ಸಾರಾಂಶ
ಚಾಮರಾಜನಗರದಲ್ಲಿ ಮುಖಂಡ ವಿ.ಸೋಮಣ್ಣ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರಾದ ಚನ್ನಂಜಯ್ಯ, ಶಿವಕುಮಾರ್ ಇದ್ದಾರೆ.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಅಂಕನಶೆಟ್ಟಿಪುರದಲ್ಲಿದ್ದ ಪ್ರೇರಣಾ ವಿದ್ಯಾ ಸಂಸ್ಥೆಯನ್ನು ವೆಂಕಟಯ್ಯನಛತ್ರಕ್ಕೆ ಸ್ಥಳಾಂತರ ಮಾಡಿರುವುದನ್ನು ಹಿಂಪಡೆದು ಅಂಕನಶೆಟ್ಟಿಪುರದಲ್ಲೆಯೇ ಮುಂದುವರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಮುಖಂಡ ವಿ.ಸೋಮಣ್ಣ ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೇರಣಾ ವಿದ್ಯಾ ಸಂಸ್ಥೆಯು ಶಿಕ್ಷಣ ಇಲಾಖೆಯ ಪೂರ್ವಾನುಮತಿ ಪಡೆಯದೇ ವೆಂಕಟಯ್ಯನಛತ್ರಕ್ಕೆ ಅನಧಿಕೃತ ಸ್ಥಳಕ್ಕೆ ಶಾಲೆಯನ್ನು ಸ್ಥಳಾಂತರ ಮಾಡಿದ್ದಾರೆ. ಅಲ್ಲದೇ ಉಪನಿರ್ದೇಶಕರು ಅಧೀನ ಅಧಿಕಾರಿಗಳು ವರದಿಗಳನ್ನು ಸಹ ಪರಿಗಣಿಸದೇ ಅನಧಿಕೃತ ಶಾಲೆಗೆ ಇನ್ನು ೧೦ ವರ್ಷಗಳ ಮಾನ್ಯತೆಯನ್ನು ನವೀಕರಣ ಮಾಡಿದ್ದು, ಇದನ್ನು ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿದರು. ೨೦೧೦-೧೧ನೇ ಸಾಲಿನಲ್ಲಿ ಪ್ರಾರಂಭವಾಗಿರುವ ಈ ಶಾಲೆ ಉತ್ತಮವಾಗಿಯೇ ನಡೆಯುತ್ತಿತ್ತು, ಈಗ ಏಕಾಏಕಿ ವೆಂಕಟಯ್ಯನಛತ್ರಕ್ಕೆ ಅನಧಿಕೃತ ಸ್ಥಳಕ್ಕೆ ಶಾಲೆಯನ್ನು ಸ್ಥಳಾಂತರ ಮಾಡಿದ್ದಾರೆ. ಅದು ರಾಷ್ಟ್ರೀಯ ಹೆದ್ದಾರಿ ಪಕ್ಕಕ್ಕೆ, ಮುಂದೆ ಮಕ್ಕಳಿಗೆ ಅನಾಹುತವಾದರೆ ಯಾರು ಹೊಣೆ ಎಂದರು.ಮೊದಲೆ ಅನಧಿಕೃತ ಶಾಲೆಯಾಗಿದ್ದು, ಶಿಕ್ಷಣ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಹೀಗಾಗಿ ಈ ಶಾಲೆಗೆ ನೀಡಿರುವ ನವೀಕರಣ ಮಾನ್ಯತೆಯನ್ನು ರದ್ದುಪಡಿಸಬೇಕು ಎಂದು ಅಗ್ರಹಿಸಿದರು. ಈ ಬಗ್ಗೆ ಅನೇಕ ದೂರುಗಳನ್ನು ಸಲ್ಲಿಸಿದ ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಣ ಸಂಸ್ಥೆಗೆ ಕಾರಣ ಕೇಳಿ ಮೂರು ಬಾರಿ ನೋಟಿಸ್ ಜಾರಿ ಮಾಡಿದ್ದರು. ಆಡಳಿತ ಮಂಡಲಿಯವರು ಸಮಂಜಸ ಉತ್ತರ ನೀಡಲಿಲ್ಲ. ಡಿಡಿಪಿಐಗೆ ಅಂತಿಮ ವರದಿಯನ್ನು ಸಲ್ಲಿಸಿ, ಸದರಿ ಶಾಲೆಗೆ ಮಾನ್ಯತೆ ನೀಡಬಾರದು ಹಾಗೂ ಶಾಲಾ ನೋಂದಣಿಯನ್ನು ರದ್ದುಪಡಿಸಲು ಶಾಲಾ ಭೇಟಿ ವರದಿಗಳನ್ನು ಲಗತ್ತಿಸಿ ಬಿಇಒ ಶಿಫಾರಸ್ಸು ಮಾಡಿದ್ದಾರೆ. ಆದರೆ ಉಪ ನಿರ್ದೇಶಕರು ಈ ಎಲ್ಲ ವರದಿಗಳನ್ನು ಗಾಳಿಗೆ ತೂರಿ ಇಲಾಖೆಯ ನಿಯಮವನ್ನು ಉಲ್ಲಂಘಣೆ ಮಾಡಿ, ೨೦೨೪-೨೫ ರಿಂದ ೨೦೩೪ನೇ ಸಾಲಿನವೆರಗೆ ನವೀಕರಣ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದರು.
ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು ಇಲ್ಲದಿದ್ದರೆ, ಶಿಕ್ಷಣ ಇಲಾಖೆಯ ಆಯುಕ್ತರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿಗಳನ್ನು ಭೇಟಿ ಮಾಡುತ್ತೇವೆ, ಇಲ್ಲದಿದ್ದರೆ ಗ್ರಾಮಸ್ಥರರೊಡಗೂಡಿ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಚನ್ನಂಜಯ್ಯ, ಶಿವಕುಮಾರ್ ಇದ್ದರು.