ಸಾರಾಂಶ
ಬೆಂಗಳೂರು : ರಾಜ್ಯದಲ್ಲಿ ಡೆಂಘೀ ಜ್ವರದ ಪ್ರಕರಣಗಳು ಇಲ್ಲ ಎನ್ನುತ್ತಿಲ್ಲ. ಡೆಂಘೀ ಜತೆಗೆ ಝೀಕಾ ವೈರಸ್ ಕೂಡ ಹರಡುತ್ತಿದೆ. ಆದರೆ ವೈದ್ಯಕೀಯ ತುರ್ತು ಪರಿಸ್ಥತಿ ಘೋಷಿಸುವ ಸ್ಥಿತಿಯಿಲ್ಲ. ಜನರಲ್ಲಿ ವಿನಾಕಾರಣ ಆತಂಕ ಸೃಷ್ಟಿಸುವ ಪ್ರಯತ್ನ ಮಾಡಬೇಡಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೆಂಘೀ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಿಸಬೇಕು ಎಂಬ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು. ರಾಜ್ಯದಲ್ಲಿ ಡೆಂಘೀ ಪ್ರಕರಣ ಹೆಚ್ಚಾಗಿರುವುದು ಸತ್ಯ. ಅವುಗಳನ್ನು ಕಡಿಮೆ ಮಾಡಲು ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕ್ಕೆ ಸೂಚಿಸಲಾಗಿದೆ. ಸಂಸದ ಡಾ.ಸಿ.ಎನ್. ಮಂಜುನಾಥ್ ಅವರೊಂದಿಗೂ ನಾನೇ ಖುದ್ದಾಗಿ ಮಾತನಾಡಿ ಸಲಹೆ ಪಡೆದಿದ್ದೇನೆ. ಜತೆಗೆ ಸೊಳ್ಳೆ ನಿಯಂತ್ರಣಾ ಕ್ರಮ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.
ಈ ಸಂಬಂಧ ತಾಂತ್ರಿಕ ಸಲಹಾ ಸಮಿತಿ ಜತೆ ಸಭೆ ನಡೆಸಿ ಅಗತ್ಯ ಬೆಡ್ ವ್ಯವಸ್ಥೆ, ಔಷಧ ವ್ಯವಸ್ಥೆ ಎಲ್ಲವನ್ನೂ ಮಾಡಿದ್ದೇವೆ. ಸೋಂಕಿತರು ಹಾಗೂ ಸಾವನ್ನಪ್ಪಿರುವವರ ಮಾಹಿತಿಯನ್ನೂ ಬಿಡುಗಡೆ ಮಾಡಿದ್ದೇವೆ. ಒಂದೆರಡು ಕಡೆ ಝೀಕಾ ವೈರಸ್ ಕೂಡ ಕಂಡುಬಂದಿದೆ. ಇವೆರಡೂ ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಸೋಂಕಿತ ಸೊಳ್ಳೆಗಳಿಂದ ಮಾತ್ರ ಹರಡುತ್ತವೆ. ಹೀಗಾಗಿ ಆತಂಕ ಸೃಷ್ಟಿಸುವುದು ಬೇಡ ಎಂದರು.
ಕೊಳಗೇರಿ ಪ್ರದೇಶಗಳಿಗೆ ಬಿಜೆಪಿ ನಾಯಕರ ಭೇಟಿ ಬಗ್ಗೆ ಮಾತನಾಡಿದ ಅವರು, ‘ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ವಿರೋಧಪಕ್ಷಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಎಲ್ಲೆಲ್ಲೋ ಹೋಗಿ ರಾಜಕೀಯ ಹೇಳಿಕೆ ನೀಡುವ ಬದಲು ನಮ್ಮ ಜತೆ ಕೈಜೋಡಿಸಲಿ. ಅಶೋಕ್ ಅವರು ಪ್ರಚಾರಕ್ಕಾಗಿ ಹೇಳಿಕೆ ನೀಡುವುದನ್ನು ನಿಲ್ಲಿಸಲಿ’ ಎಂದು ದಿನೇಶ್ ತಿಳಿಸಿದರು.
ಬಿಜೆಪಿಯವರಂತೆ ರೆಸಾರ್ಟ್‌ಗೆ ಹೋಗಿ ಈಜಿಲ್ಲ: ದಿನೇಶ್ ಟಾಂಗ್
ನಾನು ಈಜುಕೊಳದಲ್ಲಿ ಈಜುತ್ತಿರುವ ಬಗ್ಗೆ ಬಿಜೆಪಿಯವರು ಟೀಕಿಸುತ್ತಿದ್ದಾರೆ. ನಾನು ಅವರಂತೆ ರೆಸಾರ್ಟ್‌ಗೆ ಹೋಗಿ ಸ್ವಿಮ್ ಮಾಡಿಲ್ಲ. ನೆಲಮಂಗಲದಲ್ಲಿ ಮದ್ಯ ಹಾಗೂ ಬಾಡೂಟ ಹಂಚಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದರು.
ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ. ಡೆಂಘೀ ಸೊಳ್ಳೆಗಿಂತ ವೇಗವಾಗಿ ಸುಳ್ಳು ಹರಡುತ್ತಾರೆ. ಈಜು ಒಂದು ಉತ್ತಮ ವ್ಯಾಯಾಮ ಹಾಗೂ ಆರೋಗ್ಯಕರ ಹವ್ಯಾಸ ಎಂಬುದು ಅವರಿಗೆ ಗೊತ್ತಿಲ್ಲ ಎಂದು ಕಿಡಿಕಾರಿದರು.
ವಾಕಿಂಗ್, ಜಾಗಿಂಗ್ ರೀತಿಯಲ್ಲೇ ಸ್ವಿಮ್ಮಿಂಗ್ ಕೂಡ ಆರೋಗ್ಯಕ್ಕೆ ಉತ್ತಮ. ಬಿಜೆಪಿಯವರಿಗೆ ಕೇವಲ ಮೋಜು- ಮಸ್ತಿ ಮಾಡಿಯೇ ಅಭ್ಯಾಸ. ನಾನು ಬೆಳಗ್ಗೆ ಆರು ಗಂಟೆಗೆ ಎದ್ದು ಪಾಲಿಕೆ ಈಜುಕೊಳದಲ್ಲಿ ಈಜಿದ್ದೇನೆ. ಅದರಲ್ಲಿ ತಪ್ಪೇನಿದೆ? ಬಳಿಕ ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ನನ್ನ ಕೆಲಸ ಮಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
)
;Resize=(128,128))
;Resize=(128,128))