ಮಂಡ್ಯ ಜಿಲ್ಲಾದ್ಯಂತ ವರಮಹಾಲಕ್ಷ್ಮಿ ಹಬ್ಬಕ್ಕೆ ಸಡಗರದ ಸಿದ್ಧತೆ

| Published : Aug 08 2025, 01:00 AM IST

ಮಂಡ್ಯ ಜಿಲ್ಲಾದ್ಯಂತ ವರಮಹಾಲಕ್ಷ್ಮಿ ಹಬ್ಬಕ್ಕೆ ಸಡಗರದ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ಶ್ರಾವಣಮಾಸದ ಆರಂಭದ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಬೆಲೆ ಏರಿಕೆಯ ನಡುವೆಯೂ ಹಬ್ಬದ ಖರೀದಿ ಭರಾಟೆ ಜೋರಾಗಿದೆ. ಲಕ್ಷ್ಮೀಯನ್ನು ಪ್ರತಿಷ್ಠಾಪಿಸಲು ಸುಮಂಗಲಿಯರು-ಯುವತಿಯರು ಸಂಭ್ರಮ-ಸಡಗರದ ಸಿದ್ಧತೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಎಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ಶ್ರಾವಣಮಾಸದ ಆರಂಭದ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಬೆಲೆ ಏರಿಕೆಯ ನಡುವೆಯೂ ಹಬ್ಬದ ಖರೀದಿ ಭರಾಟೆ ಜೋರಾಗಿದೆ.

ಲಕ್ಷ್ಮಿಯನ್ನು ಪ್ರತಿಷ್ಠಾಪಿಸಲು ಸುಮಂಗಲಿಯರು-ಯುವತಿಯರು ಸಂಭ್ರಮ-ಸಡಗರದ ಸಿದ್ಧತೆ ನಡೆಸಿದ್ದಾರೆ. ಮನೆಯನ್ನೆಲ್ಲಾ ಸ್ವಚ್ಛಗೊಳಿಸಿ ಬಗೆ ಬಗೆಯ ತಿಂಡಿ-ತಿನಿಸುಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಹಬ್ಬದ ಪ್ರಯುಕ್ತ ಹೂವು-ಹಣ್ಣಿನ ಬೆಲೆ ಕೊಂಚ ದುಬಾರಿಯಾಗಿದೆ.

ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಪೇಟೆಬೀದಿ, ವಿಶ್ವೇಶ್ವರಯ್ಯ ರಸ್ತೆ, ತರಕಾರಿ ಮಾರುಕಟ್ಟೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಹೂವು-ಹಣ್ಣು, ಬಾಳೆಕಂದು, ತಾವರೆ ಹೂವಿನ ವ್ಯಾಪಾರದ ಭರಾಟೆ ಜೋರಾಗಿತ್ತು. ಬಹುತೇಕರು ಬುಧವಾರವೇ ಹಬ್ಬದ ಸಾಮಾನುಗಳ ಖರೀದಿ ಮಾಡಿಕೊಂಡಿದ್ದರೆ. ಇನ್ನೂ ಹಲವರು ಗುರುವಾರ ಬೆಳಗ್ಗೆಯಿಂದಲೇ ಹಬ್ಬಕ್ಕೆ ಬೇಕಾದ ಸಾಮಾನುಗಳ ಖರೀದಿಯಲ್ಲಿ ತೊಡಗಿದ್ದರು. ಇದರಿಂದ ಪ್ರಮುಖ ರಸ್ತೆಗಳೆಲ್ಲಾ ಜನಜಂಗುಳಿಯಿಂದ ತುಂಬಿಹೋಗಿತ್ತು.

ಬೆಳ್ಳಿಯ ಲಕ್ಷ್ಮಿ ಮುಖವಾಡಕ್ಕೆ ಬೇಡಿಕೆ:

ಲಕ್ಷ್ಮಿಯನ್ನು ಪ್ರತಿಷ್ಠಾಪನೆ ಮಾಡುವವರು ಬೆಳ್ಳಿಯಿಂದ ತಯಾರಿಸಿದ ಲಕ್ಷ್ಮಿ ಮುಖವಾಡ ಖರೀದಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದರು. ಹಬ್ಬದ ವೇಳೆ ವರಮಹಾಲಕ್ಷ್ಮಿಯ ಬೆಳ್ಳಿ ಮುಖವಾಡಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಆಭರಣ ತಯಾರಕರೂ ಸಹ ವಿವಿಧ ಗಾತ್ರದ ಲಕ್ಷ್ಮಿ ಮುಖವಾಡಗಳನ್ನು ಮಾರಾಟಕ್ಕಿಟ್ಟಿದ್ದರು. ಇದನ್ನು ಖರೀದಿಸಿದ ಮಹಿಳೆಯರು ನಂತರದಲ್ಲಿ ಕುಶಲ ಕರ್ಮಿಗಳಲ್ಲಿ ಹಣೆಗೆ ಕೆಂಪು ಹರಳು ಕೂರಿಸುವುದು, ಚಿನ್ನದ ಮೂಗುತಿ ತೊಡಿಸಿ ಅದರ ಅಂದವನ್ನು ಹೆಚ್ಚಿಸಿ ಸಂತೋಷಪಟ್ಟರು. ಈ ಹಿಂದೆಯೇ ಬೆಳ್ಳಿ ಮುಖವಾಡಗಳನ್ನು ಖರೀದಿಸಿಟ್ಟುಕೊಂಡವರು ಅವುಗಳನ್ನು ಅಕ್ಕಸಾಲಿಗರ ಬಳಿ ತಂದು ಪಾಲಿಶ್ ಮಾಡಿಸಿ ಲಕ್ಷ್ಮಿಯ ಸೊಬಗನ್ನು ಹೆಚ್ಚಿಸುತ್ತಿದ್ದರು.

ವರಮಹಾಲಕ್ಷ್ಮಿ ಹಬ್ಬಕ್ಕೆ ಶ್ರೀಮಂತರು ಚಿನ್ನ, ಬೆಳ್ಳಿ ಮುಖವಾಡವನ್ನು ಕಲಶದಲ್ಲಿ ಪ್ರತಿಷ್ಠಾಪಿಸಿ ಅಲಂಕರಿಸಿದರೆ, ಮಧ್ಯಮವರ್ಗದವರು ಮತ್ತು ಬಡವರು ತೆಂಗಿನಕಾಯಿಗೆ ಲಕ್ಷ್ಮಿಯನ್ನು ಚಿತ್ರಿಸಿ ಅಲಂಕಾರ ಮಾಡುವುದು ವಾಡಿಕೆ. ಬೆಳ್ಳಿಯ ಲಕ್ಷ್ಮಿಯ ಮುಖವಾಡವನ್ನು ಪ್ರತಿಷ್ಠಾಪಿಸುವವರು ಕನಿಷ್ಠ ೮೦ ಗ್ರಾಂನಿಂದ ೧೫೦ ಗ್ರಾಂವರೆಗೆ ಕೊಳ್ಳುವುದುಂಟು. ಈ ಮುಖವಾಡಗಳಿಗೆ ಕನಿಷ್ಠ ೮ ಸಾವಿರ ರು.ನಿಂದ ೧೮ ಸಾವಿರ ರು.ವರೆಗೂ ಬೆಲೆ ಇದೆ. ಆದರೂ ಬೆಳ್ಳಿಯ ಮುಖವಾಡಗಳನ್ನು ಕೊಳ್ಳುವವರ ಸಂಖ್ಯೆ ಕಡಿಮೆಯಾಗಿಲ್ಲ.

ಆಧುನಿಕತೆ ಹೆಚ್ಚಿದಂತೆ ಫ್ಯಾಷನ್ ಲಕ್ಷ್ಮಿಯರು ಮಾರುಕಟ್ಟೆಗೆ ಬಂದು ಕುಳಿತಿದ್ದಾರೆ. ಬೆಳ್ಳಿ ಲೇಪನದೊಂದಿಗೆ ಅದ್ಧೂರಿ ಅಲಂಕಾರದೊಂದಿಗೆ ಬಂದಿರುವ ಲಕ್ಷ್ಮಿಯರು ಮೋಡಿ ಮಾಡುತ್ತಿದ್ದಾರೆ. ಸರ್ವಾಲಂಕಾರಗೊಂಡಿರುವ ಈ ಲಕ್ಷ್ಮಿಯರನ್ನು ಕೊಂಡೊಯ್ದು ಪ್ರತಿಷ್ಠಾಪಿಸುವುದಷ್ಟೇ ಗೃಹಿಣಿಯರ ಕೆಲಸ. ಮಹಿಳೆಯರನ್ನು ಆಕರ್ಷಿಸುವ ರೀತಿಯಲ್ಲಿ ವೈವಿಧ್ಯಮಯವಾಗಿ ಲಕ್ಷ್ಮಿಯರಿಗೆ ಸೀರೆಯುಡಿಸಿ ಮಾರಾಟಕ್ಕೆ ಇಟ್ಟಿದ್ದಾರೆ.

ಹೂವು-ಹಣ್ಣು ಬೆಲೆ ದುಪ್ಪಟ್ಟು:

ಹಬ್ಬದ ಅಂಗವಾಗಿ ಮಾರುಕಟ್ಟೆಯಲ್ಲಿ ಹೂವು-ಹಣ್ಣಿನ ಬೆಲೆಯಲ್ಲಿ ದುಪ್ಪಟ್ಟು ಏರಿಕೆಯಾಗಿರುವುದು ಕಂಡುಬಂದಿತು. ಮಿಕ್ಸ್ ಹಣ್ಣು ಪ್ರತಿ ಕೆಜಿಗೆ ೩೦೦ ರೂ., ಸೇಬು-೨೦೦ ರು., ಮರಸೇಬು-೧೬೦ ರು., ಏಲಕ್ಕಿ ಬಾಳೆ ಹಣ್ಣು- ೧೦೦ ರು., ಪಚ್ಚಬಾಳೆ-೪೦ ರು., ದ್ರಾಕ್ಷಿ-೨೦೦ ರು., ಅನಾನಸ್ ಒಂದಕ್ಕೆ ೫೦ ರು., ಕಿತ್ತಳೆ- ೧೬೦ ರು., ಮೂಸಂಬಿ-೧೦೦, ರು, ದಾಳಿಂಬೆ-೧೦೦ ರು., ಸೀಬೆಹಣ್ಣು-೧೦೦ ರು., ಮಾವಿನಹಣ್ಣು-೧೦೦, ಡ್ರ್ಯಾಗನ್ ಫ್ರೂಟ್-೧೨೦ ರು., ಸೀತಾಫಲ-೮೦ ರು,ಗೆ ಮಾರಾಟವಾಗುತ್ತಿತ್ತು.

ಇನ್ನು ಸೇವಂತಿಗೆ ಹೂವು ಪ್ರತಿ ಮಾರಿಗೆ ೧೦೦ ರಿಂದ ೧೨೦ ರು., ಮಲ್ಲಿಗೆ- ೧೫೦-೨೦೦ ರು., ಕಾಕಡಾ-೧೫೦ ರು., ಬಿಡಿ ಹೂ ೧೦೦ ಗ್ರಾಂಗೆ ೪೦ ರು., ಮಾವಿನ ಸೊಪ್ಪುಜೊತೆ ೨೦ ರು., ಬಾಳೆ ಕಂದು ೩೦-೫೦ ರು., ಚೆಂಡು ಹೂ ಕೆಜಿಗೆ ೧೦೦ ರು., ತಾವರೆ ಹೂ ಜೊತೆ ೫೦ ರಿಂದ ೮೦ ರು.ಗೆ ಮಾರಾಟವಾಗುತ್ತಿತ್ತು.

ತರಕಾರಿ ಬೆಲೆಯಲ್ಲೂ ಏರಿಕೆ:

ತರಕಾರಿ ಬೆಲೆಯೂ ಸಾಮಾನ್ಯದರದಲ್ಲೇ ಇತ್ತು. ಪ್ರತಿ ಕೆಜಿ ಮಿಕ್ಸ್ ತರಕಾರಿ ೫೦ ರು., ಬೀನಿಸ್-೮೦, ಕ್ಯಾರೆಟ್-೮೦, ಗಡ್ಡೆಕೋಸು-೬೦ ರು., ದಪ್ಪ ಮೆಣಸಿನಕಾಯಿ-೮೦ ರು., ಅವರೆಕಾಯಿ -೧೦೦ (ಎರಡೂವರೆ ಕೆಜಿ) ರು., ಪ್ರತಿ ಕೆಜಿಗೆ ಟಮೋಟೋ-೪೦, ನುಗ್ಗೆಕಾಯಿ-೪೦ ರು. ಬೀಟ್‌ರೋಟ್-೫೦, ಸಬ್ಬಸಿಗೆ ಸೊಪ್ಪು ಪ್ರತಿ ಕಟ್ಟಿಗೆ ೧೦ ರು., ಮೆಂತ್ಯ ಸೊಪ್ಪು-೧೦ರಿಂದ ೨೦ ರು.ನಂತೆ ಮಾರಾಟವಾಗುತ್ತಿತ್ತು.

ನೈವೇದ್ಯಕ್ಕೆ ತಿನಿಸುಗಳ ತಯಾರಿ:

ಲಕ್ಷ್ಮಿಪೂಜೆಗಾಗಿ ವಿವಿಧ ಮಾದರಿಯ ತಿನಿಸುಗಳನ್ನು ಮಹಿಳೆಯರು ಮನೆಯಲ್ಲಿ ಸಿದ್ಧಪಡಿಸಿಟ್ಟುಕೊಂಡಿದ್ದಾರೆ. ಸಕ್ಕರೆ ಮಿಠಾಯಿ, ರವೆಉಂಡೆ, ಹೋಳಿಗೆ, ಚಕ್ಕುಲಿ, ಕೋಡುಬಳೆ, ಕಜ್ಜಾಯ, ಕರ್ಜಿಕಾಯಿ, ಬಾದಾಮಿ, ಕರ್ಜೂರ, ಒಣದ್ರಾಕ್ಷಿ, ಗೋಡಂಬಿ, ಕಲ್ಲುಸಕ್ಕರೆ ಜೊತೆಗೆ ಗೋಧಿ ಪಾಯಸ, ಕಡಲೆಬೇಳೆ ಪಾಯಸ, ಹೆಸರುಬೇಳೆ ಪಾಯಸವನ್ನು ನೈವೇದ್ಯ ರೂಪದಲ್ಲಿಡುವ ಖಾದ್ಯಗಳ ತಯಾರಿಯಲ್ಲಿ ಮಹಿಳೆಯರು ತೊಡಗಿಸಿಕೊಂಡಿದ್ದರು.

ಇತ್ತೀಚಿನ ದಿನಗಳಲ್ಲಿ ವರಮಹಾಲಕ್ಷ್ಮಿ ಹಬ್ಬ ಗ್ರಾಮೀಣ ಪ್ರದೇಶದ ಜನರ ಮೇಲೂ ಪ್ರಭಾವ ಬೀರಿದ್ದು, ಹಳ್ಳಿಯಿಂದಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹಬ್ಬಕ್ಕೆ ಅಗತ್ಯವಾಗಿ ಬೇಕಾದ ಸಾಮಾನುಗಳನ್ನು ಖರೀದಿಸುತ್ತಿದ್ದು ಕಂಡುಬಂತು. ಒಟ್ಟಾರೆ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು.