ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿಇದೇ ಮಾರ್ಚ್ ತಿಂಗಳಲ್ಲಿ ಜರುಗಿದ್ದ, 2023-2024 ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಯಾದಗಿರಿ ಜಿಲ್ಲೆಯ ಲ್ಲಿ ಶೇ.74.23 ರಷ್ಟು ಫಲಿತಾಂಶದ ಮೂಲಕ ರಾಜ್ಯದಲ್ಲಿ 26ನೇ ಸ್ಥಾನಕ್ಕೇರಿದೆ. ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 11,135 ವಿದ್ಯಾರ್ಥಿಗಳ ಪೈಕಿ 8265 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಎಂದಿನಂತೆ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.
ಹಾಗೆ ನೋಡಿದರೆ, ಕಳೆದ ಬಾರಿಯ ಫಲಿತಾಂಶಕ್ಕಿಂತ ಈ ಬಾರಿಯ ಫಲಿತಾಂಶದಲ್ಲಿ ಶೇ.15ರಷ್ಟು ಹೆಚ್ಚಳ ಕಂಡಿರುವುದು ಸಮಾಧಾನ ಮೂಡಿಸಿದೆಯೆಲ್ಲದೆ, ಬೆಳಗಾವಿ, ಕಲಬುರಗಿ, ಬಳ್ಳಾರಿ, ರಾಯಚೂರು, ಚಿತ್ರದುರ್ಗ, ಗದಗ ಜಿಲ್ಲೆಗಳಿಗಿಂತಲೂ ಮುಂದಿರುವುದು ಯಾದಗಿರಿಗರ ನಿಟ್ಟುಸಿರು ಮೂಡಿಸಿದೆ. ಕಳೆದ ಬಾರಿ ಯಾದಗಿರಿ ಜಿಲ್ಲೆಯ ರಾಜ್ಯದ ರ್‍ಯಾಂಕ್ ಪಟ್ಟಿಯಲ್ಲಿ 32ನೇ ಸ್ಥಾನದಲ್ಲಿತ್ತು. ಕಳೆದೊಂದು ದಶಕದ ಅವಧಿಯ ಫಲಿತಾಂಶದ ತುಲನೆ ನಡೆಸಿದಾಗ, ಯಾದಗಿರಿ ಜಿಲ್ಲೆಯ ಪಿಯುಸಿ ಮಕ್ಕಳ ಶೈಕ್ಷಣಿಕ ಗುಣಮಟ್ಟದಲ್ಲಿ ಈ ಬಾರಿ ಗಣನೀಯ ಪ್ರಮಾಣದ ಹೆಚ್ಚಳ ಕಂಡಿರುವುದು ಖುಷಿಯ ಸಂಗತಿ.ಯಾದಗಿರಿ ಜಿಲ್ಲೆಯಲ್ಲಿ ಈ ಬಾರಿ ಒಟ್ಟು 9,814 ರೆಗ್ಯುಲರ್ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ, 7,585 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.77.29 ರಷ್ಟು ಈ ಬಾರಿ ಫಲಿತಾಂಶ ಕಂಡಿದ್ದು, ರಾಜ್ಯದಲ್ಲಿ 26ನೇ ಸ್ಥಾನದಲ್ಲಿದೆ.
ಪರೀಕ್ಷೆ ಎದುರಿಸಿದ 5,792 ಬಾಲಕರಲ್ಲಿ 4044 ಉತ್ತೀರ್ಣರಾಗಿದ್ದಾರೆ. ಶೇ.69.82 ರಷ್ಟು ಬಾಲಕರ ಫಲಿತಾಂಶ ಕಂಡಿದೆ. ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 5,343 ಬಾಲಕಿಯರಲ್ಲಿ 4,221 ಮಕ್ಕಳು ಉತ್ತೀರ್ಣರಾಗುವ ಮೂಲಕ, ಶೇ.79 ರಷ್ಟು ಫಲಿತಾಂಶ ಬಂದಿದೆ.ಗ್ರಾಮೀಣ ಭಾಗದ 2,264 ವಿದ್ಯಾರ್ಥಿಗಳಲ್ಲಿ 1,779 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.78.58 ರಷ್ಟು ಫಲಿತಾಂಶ ಬಂದಿದೆ. ನಗರ ಪ್ರದೇಶದಲ್ಲಿನ 8,871 ಮಕ್ಕಳಲ್ಲಿ 6,486 ಮಕ್ಕಳು ಉತ್ತೀರ್ಣರಾಗಿದ್ದಾರೆ. ಶೇ. 73.11 ರಷ್ಟು ಫಲಿತಾಂಶ ನಗರ ಪ್ರದೇಶದಲ್ಲಿ ಬಂದಿದೆ.
ಕಲಾ ವಿಭಾಗದಲ್ಲಿ 6,707 ವಿದ್ಯಾರ್ಥಿಗಳು ಹಾಜರಾಗಿದ್ದು, 4,651 ಉತ್ತೀರ್ಣರಾಗಿದ್ದಾರೆ. ಶೇ. 79.35 ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ 1,089 ವಿದ್ಯಾರ್ಥಿಗಳ ಪೈಕಿ 725 ಉತ್ತೀರ್ಣರಾಗಿದ್ದಾರೆ. ಶೇ. 66.57 ರಷ್ಟು ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ 3,339 ವಿದ್ಯಾರ್ಥಿಗಳ ಪೈಕಿ, 2,889 ಉತ್ತೀರ್ಣರಾಗಿದ್ದಾರೆ. ಶೇ. 86.52 ರಷ್ಟು ಫಲಿತಾಂಶ ಬಂದಿದೆ.