ವಸತಿ ರಹಿತರ ಪಟ್ಟಿ ತಯಾರಿಸಿ: ಶಾಸಕ ಕೆ.ಎಸ್.ಆನಂದ್

| Published : Nov 05 2025, 01:30 AM IST

ಸಾರಾಂಶ

ತಾಲೂಕಿನ ಯಗಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ರಹಿತರ ಪಟ್ಟಿ ತಯಾರಿಸಿ, ನಿವೇಶನ ಹಂಚಿಕೆಗಾಗಿ ಸರ್ಕಾರಿ ಜಾಗ ಗುರುತಿಸಿ ಎಂದು ಶಾಸಕ ಕೆ.ಎಸ್.ಆನಂದ್ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು

ಕಡೂರು: ತಾಲೂಕಿನ ಯಗಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ರಹಿತರ ಪಟ್ಟಿ ತಯಾರಿಸಿ, ನಿವೇಶನ ಹಂಚಿಕೆಗಾಗಿ ಸರ್ಕಾರಿ ಜಾಗ ಗುರುತಿಸಿ ಎಂದು ಶಾಸಕ ಕೆ.ಎಸ್.ಆನಂದ್ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಯಗಟಿ ಗ್ರಾಮದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಮಂಗಳವಾರ ಗ್ರಾಪಂಮಟ್ಟದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಗಟಿ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ಅಥವಾ ನಿವೇಶನ ರಹಿತರ ಪಟ್ಟಿ ದೊಡ್ಡದಿದೆ, ಜನಸ್ಪಂದನದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳು ಬಹಳಷ್ಟು ಇದೇ ವಿಷಯ ಕುರಿತಾಗಿ ಇದೆ. ಬರುವ ಜನವರಿಯಲ್ಲಿ ಸರ್ಕಾರವು ವಸತಿ ರಹಿತರಿಗೆ ಮನೆಗಳನ್ನು ಮಂಜೂರು ಮಾಡಲಿದ್ದು, ಇಲ್ಲಿ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಮನೆ ಒದಗಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ತಿಳಿಸಿದರು. ಸಭೆಯಲ್ಲಿ ಮದ್ಯಪಾನದ ಹಾವಳಿ ತಡೆಯುವ ಕುರಿತು ಅರ್ಜಿ ಸಲ್ಲಿಸಿದ್ದ ಮಹಿಳೆಯರು, ಮನೆಯಲ್ಲಿ ಗಂಡ- ಮಕ್ಕಳು ಕುಡಿದು ಬರುತ್ತಾರೆ. ನಾವು ನಿತ್ಯ 300 ರು. ಕೂಲಿಗಾಗಿ ಪರಿತಪಿಸುತ್ತಿದ್ದೇವೆ. ಯುವಕರು, ಪುರುಷರು ಮದ್ಯದ ದಾಸರಾಗುತ್ತಿದ್ದು, ಗ್ರಾಮದ ಸಾಕಷ್ಟು ಮನೆಗಳಲ್ಲಿ ಮಹಿಳೆಯರು ಮದ್ಯ ಮಾರಾಟ ಮಾಡುವ ವ್ಯವಸ್ಥೆ ಇದೆ. ಶಾಲಾ ಕಾಲೇಜು ಮೈದಾನದಲ್ಲಿ ಮದ್ಯ ಸೇವಿಸಿ ಬಾಟಲಿಗಳನ್ನು ಒಡೆದು ಹಾಕುತ್ತಾರೆ. ನಮ್ಮ ಮಕ್ಕಳೇ ಕುಡಿದು ಮಧ್ಯರಾತ್ರಿ ಮನೆಗೆ ಬರುತ್ತಾರೆ. ದಯವಿಟ್ಟು ಇದಕ್ಕೆ ಕಡಿವಾಣ ಹಾಕಿ ಎಂದು ಅಳಲು ತೋಡಿಕೊಂಡರು. ವ್ಯವಸ್ಥೆಯ ಬಗ್ಗೆ ಸಿಡಿಮಿಡಿಗೊಂಡ ಶಾಸಕ ಆನಂದ್, ಅಬಕಾರಿ ಇಲಾಖೆಯವರು, ಪೊಲೀಸರು ಏನು ಮಾಡುತ್ತಿದ್ದೀರಿ, ಬರೀ ಕೇಸು ದಾಖಲಿಸುವುದಲ್ಲ, ಸಮಾಜದ ಸ್ವಾಸ್ಥ್ಯ ಕೆಡಿಸುವವರ ವಿರುದ್ಧ ಎಫ್ಐಆರ್ ದಾಖಲಿಸಿ ಜೈಲಿಗೆ ಕಳುಹಿಸಿ. ಅಬಕಾರಿ ಇಲಾಖೆಯವರು ಮನೆಗಳಲ್ಲಿ ಮದ್ಯ ಮಾರಾಟದ ಬಗ್ಗೆ ಏನು ಕ್ರಮ ವಹಿಸಿದ್ದೀರಿ? ಲೈಸೆನ್ಸ್ ಹೊಂದಿರುವವರೂ ನಿಗದಿತ ಸಮಯಕ್ಕೆ ಅಂಗಡಿ ತೆರೆದು ಸಮಯಕ್ಕೆ ಸರಿಯಾಗಿ ಬಾಗಿಲು ಹಾಕುವಂತೆ ಮಾಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಗ್ರಾಮದಲ್ಲಿ ಮುದಿಯಪ್ಪ ಬಡಾವಣೆ ಹೊಸದಾಗಿ ನಿರ್ಮಿತವಾಗಿದ್ದು, ಅಲ್ಲಿ ಮೂಲಸೌಕರ್ಯಗಳ ಕೊರತೆ ಇದೆ, ಪಂಚಾಯಿತಿಯವರು ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ. ಸದಸ್ಯರು ತಮಗೆ ಬೇಕಾದಲ್ಲಿ ರಸ್ತೆ, ಚರಂಡಿ ಮಾಡಿಕೊಳ್ಳುತ್ತಾರೆ, ನಮ್ಮ ಕೆಲವು ಮನೆಗಳನ್ನು ಬಿಟ್ಟು ರಸ್ತೆ ನಿರ್ಮಿಸಿದ್ದಾರೆ. ನಾವು ಕೇಳಿದರೆ ಕೆಲಸ ಮಾಡಲು ಹಣವಿಲ್ಲ ಎನ್ನುತ್ತಾರೆ. ಶಾಸಕರು ಸ್ಥಳಕ್ಕೆ ಭೇಟಿ ನೀಡಲೇಬೇಕು ಎಂದು ಮಹಿಳೆಯರು, ವೃದ್ಧರು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸ್ಥಳಕ್ಕೆ ಭೇಟಿ ನೀಡಿ ತಮ್ಮ ಅನುದಾನದಲ್ಲಿ ರಸ್ತೆ ನಿರ್ಮಿಸಿ ಕೊಡುವ ಭರವಸೆ ನೀಡಿದರಲ್ಲದೇ, ಪಂಚಾಯಿತಿಗೆ ಅನುದಾನದಲ್ಲಿ ಚರಂಡಿ ನಿರ್ಮಿಸಲು ಬೂದು ನೀರು ನಿರ್ವಹಣೆ( ಜಿಡಬ್ಲ್ಯುಎಂ) ಕಾಮಗಾರಿ ಅಡಿಯಲ್ಲಿ ₹1.17 ಕೋಟಿ ಮಂಜೂರಾಗಿದ್ದು ಕಾಮಗಾರಿ ಮುಗಿಸುವುದಾಗಿ ತಿಳಿಸಿದರು.

ಯಗಟಿ ಕೆರೆಯ ಏರಿ ಮೇಲೆ ಹರಿಸಮುದ್ರ ಕಡೆ ತೆರಳುವ ಮಾರ್ಗದಲ್ಲಿ ಸಾಕಷ್ಟು ಜಂಗಲ್ ಬೆಳೆದು ರಸ್ತೆ ಕಾಣುವುದಿಲ್ಲ, ತೆರವು ಮಾಡುವಂತೆ ಕೆಲವರು ಒತ್ತಾಯಿಸಿದ್ದಕ್ಕೆ, ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಮಂಜುನಾಥ್ ತೆರವು ಮಾಡಿಸುವುದಾಗಿ ತಿಳಿಸಿದರು.

ಯಗಟಿ ಕೆರೆಯಲ್ಲಿ ನೀರು ಅಧಿಕವಾಗಿ ಸಂಗ್ರಹವಾಗಿದ್ದು, ನೀರು ಹರಿದುಹೋಗುವ ತೂಬು ಮುಚ್ಚಲಾಗಿದೆ. ಇದರಿಂದ ಕೆರೆಗೂ ಹಾನಿಯಾಗುವ ಸಂಭವವಿದ್ದು ಕೋಡಿಯನ್ನು ತಗ್ಗಿಸಿ ನೀರು ಹರಿದು ಹೋಗಲು ಕ್ರಮ ವಹಿಸಬೇಕು ಎಂದು ರೈತರೊಬ್ಬರು ಮನವಿ ಮಾಡಿದರು.

ಸಣ್ಣ ನೀರಾವರಿ ಮತ್ತು ವಿಶ್ವೇಶ್ವರಯ್ಯ ಜಲಜೀವನ್ ಮಿಷನ್ ಎಂಜಿನಿಯರ್‌ಗಳು ಸೇರಿ ಇದಕ್ಕೆ ಪರಿಹಾರ ಕಂಡುಕೊಳ್ಳಲು, ತೂಬಿನ ಬದಲಾಗಿ ಕೆರೆಗೆ ಗೇಟ್ ಅಳವಡಿಸಲು ಮತ್ತು ರಿವೀಟ್ಮೆಂಟ್ ಕಾಮಗಾರಿಯೂ ಸೇರಿ ಒಂದು ಯೋಜನೆ ಸಿದ್ಧಪಡಿಸುವಂತೆ ಶಾಸಕರು ಸೂಚಿಸಿದರು.ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಇಒಸಿ ಆರ್.ಪ್ರವೀಣ್, ಗ್ರಾಪಂ ಅಧ್ಯಕ್ಷೆ ಜ್ಯೋತಿ ವಿಶ್ವನಾಥ್, ಉಪಾಧ್ಯಕ್ಷ ವೈ.ಎಸ್.ಸುನಿಲ್, ಸದಸ್ಯರಾದ ಗೋವಿಂದಪ್ಪ, ಗಾಯತ್ರಿ, ವೈ.ಎಚ್.ಮೂರ್ತಿ, ಸತೀಶ್, ಮಂಜುನಾಥ್, ಶಂಕರ್ ನಾಯಕ್, ಪಾರ್ವತಿಬಾಯಿ, ಸಾಕಮ್ಮ, ತಾಲೂಕುಮಟ್ಟದ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.