ಪ್ರಕೃತಿ ವಿಕೋಪ ಎದುರಿಸಲು ಸನ್ನದ್ಧರಾಗಿ: ಅನಿಲ ಬಡಿಗೇರ

| Published : Jun 21 2024, 01:10 AM IST

ಸಾರಾಂಶ

ಈ ವರ್ಷದ ಮಳೆಗಾಲದ ಅವಧಿಯಲ್ಲಿ ಶಿರಹಟ್ಟಿ ತಾಲೂಕಿನಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪ ಎದುರಿಸಲು ತಾಲೂಕು ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಹಸೀಲ್ದಾರ್ ಅನಿಲ ಬಡಿಗೇರ ಸೂಚಿಸಿದರು.

ಶಿರಹಟ್ಟಿ: ಈ ವರ್ಷದ ಮಳೆಗಾಲದ ಅವಧಿಯಲ್ಲಿ ತಾಲೂಕಿನಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪ ಎದುರಿಸಲು ತಾಲೂಕು ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಯಾವುದೇ ಜೀವ ಹಾನಿಯಾಗದ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ತಹಸೀಲ್ದಾರ್ ಅನಿಲ ಬಡಿಗೇರ ಸೂಚಿಸಿದರು.

ಗುರುವಾರ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ೨೦೨೪-೨೫ನೇ ಸಾಲಿನ ಪ್ರಕೃತಿ ವಿಕೋಪ ಎದುರಿಸಲು ಸಿದ್ಧತೆ ಕುರಿತು ವಿವಿಧ ಇಲಾಖೆ ಅಧಿಕಾರ ಜತೆ ಸಭೆ ನಡೆಸಿ, ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು. ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಮಳೆ ಹೆಚ್ಚಾಗುವ ಬಗ್ಗೆ ವರದಿ ಇದೆ. ತಾಲೂಕು ಮಟ್ಟದ ಅಧಿಕಾರಿಗಳು ಪ್ರಕೃತಿ ವಿಕೋಪ ಎದುರಿಸುವಲ್ಲಿ ವಿಫಲರಾದರೆ ನಿಮ್ಮನ್ನೆ ಹೊಣೆ ಮಾಡಲಾಗುವುದು. ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸುವ ಸಂಬಂಧ ತಾಲೂಕು ಮಟ್ಟದ ಕ್ರಿಯಾ ಯೋಜನೆ ರೂಪಿಸುವ ಕೆಲಸ ಆಗಬೇಕು ಎಂದರು.

ತಾಲೂಕಾದ್ಯಂತ ಆಗಿರುವ ಮಳೆಯ ಪ್ರಮಾಣ, ಅದರಿಂದ ಆದ ಹಾನಿ, ಬರ ನಿರ್ವಹಣೆ, ಮೊದಲಾದ ವಿಷಯದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮುಂಗಾರು ಮಳೆ ಹಾಗೂ ಚಂಡಮಾರುತ ಪರಿಣಾಮಗಳನ್ನು ತಗ್ಗಿಸಲು ಕ್ಯೆಗೊಳ್ಳಬಹುದಾದ ಕ್ರಮಗಳ ಕುರಿತು ನೀಡಿರುವ ಸಲಹೆ-ಸೂಚನೆಗಳ ರೀತಿ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು. ಜಿಲ್ಲೆಯಲ್ಲಿ ಈ ಹಿಂದಿನ ವರ್ಷಗಳಲ್ಲಿ ಉಂಟಾದ ಘಟನೆಗಳಿಗೆ ಅನುಗುಣವಾಗಿ ಸಮಸ್ಯೆಗೆ ಒಳಗಾದ ಸ್ಥಳಗಳನ್ನು ಪರಿಶೀಲಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಯಾವುದೇ ಸಿದ್ಧತೆ ಮಾಡಿಕೊಳ್ಳದೆ ನಿರ್ಲಕ್ಷ್ಯವಹಿಸುವಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮನೆಗಳಿಗೆ ಹಾನಿಯಾದರೆ ಪರಿಹಾರ ವಿತರಿಸಿ: ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿ ಕೇಂದ್ರಗಳು ಹಾಗೂ ಶಾಲೆಗಳಲ್ಲಿ ಮಳೆಯಿಂದಾಗಿ ಸೋರುತ್ತಿದ್ದರೆ ದುರಸ್ತಿಗೊಳಿಸಬೇಕು. ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಲು ಅಲ್ಲಿ ವಾಸಿಸುತ್ತಿರುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಅನುಕೂಲ ಕಲ್ಪಿಸಿಕೊಡಬೇಕು ಎಂದರು.

ಶಿಥಿಲಗೊಂಡಿರುವ ವಿದ್ಯುತ್ ಕಂಬಗಳನ್ನು ಹೆಸ್ಕಾಂ ಅಧಿಕಾರಿಗಳು ಕೂಡಲೇ ತೆರವುಗೊಳಿಸಬೇಕು. ವಿದ್ಯುತ್ ತಂತಿಗಳಿಗೆ ಆವರಿಸಿಕೊಂಡಿರುವ ಅಪಾಯಕಾರಿ ಮರಗಳ ರೆಂಬೆ-ಕೊಂಬೆಗಳನ್ನು ತೆರವುಗೊಳಿಸಿ, ವಿದ್ಯುತ್ ತಂತಿಗಳು ಜೋತು ಬಿದ್ದಿರುವುದು ಕಂಡು ಬಂದಲ್ಲಿ ಕೂಡಲೇ ಸರಿಪಡಿಸಬೇಕು ಎಂದು ಸೂಚನೆ ನೀಡಿದರು. ಪ್ರಾಕೃತಿಕ ವಿಕೋಪ ಸಂಭವಿಸಿದ ಘಟನಾ ಸ್ಥಳಕ್ಕೆ ಕೂಡಲೇ ತಾಲೂಕು ಮಟ್ಟದ ಅಧಿಕಾರಿಗಳು ತೆರಳಿ, ಸಾರ್ವಜನಿಕ ಜೀವ, ಆಸ್ತಿ ಹಾನಿಯಾಗದಂತೆ ಅಗತ್ಯ ಕ್ರಮ ವಹಿಸಬೇಕು. ರಸ್ತೆ, ಸೇತುವೆಗಳು ಹಾನಿಯಾದಲ್ಲಿ, ಕೂಡಲೇ ರಸ್ತೆ ಸಂಪರ್ಕ ಪುನರ್ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ತುರ್ತು ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಸುರಕ್ಷಾ ಉಪಕರಣಗಳೊಂದಿಗೆ ಸಂಬಂಧಿಸಿದ ಇಲಾಖಾ ನೌಕರರು ಸನ್ನದ್ಧರಾಗಬೇಕು. ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಲು ವಿವಿಧ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಯೋಗ ದಿನಾಚರಣೆ: ಜೂ. ೨೧ರಂದು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಅಧಿಕಾರಿಗಳು ತಪ್ಪದೇ ಭಾಗವಹಿಸಬೇಕು ಎಂದು ತಹಸೀಲ್ದಾರ್ ಅನಿಲ ಬಡಿಗೇರ ಹೇಳಿದರು.

ತಾಪಂ ಪ್ರಭಾರಿ ಕಾರ್ಯ ನಿರ್ವಾಹಕ ಅಧಿಕಾರಿ ಹನುಮೇಶ ಕೊಂಡಿಕೊಪ್ಪ, ಪಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಸಮಾಜ ಕಲ್ಯಾಣ ಅಧಿಕಾರಿ ಶರಣಯ್ಯ ಕುಲಕರ್ಣಿ, ಜಿಪಂ ಸಹಾಯಕ ನಿರ್ದೇಶಕ ಮಾರುತಿ ರಾಠೋಡ, ವಲಯ ಅರಣ್ಯಾಧಿಕಾರಿ ರಾಮಪ್ಪ ಪೂಜಾರ, ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಕೌಶಿಕ್ ದಳವಾಯಿ, ಅಬಕಾರಿ ನಿರೀಕ್ಷರ ಸಂತೋಷ ರಡ್ಡೇರ, ಎಂ.ಕೆ. ಲಮಾಣಿ, ರಮೇಶ ಹಾವರಡ್ಡಿ, ತಹಸೀಲ್ದಾರ್ ಸಿಬ್ಬಂದಿ ಸಂತೋಷ ಅಸ್ಕಿ, ಎಎಸ್‌ಐ ಯಳವತ್ತಿ ಹಾಗೂ ತಾಲೂಕು ಅಧಿಕಾರಿಗಳು ಉಪಸ್ಥಿತರಿದ್ದರು.