ವೈಭವದ ಸ್ವಾತಂತ್ರ್ಯೋತ್ಸವಕ್ಕೆ ಪೂರ್ವಭಾವಿ ಸಭೆ

| Published : Aug 05 2025, 11:45 PM IST

ವೈಭವದ ಸ್ವಾತಂತ್ರ್ಯೋತ್ಸವಕ್ಕೆ ಪೂರ್ವಭಾವಿ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಅತ್ಯಂತ ಸಂಭ್ರಮದಿಂದ 78ನೇ ಸ್ವಾತಂತ್ರೋತ್ಸವವನ್ನು ವೈಭವದಿಂದ ಆಚರಿಸಲಾಗುವುದು ಎಂದು ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ತಿಳಿಸಿದರು. ಸರ್ಕಾರಿ ಕಟ್ಟಡಗಳಿಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲು ಸರ್ಕಾರಿ ಅಧಿಕಾರಿಗಳಿಗೆ ಸೂಚಿಸಲಾಯಿತು. ಪಟ್ಟಣದ ಸೋಷಿಯಲ್ ಕ್ಲಬ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗುವ ವಿದ್ಯಾರ್ಥಿಗಳು, ಅಧಿಕಾರಿಗಳು, ನೌಕರರು ಹಾಗೂ ಸಾರ್ವಜನಿಕರಿಗೆ ಬೆಳಗ್ಗೆ ೮ ಗಂಟೆಯಿಂದ ೧೦.೩೦ರ ತನಕ ಉಪಹಾರದ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಅತ್ಯಂತ ಸಂಭ್ರಮದಿಂದ 78ನೇ ಸ್ವಾತಂತ್ರೋತ್ಸವವನ್ನು ವೈಭವದಿಂದ ಆಚರಿಸಲಾಗುವುದು ಎಂದು ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಸ್ವತಂತ್ರ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆಯ ಆದ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ ಇಲಾಖಾ ಅಧಿಕಾರಿಗಳಿಗೆ ನೀಡಿರುವ ಜವಾಬ್ದಾರಿಗಳನ್ನು ಚಾಚೂ ತಪ್ಪದೇ ನಿರ್ವಹಿಸುವಂತೆ ತಿಳಿಸಿ, ಅಧಿಕಾರಿಗಳು ಮತ್ತು ವಿವಿಧ ಸಂಘಸಂಸ್ಥೆಗಳ ಸಹಕಾರವನ್ನು ಕೋರಿದರು. ಆಗಸ್ಟ್ 15ರ ಶುಕ್ರವಾರ ಬೆಳಗ್ಗೆ ಎಂಟು ಗಂಟೆಗೆ ಗಣ್ಯ ವ್ಯಕ್ತಿಗಳ ಭಾವಚಿತ್ರಗಳು, ವಿವಿಧ ಇಲಾಖೆಗಳ ೫ ಸ್ತಬ್ಧ ಚಿತ್ರಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಒಳಗೊಂಡ ಪಥ ಸಂಚಲನ ಚೆನ್ನಾಂಬಿಕ ವೃತ್ತದಿಂದ ಹೊರಟು ಮುಖ್ಯ ರಸ್ತೆಗಳಲ್ಲಿ ನಡೆಸುವ ಮೂಲಕ ಬಯಲು ರಂಗಮಂದಿರಕ್ಕೆ ಆಗಮಿಸುವುದು. ಒಂಬತ್ತು ಗಂಟೆಗೆ ಮಾನ್ಯ ಶಾಸಕರ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ಮಾಡಲು ನಿರ್ಣಯಿಸಲಾಯಿತು. ಧ್ವಜಾರೋಹಣಕ್ಕೆ ಸಂಬಧಿಸಿದಂತೆ ಮೆರವಣಿಗೆ, ಬ್ಯಾಂಡ್‌ ಸೆಟ್, ಬಂದೋಬಸ್ತ್, ಸ್ವಚ್ಛತೆ, ವೇದಿಕೆ ಕಾರ್ಯಕ್ರಮ, ಮುಖ್ಯ ಭಾಷಣಕಾರ ಮಾಹಿತಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಐದು ಜನರನ್ನು ಗೌರವಿಸುವ ಬಗ್ಗೆ ಚರ್ಚಿಸಲಾಯಿತು. ಸರ್ಕಾರಿ ಕಟ್ಟಡಗಳಿಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲು ಸರ್ಕಾರಿ ಅಧಿಕಾರಿಗಳಿಗೆ ಸೂಚಿಸಲಾಯಿತು. ಪಟ್ಟಣದ ಸೋಷಿಯಲ್ ಕ್ಲಬ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗುವ ವಿದ್ಯಾರ್ಥಿಗಳು, ಅಧಿಕಾರಿಗಳು, ನೌಕರರು ಹಾಗೂ ಸಾರ್ವಜನಿಕರಿಗೆ ಬೆಳಗ್ಗೆ ೮ ಗಂಟೆಯಿಂದ ೧೦.೩೦ರ ತನಕ ಉಪಹಾರದ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.

ಇಒ ಮುನಿರಾಜು, ಪ್ರಾಂಶುಪಾಲ ದೇವರಾಜು, ನಿ.ಪಾಂಶುಪಾಲ ಪುಟ್ಟಸೋಮಪ್ಪ, ಉಪ ತಹಸೀಲ್ದಾರ್ ರೂಪೇಶ್, ಉಪ ನೊಂಧಣಾಧಿಕಾರಿ ರಾಕೇಶ್, ಮೀನುಗಾರಿಕೆ ಇಲಾಖೆಯ ಅಧಿಕಾರಿ ಸುಮಾ, ಟಿಎಚ್‌ಒ ರಾಜೇಶ್, ವಲಯ ಅರಣ್ಯಾಧಿಕಾರಿ ಶೃತಿ, ಕಂದಾಯ ಇಲಾಖೆಯ ಉದಯಕುಮಾರ್, ಲಕ್ಷ್ಮೀ, ಪ್ರಸಾದ್ ಹಾಗೂ ರೋಷನ್, ಸೋಷಿಯಲ್ ಕ್ಲಬಿನ ಶಂಕರನಾರಾಯಣ ಐತಾಳ್, ಇತರರು ಇದ್ದರು.

ದೇವೇಗೌಡರ ಹೆಸರಿನ ಸಭಾಂಗಣಕ್ಕೆ ಕಾಂಗ್ರೆಸಿಗರ ಆಕ್ಷೇಪ, ಖಂಡನೆ:

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ ಅವರು ತಾಲೂಕು ಕಚೇರಿ ಸಭಾಂಗಣಕ್ಕೆ ಎಚ್.ಡಿ.ದೇವೇಗೌಡರ ಸಭಾಂಗಣವೆಂದು ಹಾಕಿದ್ದ ಫಲಕಕ್ಕೆ ಆಕ್ಷೇಪ ವ್ಯಕ್ತಪಡಿಸಿ, ತೆರೆ ಹಾಕುವಂತೆ ಸೂಚಿಸಿದರು. ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಅರ್ಜಿ ಕೊಡಿ, ಪರಿಶೀಲನೆ ಮಾಡುತ್ತೇವೆ ಎಂದರು. ಸ್ವತಂತ್ರ ಭಾರತದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಧಾನಮಂತ್ರಿಯಾಗಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ವ್ಯಕ್ತಿಯಾಗಿದ್ದಾರೆ. ಜತೆಗೆ ಕೃಷಿ ಹಾಗೂ ನೀರಾವರಿ ಕ್ಷೇತ್ರದಲ್ಲಿ ಕೈಗೊಂಡ ರೈತಪರ ಯೋಜನೆಗಳು ಅವರ ಜನಪರ ಕಾಳಜಿಗೆ ಕೈಗನ್ನಡಿಯಂತಿದೆ. ಇಂತಹ ಪ್ರಬುಧ್ಧ ರಾಜಕಾರಣಿ ಹಾಗೂ ಹೊಳೆನರಸೀಪುರ ತಾಲೂಕಿನವರೇ ಆದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರನ್ನು ಸಭಾಂಗಣಕ್ಕೆ ಇಟ್ಟಿರುವುದನ್ನು ಪ್ರಶ್ನಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವರ್ತನೆಯನ್ನು ಖಂಡಿಸುವ ಜತೆಗೆ ಶ್ರೀಯುತರ ಜನಪರ ಕಾಳಜಿಗೆ ಗೌರವ ನೀಡುವಂತೆ ಸಭೆಯಲ್ಲಿದ್ದ ಗಣ್ಯರು ಸಲಹೆ ನೀಡಿದರು.