ಬಲವಂತದ ಭೂ ಸ್ವಾಧೀನ ವಿರುದ್ಧ ಹೋರಾಟಕ್ಕೆ ಸಿದ್ಧತೆ

| Published : Feb 06 2025, 11:47 PM IST

ಸಾರಾಂಶ

ಕುಂದಾಣ: ತಟಮಾಚನಹಳ್ಳಿ ಇರಿಗೇನಹಳ್ಳಿ , ಜಿ.ಹೊಸೂರು, ಬುಳ್ಳಹಳ್ಳಿ ಗ್ರಾಮಗಳು ಒಳಗೊಂಡಂತೆ ವೆಂಕಟಗಿರಿಕೋಟೆ ರೈಲ್ವೆ ನಿಲ್ದಾಣದ ಬಳಿ ೧೦೦ ಎಕರೆ ವ್ಯಾಪ್ತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬೃಹತ್ ರೈಲ್ವೆ ಟರ್ಮಿನಲ್ ನಿಲ್ದಾಣ ಮತ್ತು ಸರ್ಕ್ಯೂಲರ್ ರೈಲ್ವೆ ಲೈನ್ ಯೋಜನೆಯನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಯುವ ಘಟಕದ ರಾಜ್ಯಾಧ್ಯಕ್ಷ ಡಾ. ಬಿ.ಕೆ.ವಿನೋದ್‌ಕುಮಾರ್‌ಗೌಡ ನೇತೃತ್ವದಲ್ಲಿ ಪ್ರಭಾರ ಜಿಲ್ಲಾಧಿಕಾರಿ ಡಾ. ಅನುರಾಧ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕುಂದಾಣ: ತಟಮಾಚನಹಳ್ಳಿ ಇರಿಗೇನಹಳ್ಳಿ , ಜಿ.ಹೊಸೂರು, ಬುಳ್ಳಹಳ್ಳಿ ಗ್ರಾಮಗಳು ಒಳಗೊಂಡಂತೆ ವೆಂಕಟಗಿರಿಕೋಟೆ ರೈಲ್ವೆ ನಿಲ್ದಾಣದ ಬಳಿ ೧೦೦ ಎಕರೆ ವ್ಯಾಪ್ತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬೃಹತ್ ರೈಲ್ವೆ ಟರ್ಮಿನಲ್ ನಿಲ್ದಾಣ ಮತ್ತು ಸರ್ಕ್ಯೂಲರ್ ರೈಲ್ವೆ ಲೈನ್ ಯೋಜನೆಯನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಯುವ ಘಟಕದ ರಾಜ್ಯಾಧ್ಯಕ್ಷ ಡಾ. ಬಿ.ಕೆ.ವಿನೋದ್‌ಕುಮಾರ್‌ಗೌಡ ನೇತೃತ್ವದಲ್ಲಿ ಪ್ರಭಾರ ಜಿಲ್ಲಾಧಿಕಾರಿ ಡಾ. ಅನುರಾಧ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಿ ಮಾತನಾಡಿದ ವಿನೋದ್‌ಕುಮಾರ್‌ಗೌಡ, ರೈಲ್ವೆ ಟರ್ಮಿನಲ್ ನಿರ್ಮಿಸಲು ಉದ್ದೇಶಿಸಿರುವ ಜಮೀನಿನಲ್ಲಿ ಸಣ್ಣ ರೈತರು ದ್ರಾಕ್ಷಿ, ದಾಳಿಂಬೆ, ಫಲಪುಷ್ಪ, ತರಕಾರಿ ಬೆಳೆಯುವುದರ ಜೊತೆಗೆ ಹೈನುಗಾರಿಕೆಗೆ ಬೇಕಾದ ಮೇವನ್ನು ಬೆಳೆಯುತ್ತ ಹಸು, ಕುರಿ, ಕೋಳಿ ಸಾಕಾಣಿಕೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಇದನ್ನೆ ನಂಬಿ ಸಂಸಾರ ನಡೆಸುವ ನೂರಾರು ರೈತ ಕುಟುಂಬಗಳು ಈ ಭೂಮಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಎಲ್ಲರೂ ಅರ್ಧ ಎಕರೆಯಿಂದ ಒಂದೆರಡು ಎಕರೆ ಭೂಮಿ ಹೊಂದಿರುವ ಬಡ ರೈತರು. ಈಗಾಗಲೇ ನಮ್ಮ ತಾಲೂಕಿನಲ್ಲಿ ಕೆಐಎಡಿಬಿ ಹೆಸರಿನಲ್ಲಿ ಸಹಸ್ರಾರು ಎಕರೆ ಕೃಷಿ ಯೋಗ್ಯ ಭೂಮಿಯನ್ನು ಕಬಳಿಸಲಾಗಿದೆ. ಈಗ ರೈಲ್ವೆ ಟರ್ಮಿನಲ್ ಹೆರಸಲ್ಲಿ ಈ ಭೂಮಿಯನ್ನೂ ಕಸಿದುಕೊಂಡರೆ ರೈತರು ಎಲ್ಲಿ ಹೋಗಬೇಕು, ಹೇಗೆ ಬದುಕಬೇಕು ಎಂದು ಪ್ರಶ್ನಿಸಿದರು.ಹೋರಾಟದ ಆರಂಭದಲ್ಲಿ ಕೆಲ ಮುಖಂಡರು ಬಂದು ಡಿಸಿ ಮೂಲಕ ಸರ್ಕಾರಗಳಿಗೆ ಮನವಿ ಸಲ್ಲಿಸುತ್ತಿದ್ದೇವೆ. ಕೂಡಲೆ ಸರ್ಕಾರ ಮತ್ತು ರೈಲ್ವೆ ಅಧಿಕಾರಿಗಳ ಜೊತೆ ಜಿಲ್ಲಾಧಿಕಾರಿಗಳು ಮಾತನಾಡಿ ಈ ಭಾಗದ ರೈತರ ಜೊತೆ ಸಭೆ ನಡೆಸಬೇಕು. ಇಲ್ಲವಾದಲ್ಲಿ ಬಲವಂತದ ಭೂ ಸ್ವಾಧೀನದ ವಿರುದ್ಧ ನಾವು ಮತ್ತೊಂದು ಬೃಹತ್ ಹೋರಾಟಕ್ಕೆ ಸಜ್ಜಾಗುವುದು ಶತಸಿದ್ದ ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ರಾಜ್ಯ ಕಾರ್ಯದರ್ಶಿ ಕಡತನಮಲೆ ನಂಜುಂಡಪ್ಪ ಮಾತನಾಡಿ, ಕೆಐಡಿಬಿ ಹೆಸರಲ್ಲಿ ಕೃಷಿ ಭೂಮಿ ಕಸಿದು ಬಹುರಾಷ್ಟೀಯ ಕಂಪನಿಗಳಿಗೆ ಮತ್ತು ಕೆಲ ಪ್ರಭಾವಿ ರಾಜಕೀಯ ನಾಯಕರ ಕುಟುಂಬಗಳಿಗೆ ಅವರ ಹಿಂಬಾಲಕರಿಗೆ ಭೂಮಿ ಕೊಡಲು ಹೊರಟಿದ್ದಾರೆ. ಸರ್ಕಾರದ ಯೋಜನೆಗಳಿಂದ ರೈತರು ಭೂಮಿ ಕಳೆದುಕೊಂಡು ಬೀದಿ ಪಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಈ ರಾಜಕಾರಣಿಗಳಿಗೆ ಅನ್ನ ಬೆಳೆದು ಹಾಕಲು ಭೂಮಿಯೂ ಇರುವುದಿಲ್ಲ, ರೈತರೂ ಇರುವುದಿಲ್ಲ. ಹಾಗಾಗಿ ಸರ್ಕಾರ ಕೂಡಲೇ ಭೂಸ್ವಾಧೀನ ಯೋಜನೆಯನ್ನು ಕೈಬಿಡಬೇಕು ಎಂದರು.

ಮನವಿ ಸ್ವೀಕರಿಸಿದ ಪ್ರಭಾರ ಜಿಲ್ಲಾಧಿಕಾರಿ ಡಾ.ಅನುರಾಧ, ಮನವಿಯನ್ನು ರಾಜ್ಯ ಸರ್ಕಾರದ ಕಾರ್ಯದರ್ಶಿಗಳಿಗೆ ಕಳುಹಿಸಿಕೊಡುತ್ತೇವೆ. ರೈಲ್ವೆ ಇಲಾಖೆ ಅಧಿಕಾರಿಗಳ ಜತೆ ರೈತ ಸಭೆ ಕರೆಯುವುದಾಗಿ ಭರವಸೆ ನೀಡಿದರು.

ಈ ವೇಳೆ ರೈತ ಸಂಘದ ಚಿಕ್ಕಬಳಾಪುರ ಅಧ್ಯಕ್ಷ ಪ್ರಕಾಶ್, ವೆಂಕಟಗಿರಿಕೋಟೆ ಭಾಗದ ರೈತ ಮುಖಂಡರಾದ ರಾಜಗೋಪಾಲ್, ಆನಂದ್, ಮಂಜುನಾಥ್, ಬಾಬು ಜಗನ್ನಾಥ್ ಇತರರಿದ್ದರು.

೦೧ ಚಿತ್ರಸುದ್ದಿ ಕುಂದಾಣ ೦೫

ವೆಂಕಟಗಿರಿಕೋಟೆ ರೈಲ್ವೆ ನಿಲ್ದಾಣದ ಬಳಿ ೧೦೦ ಎಕರೆ ವ್ಯಾಪ್ತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬೃಹತ್ ರೈಲ್ವೆ ಟರ್ಮಿನಲ್ ನಿಲ್ದಾಣ ಮತ್ತು ಸರ್ಕ್ಯೂಲರ್ ರೈಲ್ವೆ ಲೈನ್ ಯೋಜನೆ ಕೈಬಿಡಲು ಆಗ್ರಹಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ಯುವ ಘಟಕದ ರಾಜ್ಯಾಧ್ಯಕ್ಷ ಡಾ.ಬಿ.ಕೆ.ವಿನೋದ್‌ ಕುಮಾರ್‌ಗೌಡ ನೇತೃತ್ವದಲ್ಲಿ ಪ್ರಭಾರ ಜಿಲ್ಲಾಧಿಕಾರಿ ಡಾ.ಅನುರಾಧ ಅವರಿಗೆ ಮನವಿ ಸಲ್ಲಿಸಿದರು.