ನುಡಿದೀಪ್ತಿ- ಬಿಜಾಪುರ ಶ್ರೀ ಸಿದ್ದೇಶ್ವರ ಸ್ವಾಮಿಗಳ ಸೂಕ್ತಿಗಳ ಸಂಗ್ರಹ

| Published : Nov 05 2024, 12:38 AM IST

ನುಡಿದೀಪ್ತಿ- ಬಿಜಾಪುರ ಶ್ರೀ ಸಿದ್ದೇಶ್ವರ ಸ್ವಾಮಿಗಳ ಸೂಕ್ತಿಗಳ ಸಂಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಗಳ ಒಂದೊಂದು ನುಡಿಮುತ್ತುಗಳು ಕೂಡ ಅತ್ಯಂತ ಮೌಲಿಕವಾದುವು.

ಕನ್ನಡಪ್ರಭ ವಾರ್ತೆ ಮೈಸೂರು

''''ರಾಜೇಂದ್ರ ಶಿಶು'''' ಎಂಬ ಕಾವ್ಯನಾಮದಿಂದ ಬರೆಯುವ ಎಂ.ಎ. ನೀಲಾಂಬಿಕಾ ಅವರು ''''ನುಡಿದೀಪ್ತಿ'''' ಹಾಗೂ ''''ವಚನ ಕಥಾಲೋಕ'''' ಎಂಬ ಕೃತಿಗಳನ್ನು ರಚಿಸಿದ್ದಾರೆ.ನುಡಿದೀಪ್ತಿಯು ಬಿಜಾಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳ ಸೂಕ್ತಿಗಳ ಸಂಗ್ರಹ. ಸುತ್ತೂರು ಶ್ರೀಕ್ಷೇತ್ರದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಗಳ ಪ್ರವಚನ ಪ್ರತಿ ವರ್ಷ ನಡೆಯುತ್ತಿತ್ತು. ಶ್ರೀಗಳ ಒಂದೊಂದು ನುಡಿಮುತ್ತುಗಳು ಕೂಡ ಅತ್ಯಂತ ಮೌಲಿಕವಾದುವು. ಅವುಗಳನ್ನು ಪಾಲಿಸಿದರೆ ಜೀವನ ಪಥವನ್ನೇ ಬದಲಿಸುವಂಥವು. ಹೀಗಾಗಿ ಎಲ್ಲರೊಳಗೊಂದಾಗಿ ಕೇವಲ ಪ್ರವಚನ ಆಲಿಸುವುದಕ್ಕಷ್ಟೇ ಸೀಮಿತರಾದ ನೀಲಾಂಬಿಕಾ ಅವರು ಅವುಗಳಿಗೆ ಅಕ್ಷರರೂಪ ನೀಡಿದ್ದಾರೆ. ಇಲ್ಲಿ 200ಕ್ಕೂ ಹೆಚ್ಚು ಮೌಲಿಕ ಸೂಕ್ತಿಗಳಿವೆ. ಓದುಗರು ಸದಾಕಾಲ ಸ್ಮರಿಸುವಂತ ಮಾತುಗಳು ಇವಾಗಿವೆ.ನೀಲಾಂಬಿಕೆ ಅವರು ವಚನ ಕಥಾಲೋಕದಲ್ಲಿ ಬಸವಾದಿ ಶರಣರ ವಚನಗಳನ್ನು ದೃಷ್ಟಾಂತವಾಗಿಟ್ಟುಕೊಂಡು 101 ವಚನಗಳಿಗೆ ಕಥೆಯ ರೂಪ ನೀಡಿದ್ದಾರೆ. ಪ್ರತಿಯೊಂದು ವಚನಕ್ಕೂ ವೈವಿಧ್ಯಮಯವಾದ ಕಥೆಗಳನ್ನು ಸಂಯೋಜನೆಗೊಳಿಸಿದ್ದಾರೆ. ಬಸವಣ್ಣ, ಅಕ್ಕಮಹಾದೇವಿ, ಮೋಳಿಗೆ ಮಾರಯ್ಯ, ಚಂದಿಮರಸ,ಅಲ್ಲಮಪ್ರಭು, ಜೇಡರ ದಾಸಿಮಯ್ಯ, ಆಯ್ದಕ್ಕಿ ಮಾರಯ್ಯ, ಆಯ್ದಕ್ಕಿ ಲಕ್ಕಮ್ಮ, ಕಾಳವ್ವೆ ನೀಲಮ್ಮ, ಷಣ್ಮುಕ ಶಿವಯೋಗಿಗಳು, ಘಟ್ಟಿವಾಳಯ್ಯ, ಹಡಪದ ಅಪ್ಪಣ್ಣ ಮೊದಲಾದ ಪ್ರಮುಖರ ವಚನಗಳನ್ನು ಆಯ್ದುಕೊಂಡು, ಆ ವಚನಗಳ ಸಂದೇಶಕ್ಕೆ ಅನ್ವರ್ಥವಾಗಿ ಕಥೆಗಳನ್ನು ಸೇರಿಸುವುದರ ಮೂಲಕ ಓದುಗರ ಮನಸೆಳೆಯುವ ಯತ್ನ ಮಾಡಿದ್ದಾರೆ. ಮಕ್ಕಳಿಗಂತೂ ತುಂಬಾ ಉಪಯುಕ್ತವಾಗಿದೆ. ಮಕ್ಕಳಿಗೆ ನೀತಿ ಪಾಠ ಕಲಿಸಲು ಈ ಕೃತಿಯನ್ನು ಶಾಲೆಗಳಲ್ಲಿ ಓದಿಸಬಹುದು.ಶರಣು ವಿಶ್ವವಚನ ಫೌಂಡೇಷನ್ ಈ ಕೃತಿಗಳನ್ನು ಪ್ರಕಟಿಸಿದ್ದು, ವಚನ ಕಥಾಲೋಕಕ್ಕೆ ಶ್ರೀ ನೀಲಕಂಠಸ್ವಾಮಿ ಮಠದ ಸಿದ್ದಮಲ್ಲ ಸ್ವಾಮೀಜಿ ಅವರ ಹಾರೈಕೆ, ಪ್ರೊ.ಎಸ್. ಶಿವರಾಜಪ್ಪ ಅವರ ಮುನ್ನುಡಿ, ವಚನಕುಮಾರಸ್ವಾಮಿ ಅವರ ಬೆನ್ನುಡಿ, ನುಡಿದೀಪ್ತಿಗೆ ನಿವೃತ್ತ ಡಿಡಿಪಿಐ ಸ್ವಾಮಿ ಅವರ ಮುನ್ನುಡಿ, ರೂಪಾ ಕುಮಾರಸ್ವಾಮಿ ಅವರ ಬೆನ್ನುಡಿ ಇದೆ. ಆಸಕ್ತರು ಮೊ. 99011 37948, 82170 81644 ಸಂಪರ್ಕಿಸಬಹುದು.ನಾಳೆ ಬಿಡುಗಡೆಶರಣು ವಿಶ್ವವಚನ ಫೌಂಡೇಷನ್ ಕನ್ನಡ ರಾಜ್ಯೋತ್ಸವ ಅಂಗವಾಗಿ ನ.6 ರಂದು ಸಂಜೆ 5ಕ್ಕೆ ಖಿಲ್ಲೆ ಮೊಹಲ್ಲಾದ ನಟರಾಜ ಸಭಾಭವನದಲ್ಲಿ ಶ್ರೀ ಚಿದಾನಂದ ಸ್ವಾಮಿಗಳ ಸಾನ್ನಿಧ್ಯ, ಶ್ರೀ ಸಿದ್ದಮಲ್ಲ ಸ್ವಾಮಿಗಳ ಸಮ್ಮುಖದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಎಂ.ಎ. ನೀಲಾಂಬಿಕಾ ಅವರ ವಚನ ಕಥಾಲೋಕ, ನುಡಿದೀಪ್ತಿ ಕೃತಿಗಳನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಬಿಡುಗಡೆ ಮಾಡುವರು. ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಕೃತಿಗಳನ್ನು ಕುರಿತು ಮಾತನಾಡುವರು. ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸುವರು. ರೂಪಾ ಕುಮಾರಸ್ವಾಮಿ ಪ್ರಾಸ್ತಾವಿಕ ಭಾಷಣ ಮಾಡುವರು. ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ ಉಪಸ್ಥಿತರಿರುವರು.