ಜಿಲ್ಲೆಯ ಅಭಿವೃದ್ಧಿಗೆ ಯೋಜನೆ ರೂಪಿಸುವಾಗ ಶಿಕ್ಷಣ, ಆರೋಗ್ಯ, ಸ್ವಚ್ಛತೆ ಸೇರಿ ಸ್ಥಳೀಯ ಅವಶ್ಯಕತೆಗಳು, ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಜಿಲ್ಲೆಯ ಸಮಗ್ರ ಪ್ರಗತಿಗೆ ಪೂರಕವಾದ ಕ್ರೀಯಾಯೋಜನೆಗಳನ್ನು ತಯಾರಿಸಬೇಕು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವಂಥ ಕ್ರಿಯಾಯೋಜನೆ ತಯಾರಿಕೆಗೆ ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾ ಯೋಜನಾ ಸಮಿತಿ ಅಧ್ಯಕ್ಷ ಕೆ. ವೆಂಕಟೇಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರಿನ ವಿಕಾಸಸೌಧದ ಕೊಠಡಿ ಸಂಖ್ಯೆ ೩೧೭ರಲ್ಲಿ ೨೦೨೬- ೨೭ನೇ ಸಾಲಿಗೆ ಚಾಮರಾಜನಗರ ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯ ಅನುಮೋದನೆ ಕುರಿತು ಶಾಸಕರು, ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಡೆದ ಜಿಲ್ಲಾ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಅಭಿವೃದ್ಧಿಗೆ ಯೋಜನೆ ರೂಪಿಸುವಾಗ ಶಿಕ್ಷಣ, ಆರೋಗ್ಯ, ಸ್ವಚ್ಛತೆ ಸೇರಿ ಸ್ಥಳೀಯ ಅವಶ್ಯಕತೆಗಳು, ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಜಿಲ್ಲೆಯ ಸಮಗ್ರ ಪ್ರಗತಿಗೆ ಪೂರಕವಾದ ಕ್ರೀಯಾಯೋಜನೆಗಳನ್ನು ತಯಾರಿಸಬೇಕು. ಜನರ ಸಮಸ್ಯೆಗಳನ್ನು ಪರಿಹರಿಸುವಂತಹ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ನಿಗಾವಹಿಸುವಂತೆ ಸಚಿವರು ಸೂಚಿಸಿದರು.

ಪ್ರತಿ ಪಂಚಾಯಿತಿಗಳಲ್ಲಿ ಗ್ರಾಮಸಭೆಗಳನ್ನು ನಡೆಸಿ ಅವಶ್ಯವಾಗಿರುವ ಮೂಲಸೌಕರ್ಯಗಳನ್ನು ಕಲ್ಪಿಸಲು ಕ್ರಿಯಾಯೋಜನೆ ಸಿದ್ಧಪಡಿಸಿ ತಾಲೂಕು ಪಂಚಾಯಿತಿಗೆ ವರದಿ ಸಲ್ಲಿಸಲಾಗುತ್ತದೆ. ಹಾಗೆಯೇ ನಗರ, ಸ್ಥಳೀಯ ಸಂಸ್ಥೆಗಳು ವಾರ್ಡ್‌ಗಳಲ್ಲಿ ಸಭೆ ಆಯೋಜಿಸಿ ಅಭಿವೃದ್ಧಿಗೆ ಅಗತ್ಯವಾಗಿರುವ ಯೋಜನೆಗಳ ವರದಿ ತಯಾರಿಸಲಾಗುತ್ತದೆ. ನಂತರ ಗ್ರಾಮಸಭೆ ಹಾಗೂ ವಾರ್ಡ್‌ಗಳಲ್ಲಿನ ಅನುಮೋದಿತ ಅಭಿವೃದ್ಧಿ ವರದಿಗಳನ್ನು ಕ್ರೋಢಿಕರಿಸಲಾಗುತ್ತದೆ ಎಂದರು.

ವರದಿಗಳನ್ನು ಆಯಾ ತಾಲೂಕು ಪಂಚಾಯಿತಿಯಲ್ಲಿ ನಡೆಯುವ ತಾಲೂಕು ಅಭಿವೃದ್ಧಿ ಯೋಜನೆ ಸಭೆಯಲ್ಲಿ ಅನುಮೋದನೆ ಪಡೆದು ಬಳಿಕ ತಾಲೂಕು ಪಂಚಾಯಿತಿಯು ವರದಿಯನ್ನು ಅನುಮೋದನೆಗಾಗಿ ಜಿಲ್ಲಾ ಯೋಜನಾ ಸಮಿತಿಗೆ ಸಲ್ಲಿಸಲಿದೆ. ಅಂತಿಮವಾಗಿ ಜಿಲ್ಲಾ ಯೋಜನೆ ಸಮಿತಿಯು ವರದಿಗೆ ಅನುಮೋದನೆ ನೀಡಲಿದ್ದು, ಸಾಮಾಜಿಕ, ಅರ್ಥಿಕವಾಗಿ ಜನರ ಜೀವನಮಟ್ಟ ಸುಧಾರಣೆಯೇ ಯೋಜನೆ ಮತ್ತು ಕಾರ್ಯಕ್ರಮಗಳ ಮೂಲ ಉದ್ದೇಶವಾಗಿರುತ್ತದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.

ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಹಾಗೂ ಹನೂರು ಶಾಸಕ ಎಂ.ಆರ್. ಮಂಜುನಾಥ್ ಅವರು ಮಾತನಾಡಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾದ ವಿಷಯಗಳನ್ನು ಒಳಗೊಂಡಂತೆ ಯೋಜನೆಯನ್ನು ತಯಾರಿಸಬೇಕು, ಕರಡು ಯೋಜನೆ ತಯಾರಿಸುವಾಗ ಯಾವ ತಾಲೂಕುಗಳು ಹೆಚ್ಚು ಹಿಂದುಳಿದಿವೆ. ಅವುಗಳನ್ನು ಹೇಗೆ ಅಭಿವೃದ್ಧಿಪಡಿಸಬೇಕೆನ್ನುವ ವಿಷಯಗಳನ್ನು ಅಳವಡಿಸಿಕೊಂಡು ಹಿಂದುಳಿದ ತಾಲೂಕುಗಳಿಗೆ ಹೆಚ್ಚು ಆದ್ಯತೆ ನೀಡಿ ಇನ್ನುಳಿದ ತಾಲೂಕುಗಳ ಪ್ರಗತಿಗಾಗಿ ಕರಡು ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಬೇಕೆಂದು ಸಲಹೆ ಮಾಡಿದರು.

ಪಶು ಸಂಗೋಪನೆ, ಮೀನುಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಪಂ ಆಡಳಿತಾಧಿಕಾರಿ ವಿನುತಪ್ರಿಯ ಅವರು ಮಾತನಾಡಿ, ಪ್ರಸ್ತುತ ಅನುಮೋದನೆಗಾಗಿ ಸಲ್ಲಿಸಲಾಗಿರುವ ಕ್ರಿಯಾಯೋಜನೆಯನ್ನು ಜಿಲ್ಲೆಯ ಎಲ್ಲಾ ಐದು ತಾಲೂಕುಗಳಲ್ಲಿ ಆಯಾ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಯೋಜನಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ಜಿಲ್ಲಾ ಯೋಜನಾ ಸಮಿತಿ ಅನುಮೋದನೆಗಾಗಿ ಮಂಡಿಸಲಾಗಿದೆ ಎಂದರು.ಶಾಸಕರಾದ ಡಾ. ಡಿ. ತಿಮ್ಮಯ್ಯ, ಕೆ. ಶಿವಕುಮಾರ್, ಜಿಲ್ಲಾಧಿಕಾರಿ ಶ್ರೀರೂಪ, ಜಿಪಂ ಸಿಇಒ ಮೋನಾ ರೋತ್, ಮುಖ್ಯ ಯೋಜನಾಧಿಕಾರಿ ಹೊನ್ನರಾಜು ಸೇರಿ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

----------

24ಸಿಎಚ್ಎನ್‌19