ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ವಿವಿಧ ರೀತಿಯ ಯೋಜನೆಗಳನ್ನು ಹಾಕಿಕೊಂಡಿದ್ದಾರೆ.

ಸಂಡೂರು: ಹೊಸ ವರ್ಷ ೨೦೨೬ನ್ನು ಸ್ವಾಗತಿಸಲು ಎಲ್ಲೆಡೆ ಭರ್ಜರಿ ಸಿದ್ಧತೆ ನಡೆದಿದೆ. ಯುವ ಜನತೆ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ವಿವಿಧ ರೀತಿಯ ಯೋಜನೆಗಳನ್ನು ಹಾಕಿಕೊಂಡಿದ್ದಾರೆ.

ಕೇಕ್‌ಗಳಿಗೆ ಭರ್ಜರಿ ಡಿಮ್ಯಾಂಡ್:

ಹೊಸ ವರ್ಷದ ಹಿನ್ನೆಲೆಯಲ್ಲಿ ಎಲ್ಲೆಡೆ ಕೇಕ್‌ಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಬೇಕರಿಗಳವರು ತಮ್ಮ ಅಂಗಡಿಗಳ ಮುಂದೆ ಶ್ಯಾಮಿಯಾನ ಹಾಕಿ, ವಿವಿಧ ಆಕಾರದ ಮತ್ತು ವಿವಿಧ ಗಾತ್ರದ ಕೇಕ್‌ಗಳನ್ನು ಸಿದ್ಧಪಡಿಸಿ ಮಾರಾಟಕ್ಕಿಟ್ಟಿದ್ದಾರೆ. ಜನತೆ ಅದರಲ್ಲೂ ಪ್ರಮುಖವಾಗಿ ಯುವ ಜನತೆ ಮತ್ತು ಚಿಣ್ಣರು ಪಟ್ಟಣದಲ್ಲಿನ ಬೇಕರಿಗಳಿಗೆ ಆಗಮಿಸಿ, ಕೇಕ್‌ಗಳನ್ನು ಕೊಂಡೊಯುತ್ತಿದ್ದುದು ಕಂಡುಬಂದಿತು.

ಅದೇರೀತಿಯಾಗಿ ಹೊಸ ವರ್ಷದ ಮೊದಲ ದಿನದಂದು ತಮ್ಮ ಮನೆಯ ಅಂಗಳವನ್ನು ರಂಗುರಂಗಿನ ರಂಗೋಲಿಗಳಿಂದ ಅಲಂಕರಿಸಲು ಜನತೆ ವಿವಿಧ ಬಣ್ಣದ ರಂಗೋಲಿಯನ್ನು ಖರೀದಿಸುತ್ತಿದ್ದುದು ಕಂಡು ಬಂದಿತು.

ಬುಧವಾರ ಕೊನೆಗೊಳ್ಳಲಿರುವ ೨೦೨೫ಕ್ಕೆ ವಿದಾಯ ಹೇಳಿ, ಗುರುವಾರದಂದು ೨೦೨೬ರ ಮೊದಲ ದಿನವನ್ನು ಸಂಭ್ರಮದಿಂದ ಸ್ವಾಗತಿಸಲು ಎಲ್ಲೆಡೆ ಭರ್ಜರಿ ಸಿದ್ಧತೆ ನಡೆದಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವರ್ಷಕ್ಕೆ ಶುಭಕೋರುವ ಸಂದೇಶಗಳು ಭರದಿಂದ ಅಡ್ವಾನ್ಸ್ ಆಗಿ ಹರಿದಾಡತೊಡಗಿವೆ. ಹೊಸ ವರ್ಷ ಎಲ್ಲೆಡೆ ಶಾಂತಿ ಸುವ್ಯವಸ್ಥೆ, ಸಮೃದ್ಧಿ ನೆಲೆಸಲಿ ಎಂಬುದು ಎಲ್ಲರ ಆಶಯ.

ಸಂಡೂರಿನ ಬೇಕರಿಯ ಮುಂದೆ ಹೊಸ ವರ್ಷಕ್ಕಾಗಿ ಸಿದ್ಧಪಡಿಸಿರುವ ಕೇಕ್‌ಗಳನ್ನು ಯುವಕರು ಖರೀದಿಸುತ್ತಿರುವುದು.