ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಗ್ರಾಮೀಣ ವಿದ್ಯಾರ್ಥಿಗಳ ಕಲಿಕಾ ಮಟ್ಟ ಪರಿಗಣಿಸಿ ಪ್ರಶ್ನೆ ಪತ್ರಿಕೆ ಸಿದ್ದಪಡಿಸಬೇಕೇ ವಿನಹ ನಗರ ವಿದ್ಯಾರ್ಥಿಗಳ ಬುದ್ಧಿಮತ್ತೆ ಆಧರಿಸಬಾರದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಪುಟ್ಟಸ್ವಾಮಿ ಹೇಳಿದರು.ನಗರದ ಖಾಸಗಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಇತಿಹಾಸ ಹಾಗೂ ಗಣಿತಶಾಸ್ತ್ರ ವಿಷಯಗಳ ಸರ್ಕಾರಿ ಉಪನ್ಯಾಸಕರ ಪುನಶ್ಚೇತನ ಹಾಗೂ ಪ್ರಶ್ನೆ ಪತ್ರಿಕೆ ತರಬೇತಿ ಕಾರ್ಯಾಗಾರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಹಿತ ಬಯಸುವ ಪೋಷಕನ ಪಾತ್ರವನ್ನು ಉಪನ್ಯಾಸಕರು ನಿರ್ವಹಿಸಬೇಕು. ಆಗ ಮಾತ್ರ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ಪರೀಕ್ಷೆ ಭಯ ನಿವಾರಿಸುವ ನಿಟ್ಟಿನಲ್ಲಿ ಎಲ್ಲವೂ ನಿರ್ವಹಣೆ ಆಗಬೇಕೆಂದರು.
ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎಸ್.ದೇವೇಂದ್ರಪ್ಪ ಮಾತನಾಡಿ, ಇಲಾಖೆಯು ಪ್ರತಿ ಉಪನ್ಯಾಸಕರ ಮತ್ತು ಪ್ರಾಂಶುಪಾಲರ ಕರ್ತವ್ಯ ನಿಷ್ಠೆ, ನಂಬಿಕೆ, ಬದ್ಧತೆ ಮತ್ತು ಪ್ರಾಮಾಣಿಕ ಸೇವೆ ಗುರುತಿಸಿ ಇಲಾಖಾ ಗೌಪ್ಯ ಕೆಲಸಗಳನ್ನು ನಿರ್ವಹಿಸುವಂತೆ ಸೂಚಿಸುತ್ತದೆ. ಹೀಗಾಗಿ ಪ್ರತಿ ಉಪನ್ಯಾಸಕರುಗಳು ತಮ್ಮ ,ಆತ್ಮಸಾಕ್ಷಿಗೆ ಅನುಗುಣವಾಗಿ ತಮ್ಮಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯಲು ಮುಂದಾಗಬೇಕು ಎಂದರು.ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಆರ್.ಮಲ್ಲೇಶ್ ಮಾತನಾಡಿ, ಈ ಹಿಂದೆ ಉಪನ್ಯಾಸಕರು ತರಗತಿಗಳಲ್ಲಿ ಬೋಧಿಸುವುದು ಮಾತ್ರ ನಮ್ಮ ಪ್ರಮುಖ ಕರ್ತವ್ಯವೆಂದು ಭಾವಿಸಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಇಲಾಖೆಯ ಬದಲಾದ ಮಾರ್ಗಸೂಚಿಗಳನ್ವಯ ಇನ್ನಿತರ ಕೆಲಸಕಾರ್ಯಗಳನ್ನು ನಿರ್ವಹಿಸುವುದರೊಂದಿಗೆ ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಹೆಚ್ಚಿನ ಒತ್ತು ಕೊಡಬೇಕಾಗಿದೆ ಎಂದರು.ಇತಿಹಾಸ ವಿಷಯದ ಸಂಪನ್ಮೂಲ ವ್ಯಕ್ತಿಗಳಾದ ಡಾ.ಬಿ.ಕೃಷ್ಣಪ್ಪ, ಎಚ್.ಎಸ್.ಮೈಲಾರಲಿಂಗಂ, ಎನ್.ತಿಮ್ಮಪ್ಪ, ಗಣಿತಶಾಸ್ತ್ರ ವಿಷಯದ ಸಂಯೋಜಕರಾದ ಕೃಷ್ಣಮೂರ್ತಿ, ಸಂಪನ್ಮೂಲ ವ್ಯಕ್ತಿಗಳಾದ ಡಾ.ತಿಮ್ಮಾರೆಡ್ಡಿ,ಡಿ.ವೀರಣ್ಣ, ಮಂಜುನಾಥ್ ಮತ್ತು ಉಮೇಶ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಭೂಮಿಕ ಮತ್ತು ದಿಶಾ ಪ್ರಾರ್ಥಿಸಿದರು, ಉಪನ್ಯಾಸಕಿ ಪದ್ಮ ಆರ್.ಜೈನ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಕಾಲೇಜುಗಳ ಗಣಿತ ಮತ್ತು ಇತಿಹಾಸ ವಿಷಯದ ಸರ್ಕಾರಿ ಕಾಲೇಜುಗಳ ಉಪನ್ಯಾಸಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.