ಸಾರಾಂಶ
ಹೂವು-ಹಣ್ಣಿನ ಬೆಲೆ ಗಗನಮುಖಿ, ತರಕಾರಿ ಸಾಮಾನ್ಯ । ಹೊಸ ಬಟ್ಟೆ ಖರೀದಿಗೆ ಜನರ ಉತ್ಸಾಹ
ಕನ್ನಡಪ್ರಭ ವಾರ್ತೆ ರಾಮನಗರಬರದಿಂದಾಗಿ ಕೆರೆ - ಕಟ್ಟೆಗಳು ಬರಿದಾಗಿದ್ದು, ಬೆಳೆಗಳು ಕಾಣದಾಗಿವೆ. ಇದರ ನಡುವೆಯೂ ಜಿಲ್ಲೆಯ ಜನರು ಈ ವರ್ಷ ವಸಂತಾಗಮನವನ್ನು ಸಂಭ್ರಮದಿಂದ ಸ್ವಾಗತಿಸಲು ಸಜ್ಜಾಗುತ್ತಿದ್ದಾರೆ.
ಮಳೆ ಆಗದ ಕಾರಣ ಜಲಾಶಯಗಳು ಹಾಗೂ ಕೆರೆಗಳೆಲ್ಲವೂ ಖಾಲಿಯಾಗಿದ್ದು, ನೀರಿನ ಸಮಸ್ಯೆ ಗಂಭೀರ ಸ್ವರೂಪವನ್ನು ಪಡೆಯುತ್ತಿದೆ. ಬರಗಾಲದ ಛಾಯೆ ಆವರಿಸಿರುವುದರಿಂದ ರೈತರು ತೀರಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ಹಬ್ಬದ ಆಚರಣೆಗೆ ಸಿದ್ಧತೆಗಳು ನಡೆದಿವೆ.ಯುಗಾದಿ ಮುನ್ನಾ ದಿನವಾದ ಸೋಮವಾರ ನಗರದ ಎಂ.ಜಿ.ರಸ್ತೆ ಹಾಗೂ ಕನಕಪುರ ವೃತ್ತ ಜನಜಂಗುಳಿಯಿಂದ ತುಂಬಿಹೋಗಿತ್ತು. ವ್ಯಾಪಾರಸ್ಥರು ಹಣ್ಣು, ಹೂವು, ತರಕಾರಿಗಳೊಂದಿಗೆ ಮಾರಾಟದ ಉತ್ಸಾಹದಲ್ಲಿದ್ದರು. ಗ್ರಾಮೀಣ ಭಾಗದ ಜನರು ಹಬ್ಬದ ಪದಾರ್ಥಗಳ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಮಾರುಕಟ್ಟೆ ರಸ್ತೆಯಲ್ಲಿ ಕಾಲಿಡಲು ಸಾಧ್ಯವಾಗದಷ್ಟು ಜನಸಂದಣಿ ಇತ್ತು.ವ್ಯಾಪಾರಸ್ಥರು ಹೂವು-ಹಣ್ಣಿನ ಬೆಲೆಗಳನ್ನು ಜೋರಾಗಿ ಕೂಗಿ ಹೇಳುತ್ತಾ ಗ್ರಾಹಕರನ್ನು ಆಕರ್ಷಿಸುತ್ತಿದ್ದರು. ಹಬ್ಬದ ಪದಾರ್ಥಗಳ ಖರೀದಿಸಲು ಮುಂದಾಗಿದ್ದ ಜನರು ಬೆಲೆಯಲ್ಲಿ ಚೌಕಾಸಿ ಮಾಡಲು ಮುಂದಾಗಿದ್ದರು. ಹಬ್ಬದ ಕಾರಣದಿಂದಾಗಿ ವ್ಯಾಪಾರಸ್ಥರು ನಿರ್ದಿಷ್ಟ ಬೆಲೆಯನ್ನು ಕಡಿಮೆ ಮಾಡಲು ಒಪ್ಪುತ್ತಿರಲಿಲ್ಲ. ಕೊನೆಗೆ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಹಣ್ಣು-ಹೂವು ಖರೀದಿಸದೆ ಅಗತ್ಯವಿರುವಷ್ಟನ್ನು ಮಾತ್ರ ಖರೀದಿಸಿ ಮುನ್ನಡೆಯುತ್ತಿರುವುದು ಕಂಡುಬಂದಿತು.
ಬಟ್ಟೆ ಅಂಗಡಿಗಳಲ್ಲಿ ಜನರ ದಂಡೇ ತುಂಬಿತ್ತು. ಎಲ್ಲರೂ ಕುಟುಂಬ ಸದಸ್ಯರಿಗೆ ಹೊಸ ಬಟ್ಟೆ ಖರೀದಿಸಲು ಉತ್ಸಾಹದಿಂದ ತೊಡಗಿಸಿಕೊಂಡಿದ್ದರು. ಮಹಿಳೆಯರು, ಮಕ್ಕಳು, ಯುವಕ-ಯುವತಿಯರು ಇಷ್ಟದ ಬಟ್ಟೆ ಖರೀದಿಸಿ ಸಂಭ್ರಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುತ್ತಿತ್ತು.ನಗರದ ರೇಲ್ವೆ ರಸ್ತೆ, ಮಾಗಡಿ ರಸ್ತೆ, ಬೆನಕಾ ಬಜಾರ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಹೂವು, ಹಣ್ಣಿನ ವ್ಯಾಪಾರ ಭರ್ಜರಿಯಾಗಿ ನಡೆದಿತ್ತು.
ಯುಗಾದಿ ಹಬ್ಬದಂದು ದುಪ್ಪಟ್ಟು ದರ:ಇನ್ನು ಕಳೆದ ವರ್ಷದ ಯುಗಾದಿ ಹಬ್ಬದ ಖರೀದಿ ವೇಳೆ ಇದ್ದ ದರ ಇಂದು ದುಪ್ಪಟ್ಟಾಗಿದೆ. ಜತೆಗೆ, ದಿನಸಿ ಪದಾರ್ಥಗಳ ಬೆಲೆಯೂ ಅಧಿಕವಾಗಿವೆ. ಬೆಲೆ ಏರಿಕೆ ನಡುವೆ ಜನತೆ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿಸಿಕೊಂಡಿದ್ದರು.
ಎರಡು ದಿನಗಳಿಂದ ಜಿಲ್ಲಾದ್ಯಂತ ಹಬ್ಬದ ಪ್ರಯುಕ್ತ ಖರೀದಿ ಭರಾಟೆ ಭರ್ಜರಿಯಿಂದ ನಡೆಯುತ್ತಿದೆ. ಜವಳಿ ಖರೀದಿ ಭರ್ಜರಿಯಾಗಿ ನಡೆದಿದೆ. ಬಟ್ಟೆ ಮಳಿಗೆಗಳು ಗ್ರಾಹಕರಿಂದ ತುಂಬಿದ್ದ ದೃಶ್ಯ ಕಂಡು ಬಂದಿತು. ಹಬ್ಬದ ಪ್ರಯುಕ್ತ ಕೆಲವು ಜವಳಿ ಅಂಗಡಿಗಳಲ್ಲಿ ಶೇ.50ರಷ್ಟು ರಿಯಾಯತಿ ಘೋಷಣೆ ಮಾಡಿದ್ದವು. ಇನ್ನು ದಿನಸಿ ಖರೀದಿಯೂ ಭರ್ಜರಿಯಾಗಿ ಜರುಗಿದೆ. ಕೆಲವು ವರ್ತಕರು ತಮ್ಮ ಅಂಗಡಿ ಮುಂಭಾಗ ಪೆಂಡಾಲ್ ಹಾಕಿ ವ್ಯಾಪಾರ ಮಾಡಿದ ದೃಶ್ಯ ಕಂಡು ಬಂದಿತು.ಹರಾಜು ಬದಲಾವಣೆ:
ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲಿ ಹರಾಜು ವಹಿವಾಟು ಸಮಯ ಬದಲಾವಣೆಯಾಗಿದೆ. ಯುಗಾದಿ ಹಬ್ಬದ ದಿನ ಬೆಳಿಗ್ಗೆ 9 ಗಂಟೆ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ಏ.11ರಂದು ರಂಜಾನ್ ಹಬ್ಬದ ಪ್ರಯುಕ್ತ ಹರಾಜು ಪ್ರಕ್ರಿಯೆಯು ಮಧ್ಯಾಹ್ನ 2ಗಂಟೆಗೆ ಆರಂಭವಾಗಲಿದೆ ಎಂದು ರಾಮನಗರ ರೇಷ್ಮೆ ಮಾರುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.ಹೊಸದೊಡಕು:
ಈ ಬಾರಿ ಲೋಕಸಭಾ ಚುನಾವಣೆಯು ಯುಗಾದಿ ಹಬ್ಬದ ಆಚರಣೆಯ ನಡುವೆ ಆಗಮಿಸಿದೆ. ಹಾಗಾಗಿ ಎಲ್ಲೆಡೆ ರಾಜಕೀಯದ ಜತೆಗೆ, ಹಬ್ಬದ ಆಚರಣೆಯು ಜರುಗುತ್ತಿದೆ. ಇನ್ನು ಬುಧವಾರ ಹೊಸವರ್ಷದ ಹೊಸದೊಡಕು ಇರಲಿದೆ. ಅಂದು ಜಿಲ್ಲೆಯಲ್ಲಿ ಬಾಡೂಟದ ಘಮಲು ಎಲ್ಲೆಡೆ ಹರಡಲಿದೆ.ಜೂಜಾಡಿದರೆ ಗೂಂಡಾಕಾಯ್ದೆ :
ಯುಗಾದಿ ಹಬ್ಬದ ಪ್ರಯುಕ್ತ ಬಾಡೂಟದ ಜತೆಗೆ, ಇಸ್ಪೀಟ್ ಆಟ ಎಲ್ಲೆಡೆ ನಡೆಯುತ್ತಿದ್ದವು. ಅಕ್ರಮ ಜೂಜಾಟಕ್ಕೆ ಬ್ರೇಕ್ ಹಾಕುವ ಸಂಬಂಧ ಈಗಾಗಲೇ ಜಿಲ್ಲಾ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಸಾರ್ವಜನಿಕ ಸ್ಥಳ, ಮನೆ, ಕ್ಲಬ್ , ಹೋಟೆಲ್, ರೆಸಾರ್ಟ್ ಸೇರಿದಂತೆ ಇತರೆ ಪ್ರದೇಶದಲ್ಲಿ ಜೂಜು ಆಡುವುದನ್ನು ನಿಷೇಧಿಸಿದೆ. ಒಂದೊಮ್ಮೆ ಇಂತಹ ಘಟನೆ ಕಂಡು ಬಂದರೆ ಆರೋಪಿಗಳ ವಿರುದ್ಧ ಗೂಂಡ ಕಾಯ್ದೆ ಜಾರಿ ಮಾಡಲು ಚಿಂತನೆ ನಡೆಸಲಾಗಿದೆ. ಇನ್ನು ವರ್ಷಾರಂಭ ಯುಗಾದಿಯಲ್ಲಿ ಲಕ್ಷಾಂತರ ಹಣ ಜೂಜಾಟದಲ್ಲಿ ಬಳಕೆಯಾಗುತ್ತಿದ್ದವು.