಾನದ ಬಾಗಿಲು ಮುಚ್ಚಲಾಗಿದೆ. ಜಾತ್ರೆ ವಿಧಿವಿಧಾನದ ಮೊದಲ ಹಂತ ಮುಕ್ತಾಯಗೊಂಡಿದೆ.ದೇವಿಯರ ಶಕ್ತಿಯನ್ನು ಕಳಸದಲ್ಲಿ ಆವಾಹನೆ ಮಾಡಿ, ಮೂರ್ತಿ ಬಿಡಿಸಲಾಗಿದೆ. ಅವುಗಳಿಗೆ ಬಣ್ಣ ಬಳಿಯುವ ಕಾರ್ಯವನ್ನು ಗುಡಿಗಾರ ಮಿರಾಶಿಗಳಾದ ಸಂತೋಷ ಗುಡಿಗಾರ ಮತ್ತು ದಿಲೀಪ ಗುಡಿಗಾರ ಕುಟುಂಬದವರು ನೆರವೇರಿಸುತ್ತಿದ್ದಾರೆ. ಜಾತ್ರೆಯ ಮುನ್ನಾದಿನ ಫೆ.೧೦ರ ಮಂಗಳವಾರ ದೇವಿಯರನ್ನು ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾಪನೆ ಮಾಡಿ ವಿವಾಹ ಕಾರ್ಯ ನೆರವೇರಿಸುವರು. ಬುಧವಾರ ಹೆಗಲು, ತಲೆಯಮೇಲೆ ದೇವಿಯರ ಪೀಠ ಹೊತ್ತು ಭಕ್ತರು ಮೆರವಣಿಗೆಯಲ್ಲಿ ಗದ್ದುಗೆಗೆ ತರುವರು.
ಮೈದಾನದ ಜಾತ್ರಾ ಗದ್ದುಗೆಯಲ್ಲಿ ಗೆಳೆಯರ ಬಳಗ ನಿರ್ಮಿಸಿಕೊಟ್ಟ ದೇವಿ ಗದ್ದುಗೆಯನ್ನು ಬಣ್ಣ, ವಿದ್ಯುದ್ದೀಪಗಳಿಂದ ಅಲಂಕರಿಸಲಾಗುತ್ತಿದೆ. ಅದೇ ರೀತಿ ೧೦೦-೭೫ ಅಡಿಯ ಬೃಹದಾಕಾರದ ಮಂಟಪ ನಿರ್ಮಾಣವಾಗುತ್ತಿದೆ. ಕಾಂಚಿ ದೇವಸ್ಥಾನದ ಮಾದರಿಯಲ್ಲಿ ಹೊಯ್ಸಳ ಶೈಲಿಯ ವೆಲ್ಲೂರಿನ ಮಹಾಲಕ್ಷ್ಮೀ ದೇವಸ್ಥಾನದ ಮಂಟಪ ನಿರ್ಮಾಣವಾಗುತ್ತಿದೆ.ಮೊದಲ ಬಾರಿಗೆ ಜಾತ್ರಾ ಗದ್ದುಗೆಯಿಂದ ಗಾಂಧಿ ಚೌಕದವರೆಗೆ ವಿಶೇಷ ದೀಪಾಲಂಕಾರ ಮಾಡಲಾಗುತ್ತಿದೆ. ದೇವಸ್ಥಾನದ ಹೊರಗೆ ಒಟ್ಟೂ ನಾಲ್ಕು ಎಲ್‌ಇಡಿ ಪರದೆ ಅಳವಡಿಸಲಾಗುತ್ತಿದೆ. ಮಂಟಪದಲ್ಲಿ ಸುರಕ್ಷತೆಗಾಗಿ ೧೮ ಸಿಸಿ ಕ್ಯಾಮೆರಾ, ದರ್ಶನ ಕ್ಷಿಪ್ರವಾಗಿ ಮುಗಿಯಲು ವಿಶಾಲ ದಾರಿ ವ್ಯವಸ್ಥೆ, ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಕೌಂಟರ್, ಅಗ್ನಿಶಾಮಕದಳ, ಆಂಬ್ಯುಲೆನ್ಸ್ ಸದಾ ಸನ್ನದ್ಧ ಸ್ಥಿತಿಯಲ್ಲಿರಲು ವ್ಯವಸ್ಥೆ ಮಾಡಲಾಗಿದೆ. ಹಗಲು ರಾತ್ರಿಯೆನ್ನದೇ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ರಾಜೇಂದ್ರ ಪ್ರಸಾದ ಭಟ್ಟ, ಜಾತ್ರಾ ಉಸ್ತುವಾರಿಗಳಾದ ರವಿ ಶಾನಭಾಗ, ಬಾಲಕೃಷ್ಣ ನಾಯಕ ನೇತೃತ್ವದಲ್ಲಿ ಆಯಗಾರ ಮುಖ್ಯಸ್ಥ ಮನೋಹರ ಹೆಗಡೆ ದೇವಸ್ಥಾನದ ಮಿರಾಶಿಗಳು, ವ್ಯವಸ್ಥಾಪಕರು, ದೇವಳಿಗಳು, ಅರ್ಚಕರು ಹಾಗೂ ಸ್ವಯಂ ಸೇವಕರು ಶ್ರಮಿಸುತ್ತಿದ್ದಾರೆ.
ಅಮ್ಯೂಸ್‌ಮೆಂಟ್ ಪಾರ್ಕ್ವೈಟಿಎಸ್ಎಸ್ ಮತ್ತು ಮಾದರಿ ಶಾಲಾ ಮೈದಾನದಲ್ಲಿ ಬೃಹದಾಕಾರದ ಅಮ್ಯೂಸ್ ಮೆಂಟ್ ಪಾರ್ಕ್ ಅಳವಡಿಸಲಾಗುತ್ತಿದೆ. ಶ್ರೀರಾಮ ರೆಸಿಡೆನ್ಸಿ ಹಿಂಭಾಗದಲ್ಲಿ ಕೂಡ ಅಮ್ಯೂಸ್ ಮೆಂಟ್ ಪಾರ್ಕ್ ಅಳವಡಿಸಿದೆ.
೭ ದಿನ ಅನ್ನದಾನಕಟ್ಟಿಗೆ ಡಿಪೋ ಆವಾರದಲ್ಲಿ ಸಾರ್ವಜನಿಕ ಅನ್ನ ಸಂತರ್ಪಣಾ ಸಮಿತಿ ಏಳು ದಿನ ಮಧ್ಯಾಹ್ನ ಅನ್ನದಾನಕ್ಕೆ ಮುಂದಾಗಿದೆ. ಇದಕ್ಕಾಗಿ ಅಗತ್ಯವಾದ ಎಲ್ಲ ವ್ಯವಸ್ಥೆಗಳು ಸಂಪನ್ಮೂಲ ಸಂಗ್ರಹದಲ್ಲಿ ತೊಡಗಿದೆ. ಒಟ್ಟಿನಲ್ಲಿ ಜಾತ್ರೆ ಆರಂಭಗೊಳ್ಳಲು ಕೇವಲ ನಾಲ್ಕು ದಿನಗಳು ಮಾತ್ರವಿದ್ದು ಸಮರೋಪಾದಿಯಲ್ಲಿ ಸಿದ್ಧತಾ ಕಾರ್ಯ ನಡೆಯುತ್ತಿದೆ.