ಸಾರಾಂಶ
ಜಿಲ್ಲಾ ಕೇಂದ್ರ ಕೊಪ್ಪಳ ನಗರಕ್ಕೆ ಹೊಂದಿಕೊಂಡೆ ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪಿಸುವುದನ್ನು ತಡೆಯಲು ಬೃಹತ್ ಹೋರಾಟ ರೂಪಿಸಲು, ಪಕ್ಷಾತೀತವಾಗಿ ಮತ್ತು ಸಂಘಟನಾತೀತವಾಗಿ ಬೃಹತ್ ಪೂರ್ವಭಾವಿ ಸಭೆಯನ್ನು ಫೆ. 15ರಂದು ಬೆಳಗ್ಗೆ 10ಕ್ಕೆ ನಗರದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದೆ.
ಕೊಪ್ಪಳ: ಜಿಲ್ಲಾ ಕೇಂದ್ರ ಕೊಪ್ಪಳ ನಗರಕ್ಕೆ ಹೊಂದಿಕೊಂಡೆ ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪಿಸುವುದನ್ನು ತಡೆಯಲು ಬೃಹತ್ ಹೋರಾಟ ರೂಪಿಸಲು, ಪಕ್ಷಾತೀತವಾಗಿ ಮತ್ತು ಸಂಘಟನಾತೀತವಾಗಿ ಬೃಹತ್ ಪೂರ್ವಭಾವಿ ಸಭೆಯನ್ನು ಫೆ. 15ರಂದು ಬೆಳಗ್ಗೆ 10ಕ್ಕೆ ನಗರದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದೆ.
ಎಲ್ಲ ರಾಜಕೀಯ ಪಕ್ಷಗಳು, ಸಂಘಟನೆಗಳು ಒಳಗೊಂಡು ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆಯಡಿ ಹೋರಾಟ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತದೆ.ಈಗಾಗಲೇ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸುವಂತೆ 200ಕ್ಕೂ ಹೆಚ್ಚು ಸಂಘಟನೆಗಳ ಪದಾಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ಅವರು ಸ್ಪಂದಿಸಿದ್ದಾರೆ.
ಕೊಪ್ಪಳ ನಗರದ ವರ್ತಕರ ಸಂಘ, ದಲ್ಲಾಳರ ಸಂಘ, ಹಮಾಲರ ಸಂಘ, ಹಲವಾರು ಮಹಿಳಾ, ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು ಸೇರಿದಂತೆ ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯೇ ಮುಂದಾಳತ್ವ ವಹಿಸಿದ್ದರೂ ಅದುೂ ಪಕ್ಷಾತೀತವಾಗಿ ಮತ್ತು ಸಂಘಟನಾತೀತವಾಗಿ ಎಲ್ಲ ಸಂಘಟನೆಗಳಿಗೆ ಅಹ್ವಾನ ನೀಡಲಾಗಿದೆ.
ಅಷ್ಟೇ ಅಲ್ಲ, ಪೂರ್ವಭಾವಿ ಸಭೆಯಲ್ಲಿ ಭಾಗವಹಿಸುವಂತೆ ಸೋಷಿಯಲ್ ಮೀಡಿಯಾ ಮೂಲಕ, ಮಾಧ್ಯಮದ ಮೂಲಕ ವ್ಯಾಪಕ ಪ್ರಚಾರ ಸಹ ಕೈಗೊಂಡಿದ್ದು, ಸ್ವಯಂ ಪ್ರೇರಿತವಾಗಿಯೂ ಆಗಮಿಸುವಂತೆ ಕೋರಿದ್ದಾರೆ.ಕಾರ್ಖಾನೆಗಳ ಹಠಾವೋ ಕೊಪ್ಪಳ ಬಚಾವೋ ಹಾಗೂ ಉಸಿರುಗಟ್ಟುವ ಮುನ್ನ ಧ್ವನಿ ಎತ್ತೋಣ ಬನ್ನಿ ಎನ್ನುವ ಸ್ಲೋಗನ್ ಮೂಲಕ ಜಾಗೃತಿ ಸಹ ಮೂಡಿಸಲಾಗಿದೆ.
ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷಗಳನ್ನು ಸಿದ್ಧ ಮಾಡುವುದು ಹಾಗೂ ರಾಷ್ಟ್ರೀಯ ಹಸಿರು ಪೀಠಕ್ಕೂ ಹೋಗುವ ಕುರಿತು ಸಹ ಚರ್ಚೆ ಮಾಡಲಾಗುತ್ತದೆ. ಈ ಸಂಬಂಧ ಸಾಕಷ್ಟು ದಾಖಲೆಗಳನ್ನೂ ಸಂಗ್ರಹಿಸಲಾಗಿದೆ.ಮಾರ್ಗದರ್ಶನ ನೀಡಿ: ಇದೊಂದು ಕೊಪ್ಪಳ ಸೇರಿದಂತೆ ತಾಲೂಕಿನ ಜನರ ಜೀವ ಉಳಿಸುವುದಕ್ಕಾಗಿ ಮಾಡುತ್ತಿರುವ ಹೋರಾಟವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಭಾಗವಹಿಸಬೇಕು. ಹೋರಾಟವನ್ನು ಜನಾಂದೋಲನವಾಗಿ ರೂಪಿಸಲು ಪೂರ್ವಭಾವಿ ಸಭೆಯಲ್ಲಿ ಮಾರ್ಗದರ್ಶನ ನೀಡಬೇಕು ಎಂದು ಸಂಚಾಲಕ ಶರಣಪ್ಪ ಸಜ್ಜನ ಹೇಳಿದರು.ಜನಜಾಗೃತಿಯ ಮೂಲಕ ಹೋರಾಟವನ್ನು ತೀವ್ರಗೊಳಿಸಿ, ಕೊಪ್ಪಳಕ್ಕೆ ಹೊಂದಿಕೊಂಡು ಸ್ಥಾಪಿಸಲು ಉದ್ಧೇಶಿಸಿರುವ ಬಿಎಸ್‌ಪಿಎಲ್ ಕಂಪನಿಯನ್ನು ಇಲ್ಲಿಂದ ಓಡಿಸಬೇಕಾಗಿದೆ. ಕಾರಣ ಪ್ರತಿಯೊಬ್ಬರೂ ಕೈಜೋಡಿಸಿ ಎಂದು ಸಂಚಾಲಕ ಶಿವಕುಮಾರ ಕುಕನೂರು ಹೇಳಿದರು.ಪೂರ್ವಭಾವಿ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಮುಂದಿನ ಹೋರಾಟಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿಸಲು ಚರ್ಚಿಸಿ, ನಿರ್ಧಾರ ಮಾಡೋಣ ಬನ್ನಿ ಎಂದು ಸಂಚಾಲಕ ಮಂಜುನಾಥ ಅಂಗಡಿ ಹೇಳಿದರು.ಕೊಪ್ಪಳ ಬಳಿ ಕಾರ್ಖಾನೆಯನ್ನು ಎತ್ತಂಗಡಿ ಮಾಡದಿದ್ದರೆ ಕೊಪ್ಪಳದಲ್ಲಿ ಬದುಕಲು ಸಾಧ್ಯವಿಲ್ಲ. ಎಲ್ಲರೂ ಕೂಡಿ ಹೋರಾಟ ಮಾಡುವ ಅಗತ್ಯವಿದೆ ಎಂದು ಕೊಪ್ಪಳ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಶಾ ಹೇಳಿದರು.ಕಾರ್ಖಾನೆಯ ವಿರುದ್ಧ ಜನಾಂದೋಲನ ಮಾಡಲು ಪಕ್ಷಾತೀತವಾಗಿ ಬೆಂಬಲಿಸುವ ಅಗತ್ಯವಿದೆ. ಕೊಪ್ಪಳದ ಉಳುವಿಗಾಗಿ ಹೋರಾಡೋಣ ಎಂದು ಸಂಚಾಲಕ ರಮೇಶ ತುಪ್ಪದ ಹೇಳಿದರು.