ಕನ್ನಡಪ್ರಭ ವಾರ್ತೆ ಮಾಲೂರು
ಈ ಬಾರಿ ಬೇಸಿಗೆ ಬಹಳ ಪ್ರಖರವಾಗಿದ್ದು, ಮಾಲೂರು ತಾಲೂಕಿನ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಸಕಲ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಾ.ಪಂ. ಇಒ ಕೃಷ್ಣಪ್ಪ ಹೇಳಿದರು.ತಾಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 321 ಕಂದಾಯ ಗ್ರಾಮಗಳಲ್ಲಿ ಸದ್ಯಕ್ಕೆ 6 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಂಡು ಬಂದಿದೆ. ಅಲ್ಲಿ ಈಗಾಗಲೇ ಖಾಸಗಿ ಕೊಳವೆ ಬಾವಿಗಳ ಮೂಲಕ ಗ್ರಾಮಗಳಿಗೆ ನೀರು ವಿತರಿಸಲಾಗುತ್ತಿದೆ ಎಂದರು.
ತಾಲೂಕಿನಲ್ಲಿ ಯಾವುದೇ ಗ್ರಾಮದಲ್ಲೂ ಟ್ಯಾಂಕರ್ ಮೂಲಕ ನೀರು ವಿತರಣೆ ಮಾಡುವುದಿಲ್ಲ. ಆರು ಹಳ್ಳಿಗಳಲ್ಲಿ ಪಂಚಾಯಿತಿಯ ಕೊಳವೆ ಬಾವಿಗಳಲ್ಲಿ ಇಳುವರಿ ಕಡಿಮೆಯಾದ ಕಾರಣ ನೀರಿನ ಸಮಸ್ಯೆ ಉಂಟಾಗಿದೆ. ಆ ಕೊಳವೆ ಬಾವಿಯನ್ನು ದುರಸ್ತಿ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.ಇದಲ್ಲದೇ ತಾಲೂಕಿನಲ್ಲಿ ಇನ್ನೂ 77 ಗ್ರಾಮಗಳಲ್ಲಿ ಮುಂದಿನ 2 ತಿಂಗಳಲ್ಲಿ ನೀರಿನ ಸಮಸ್ಯೆ ಬರಲಿದೆ ಎಂದು ಅಂದಾಜಿಸಲಾಗಿದ್ದು, ಆ ಗ್ರಾಮಗಳಲ್ಲಿ ಲಭ್ಯ ಇರುವ ಖಾಸಗಿ ಕೊಳವೆ ಬಾವಿಗಳ ಮಾಹಿತಿಯನ್ನು ತಯಾರು ಮಾಡಲಾಗಿದೆ.ಈ ಬೇಸಿಗೆಯಲ್ಲಿ ನೀರಿನ ಸಮಸ್ಯೆ ನೀಗಿಸಲು ಬೇಕಾಗುವ 2.32 ಕೋಟಿ ರು.ಗಳನ್ನು ನಿಗದಿಪಡಿಸಲಾಗಿದೆ. ಇದರ ಕ್ರೀಯಾ ಯೋಜನೆ ಸಿದ್ಧಪಡಿಸಿ ಈಗಾಗಲೇ ಜಿಲ್ಲಾಧಿಕಾರಿಗೆ ಕಳುಹಿಸಿಕೊಡಲಾಗಿದೆ ಎಂದರು.
ತಾಲೂಕಿನ ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಕಂಡು ಬಂದಲ್ಲಿ ಜನರು 08151-232213 ನ್ನು ಕೊಡಲೇ ಸಂಪರ್ಕಿಸಿ. ಇದಕ್ಕಾಗಿ ದಿನದ 24 ಗಂಟೆ ಕ್ರೀಯಾತ್ಮಕವಾಗಿರಲು ಸಿಬ್ಬಂದಿಯನ್ನು ನೇಮಿಸಲಾಗಿದೆ. ನಿಮ್ಮ ದೂರು ಬಂದ ತಕ್ಷಣ ಸಂಬಂಧ ಪಟ್ಟಣ ಪಂಚಾಯಿತಿಗೆ ತಿಳಿಸುವ ಜತೆಯಲ್ಲಿ ಜಿಲ್ಲಾಡಳಿತಕ್ಕೂ ಮಾಹಿತಿ ನೀಡಲಿದ್ದಾರೆ ಎಂದರು.