ಸಾರಾಂಶ
ಸಹಾಯಕ ಚುನಾವಣಾ ಅಧಿಕಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಸೂಚನೆಕನ್ನಡಪ್ರಭ ವಾರ್ತೆ ಕೊಪ್ಪಳ
ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಏ. 12ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದ್ದು, ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಹಾಯಕ ಚುನಾವಣಾ ಅಧಿಕಾರಿಗಳು ಯಾವುದೇ ಲೋಪ ಆಗದಂತೆ ಪರಿಪೂರ್ಣವಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್ ಸಹಾಯಕ ಚುನಾವಣಾ ಅಧಿಕಾರಿಗಳಿಗೆ ಸೂಚನೆ ನೀಡಿದರು.ಲೋಕಸಭಾ ಚುನಾವಣೆ ಹಿನ್ನೆಲೆ ಜಿಲ್ಲಾಡಳಿತ ಭವನದ ಕೆಸ್ವಾನ್ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ಸಹಾಯಕ ಚುನಾವಣಾಧಿಕಾರಿಗಳೊಂದಿಗೆ (ಎಆರ್‌ಒ) ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಆರ್‌ಒಗಳು ಪ್ರತಿದಿನ ರೊಟೇಷನ್ ಪ್ರಕಾರ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ, ಎಫ್.ಎಸ್.ಟಿ., ಎಸ್.ಎಸ್.ಟಿ ತಂಡಗಳ ಕಾರ್ಯಾಚರಣೆ ಬಗ್ಗೆ ಪರಿಶೀಲನೆ ನಡೆಸಬೇಕು. ಎಫ್.ಎಸ್.ಟಿ., ಎಸ್.ಎಸ್.ಟಿ ತಂಡಗಳು ತಮ್ಮ ಶಿಫ್ಟ್ ಗಳಲ್ಲಿ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು. ಬಾರ್ಡರ್ ಮತ್ತು ಹೈವೆಯಲ್ಲಿರುವ ಚೆಕ್‌ಪೋಸ್ಟ್‌ಗಳಿಗೆ ಅಬಕಾರಿ ಇಲಾಖೆಯಿಂದ ಸಿಬ್ಬಂದಿ ನೀಡುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅಲ್ಲದೇ ಹೋಮ್ ಗಾರ್ಡ್ ಗಳನ್ನು ಸಹ ಚೆಕ್ ಪೋಸ್ಟ್‌ಗಳಿಗೆ ನಿಯೋಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.ಅರ್ಹ ಮತದಾರ ಮತದಾನದಿಂದ ಹೊರಗುಳಿಯದಿರಲಿ:ಕಳೆದ ಬಾರಿ ಕುಷ್ಟಗಿಯ ನಗರ ಪ್ರದೇಶದ ವ್ಯಾಪ್ತಿಯ ಕೆಲವೆಡೆ ಕಡಿಮೆ ಮತದಾನವಾಗಿದ್ದು, ಅಂತಹ ಮತಗಟ್ಟೆ ವ್ಯಾಪ್ತಿಯಲ್ಲಿ ಹೆಚ್ಚು ಸ್ವೀಪ್ ಚಟುವಟಿಕೆ ಕೈಗೊಳ್ಳಬೇಕು. ಯಾವುದೇ ಅರ್ಹ ಮತದಾರರ ಮತದಾನದಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕಾಗಿದ್ದು, ಎಲ್ಲ ಮತದಾರರಿಗೆ ಮತದಾನದ ಮಾಡುವ ಬಗ್ಗೆ ಹಾಗೂ ಅದರ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು. ವೋಟರ್ ಸ್ಲಿಪ್ ವಿತರಣೆ ಸಂದರ್ಭದಲ್ಲಿ ನಗರ ಪ್ರದೇಶಗಳಲ್ಲಿ ಕೆಲ ಮತದಾರರಿಗೆ ವೋಟರ್ ಸ್ಲಿಪ್ ತಲುಪುವುದಿಲ್ಲ ಎಂಬ ಮಾಹಿತಿ ಇದ್ದು, ಬಿಎಲ್‌ಒಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಮನೆಗಳು ಮತ್ತು ಮತದಾರರ ಸಂಖ್ಯೆ ಬಗ್ಗೆ ಮಾಹಿತಿ ಇರಬೇಕು. ಎಲ್ಲ ಸಹಾಯಕ ಚುನಾವಣಾಧಿಕಾರಿಗಳು ಬಿಎಲ್‌ಒಗಳೊಂದಿಗೆ ಸಭೆ ಮಾಡಿ, ಸೂಕ್ತ ನಿರ್ದೇಶನ ನೀಡಬೇಕು. ಬಿಎಲ್‌ಒಗಳು ಮತದಾರರ ಮನೆಗೆ ಭೇಟಿ ನೀಡಿ, ವೋಟಲ್ ಸ್ಲಿಪ್ ವಿತರಿಸುವಂತೆ ಕ್ರಮ ಕೈಗೊಳ್ಳಬೇಕು. ಹೋಮ್ ವೋಟಿಂಗ್ ಕುರಿತಂತೆ ರೂಟ್‌ಮ್ಯಾಪ್ ಸಿದ್ಧಪಡಿಸಿಕೊಂಡು ನಿಯಮಾನುಸಾರ ಕ್ರಮ ಕೈಗೊಳ್ಳಬೆಕು ಎಂದರು.
ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿ, ಎಸ್.ಎಸ್.ಟಿ., ಎಫ್.ಎಸ್.ಟಿ., ವಿ.ಎಸ್.ಟಿ. ಎಲ್ಲ ಬಿಎಲ್‌ಒ ಹಾಗೂ ಇತರ ತಂಡಗಳಿಗೆ ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ತರಬೇತಿ ನೀಡಬೇಕು. ತರಬೇತಿ ಸಮಯದಲ್ಲಿ ಎಲ್ಲ ಸಿಬ್ಬಂದಿಗೆ ಗುಣಮಟ್ಟದ ಊಟೋಪಹಾರದ ವ್ಯವಸ್ಥೆ ಮಾಡಿಕೊಡಬೇಕು. ಈ ಹಿನ್ನೆಲೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ಸೂಚಿಸಿದರು.ಸಭೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಿಗೋಡಿ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ, ಸಹಾಯಕ ಚುನಾವಣಾಧಿಕಾರಿಗಳಾದ ರೇಷ್ಮಾ ಹಾನಗಲ್, ಮಲ್ಲಪ್ಪ ತೊದಲಬಾಗಿ, ರುದ್ರೇಶಪ್ಪ ಟಿ.ಎಸ್. ಹಾಗೂ ಅನ್ನಪೂರ್ಣ ಮುದುಕಮ್ಮನವರ ಸೇರಿದಂತೆ ತಹಸೀಲ್ದಾರರು, ಸಂಬಂಧಪಟ್ಟ ಇಲಾಖೆಗಳು, ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಚುನಾವಣಾ ಶಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.10ಕೆಪಿಎಲ್24 ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದ ಕೆಸ್ವಾನ್ ಸಭಾಂಗಣದಲ್ಲಿ ಜಿಲ್ಲೆಯ ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ಸಭೆ ನಡೆಯಿತು.
;Resize=(128,128))
;Resize=(128,128))