ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ರೈತರಿಗೆ ಕೃಷಿ ಕಾರ್ಯಾಚರಣೆಗಳನ್ನು ಕೈಗೊಂಡು ಸುಸ್ಥಿರ ಬೆಳೆ ಉತ್ಪಾದನೆ ಪಡೆಯಲು ಅಗತ್ಯವಿರುವ ಹವಾಮಾನ ಮಾಹಿತಿ ಮತ್ತು ಸಲಹೆಗಳನ್ನು ನೀಡಲು ಅಭಿವೃದ್ಧಿಪಡಿಸಲಾದ ಮಾದರಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಹವಾಮಾನ ಬದಲಾವಣೆಯ ಅಡ್ಡ ಪರಿಣಾಮಗಳನ್ನು ಎದುರಿಸಲು ರೈತರು ಸಜ್ಜಾಗಬೇಕೆಂದು ಕೃಷಿ ಇಲಾಖೆಯ ಉಪ ನಿರ್ದೇಶಕ ಪ್ರಕಾಶ ಚವ್ಹಾಣ ಸಲಹೆ ನೀಡಿದರು.ನಗರದ ಬೆಂಗಳೂರು ಬೇಕರಿ ಫಂಕ್ಷನ್ ಹಾಲಿನಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ, ಗ್ರಾಮೀಣ ಕೃಷಿ ಹವಾಮಾನ ಸಲಹಾ ಸೇವಾ ಯೋಜನೆ, ವಿಜಯಪುರ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ, ಬೆಂಗಳೂರು ಹಾಗೂ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ, ಮುದ್ದೇಬಿಹಾಳ ಇವುಗಳ ಸಂಯುಕ್ತಾಶ್ರಯದಲ್ಲಿ ಹವಾಮಾನ ಕೃಷಿ ಮುನ್ಸೂಚನೆ ಹಾಗೂ ಹವಾಮಾನ ಆಧರಿತ ಕೃಷಿ ಕುರಿತು ಏರ್ಪಡಿಸಲಾಗಿದ್ದ ರೈತರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಬದಲಾಗುತ್ತಿರುವ ಹವಾಮಾನದಿಂದ ಕೃಷಿ ಕ್ಷೇತ್ರವನ್ನು ಅಪ್ಪಳಿಸುತ್ತಿರುವ ಗಂಡಾಂತರಗಳನ್ನು ವೈಜ್ಞಾನಿಕವಾಗಿ ಎದುರಿಸುವ ಕೌಶಲ್ಯಗಳನ್ನು ಅರಿತು ಸಮಗ್ರ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡಲ್ಲಿ ಹವಾಮಾನ ವೈಪ್ಯರಿತ್ಯಗಳಿಂದ ಪಾರಾಗಿ ಸುಸ್ಥಿರ ಕೃಷಿ ಬದುಕು ನಿರ್ಮಿಸಿಕೊಳ್ಳಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎಸ್.ಬಿ ಜಗ್ಗಿನವರ ಮಾತನಾಡಿ, ವೈಶಿಷ್ಠ್ಯತೆಯಿಂದ ಕೂಡಿದ ವೈವಿಧ್ಯಮಯ ಕೃಷಿ ಇತಿಹಾಸಕ್ಕೆ ಹೆಸರಾದ ಭಾರತ ಸಹ ಹವಾಮಾನ ವೈರುದ್ಯತೆಗಳಿಗೆ ತೆರೆದುಕೊಳ್ಳುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ನೈಸರ್ಗಿಕ ತತ್ವಗಳ ಆಧಾರದ ಮೇಲೆ ಲಭ್ಯವಿರುವ ಆಧುನಿಕ ಸಂಶೋಧನೆಗಳನ್ನು ಬಳಸಿಕೊಂಡು ಹವಾಮಾನದೊಂದಿಗೆ ಹೊಂದಿಕೊಂಡು ಕೃಷಿ ಪದ್ದತಿಗಳನ್ನು ರೂಢಿಸಿಕೊಳ್ಳಬೇಕಿದೆ. ಅಲ್ಲದೇ, ಧನಾತ್ಮಕತೆ ಎಲ್ಲರಲ್ಲಿಯೂ ಒಡಮೂಡುವುದು ಇಂದಿನ ಅಗತ್ಯವಾಗಿದೆ ಎಂದು ಕಿವಿಮಾತು ಹೇಳಿದರು.ತಾಂತ್ರಿಕ ಗೋಷ್ಠಿಗಳಲ್ಲಿ ಹವಾಮಾನ ಆಧಾರಿತ ಕೃಷಿ ಸಲಹೆಗಳ ಬಗ್ಗೆ ವಿಜ್ಞಾನಿ ಡಾ.ಜಿ.ಎಸ್.ಯಡಹಳ್ಳಿ, ಒಣ ಬೇಸಾಯದಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಕುರಿತಾಗಿ ವಿಜ್ಞಾನಿ ಡಾ.ಎಸ್.ಬಿ ಪಾಟೀಲ, ವಿವಿಧ ಬೆಳೆಗಳಲ್ಲಿ ಕೀಟಗಳ ನಿರ್ವಹಣೆ ಕುರಿತು ವಿಜ್ಞಾನಿ ಡಾ.ಎಸ್.ಎಸ್.ಕರಭಂಟನಾಳ, ಹವಾಮಾನ ಮಾಹಿತಿ ನೀಡುವ ಮೊಬೈಲ್ ಅಪ್ಲಿಕೇಷನ್‌ಗಳ ಕುರಿತು ಜೆ.ಆರ್.ಹಿರೇಮಠ ಹಾಗೂ ಬೆಳೆ ವಿಮೆ, ಎಫ್.ಐ.ಡಿ ಮತ್ತು ಕೃಷಿ ಇಲಾಖೆ ಯೋಜನೆಗಳ ಬಗ್ಗೆ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಸೋಮನಗೌಡ ವಿಷಯ ಮಂಡಿಸಿದರು. ಅಲ್ಲದೇ, ರೈತರೊಂದಿಗೆ ಸಂವಾದ ನಡೆಸಿದರು.
ಮೊದಲಿಗೆ ಎ.ವಿ ಇದರಮನಿ ಸ್ವಾಗತಿಸಿದರು. ಪ್ರಗತಿಪರ ರೈತ ಗುಂಡಪ್ಪ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಸಿ.ಆರ್.ಬಿರಾದಾರ ವಂದಿಸಿದರು.ಕೋಟ್್
ಪಂಚಭೂತಗಳೊಂದಿಗೆ ಬೆಳೆದು ಬಂದಿರುವ ಭಾರತೀಯ ಕೃಷಿ ಪರಂಪರೆಯ ಚಕ್ರವು ಜಾಗತಿಕ ತಾಪಮಾನದ ಪರಿಣಾಮದಿಂದ ಪಲ್ಲಟಗೊಳ್ಳುತ್ತಿದೆ. ಕಾರಣ ಉಂಟಾಗಬಹುದಾದ ಸಂಭಾವ್ಯ ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸಲು ತಂತ್ರಜ್ಞಾನ ಚಾಲಿತ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮತ್ತು ಇರುವ ಸಿದ್ದ ಸೂತ್ರಗಳನ್ನು ಪಾಲಿಸುವ ಜವಾಬ್ದಾರಿ ನಮ್ಮೆಲ್ಲರ ಹಾಗೂ ರೈತರ ಮೇಲಿದೆ.ಅರವಿಂದ ಕೊಪ್ಪ, ಕೃಷಿ ಚಿಂತಕ