ತ್ಯಾಜ್ಯ ಘಟಕಗಳು ಕನಿಷ್ಠ ಮೂರು ಕಿಮೀ ದೂರದಲ್ಲಿರಲಿ: ಶಿವಲಿಂಗಯ್ಯ ಆಗ್ರಹ

| Published : Jul 09 2024, 12:56 AM IST

ತ್ಯಾಜ್ಯ ಘಟಕಗಳು ಕನಿಷ್ಠ ಮೂರು ಕಿಮೀ ದೂರದಲ್ಲಿರಲಿ: ಶಿವಲಿಂಗಯ್ಯ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಜಲಮೂಲ, ಮಣ್ಣಿನ ಫಲವತ್ತತೆಗೂ ಕಂಟಕ ಬಂದಿದೆ. ಜತೆಗೆ ತಿರುಮಲೆ, ಎನ್ಇಎಸ್ ಬಡಾವಣೆ, ಚೆನ್ನಪ್ಪ ಬಡಾವಣೆ, ನಟರಾಜ್ ಬಡಾವಣೆ, ಬೈಚಾಪುರ, ವೆಂಕಟಯ್ಯಪಾಳ್ಯ, ಕೆಬ್ಬೆಪಾಳ್ಯ, ಜೀವಿಪಾಳ್ಯ ಸೇರಿ ಇತರೆ ನಿವಾಸಿಗಳ ಮನೆಯಲ್ಲಿ ಜನರು ಶ್ವಾಸಕೋಶದ ಸಮಸ್ಯೆಯಿಂದ ರೋಗಗ್ರಸ್ಥರಾಗುತ್ತಿದ್ದಾರೆ. ರೋಗದ ಭೀತಿಯಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲು ಹಿಂಜರಿಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಾಗಡಿ

ಕಾನೂನು ಪ್ರಕಾರ ತ್ಯಾಜ್ಯ ಘಟಕಗಳು ಕನಿಷ್ಠ ಮೂರು ಕಿ.ಮೀ ದೂರದಲ್ಲಿರಬೇಕು. ಆದರೆ, ಪುರಸಭೆಯು ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇವಸ್ಥಾನದಿಂದ ಕೇವಲ 250 ಮೀಟರ್ ಅಂತರದಲ್ಲಿ ತ್ಯಾಜ್ಯ ಘಟಕವನ್ನು ಸ್ಥಾಪಿಸಿದೆ. ಇದು ಕಾನೂನು ಬಾಹಿರವಾಗಿದೆ ಎಂದು ನಿಸರ್ಗ ಪರಿಚರಣ ಟ್ರಸ್ಟ್ ಅಧ್ಯಕ್ಷ ಎಚ್.ಎನ್.ಶಿವಲಿಂಗಯ್ಯ ಹೇಳಿದರು.

ಪಟ್ಟಣದ ತಿರುಮಲೆ ಪ್ರಸಿದ್ಧ ತಿರುಮಲೆ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಾನುವಾರ ನಿಸರ್ಗ ಪರಿಚರಣ ಟ್ರಸ್ಟ್ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಈ ತ್ಯಾಜ್ಯ ಘಟಕಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚುತ್ತಿರುವುದರಿಂದ ಪರಿಸರ ಮಾಲಿನ್ಯವಾಗುತ್ತಿರುವುದಲ್ಲದೇ, ಮನುಕುಲ, ಪ್ರಾಣಿ, ಪಕ್ಷಿ ಸಂಕುಲದ ಮೇಲೂ ಪರಿಣಾಮ ಬೀರುತ್ತಿದೆ. ಸುಮಾರು 8 ರಿಂದ 10 ಶಾಲಾ ಕಾಲೇಜುಗಳಿವೆ. ಶ್ರೀರಂಗನಾಥಸ್ವಾಮಿ ದೇವಸ್ಥಾನಕ್ಕೆ ನಿತ್ಯ ಸಾವಿರಾರು ಮಂದಿ ಭಕ್ತರು ತ್ಯಾಜ್ಯದ ಮಾಲಿನ್ಯದಿಂದ ಶ್ವಾಸಕೋಶದ ಸಮಸ್ಯೆಗಳಿಗೆ ಒಳಗಾಗುವ ಆತಂಕದಲ್ಲಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು.

ಜಲಮೂಲ, ಮಣ್ಣಿನ ಫಲವತ್ತತೆಗೂ ಕಂಟಕ ಬಂದಿದೆ. ಜತೆಗೆ ತಿರುಮಲೆ, ಎನ್ಇಎಸ್ ಬಡಾವಣೆ, ಚೆನ್ನಪ್ಪ ಬಡಾವಣೆ, ನಟರಾಜ್ ಬಡಾವಣೆ, ಬೈಚಾಪುರ, ವೆಂಕಟಯ್ಯಪಾಳ್ಯ, ಕೆಬ್ಬೆಪಾಳ್ಯ, ಜೀವಿಪಾಳ್ಯ ಸೇರಿ ಇತರೆ ನಿವಾಸಿಗಳ ಮನೆಯಲ್ಲಿ ಜನರು ಶ್ವಾಸಕೋಶದ ಸಮಸ್ಯೆಯಿಂದ ರೋಗಗ್ರಸ್ಥರಾಗುತ್ತಿದ್ದಾರೆ. ರೋಗದ ಭೀತಿಯಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲು ಹಿಂಜರಿಯುತ್ತಿದ್ದಾರೆ.

ಪುರಸಭೆ ಪ್ಲಾಸ್ಟಿಕ್ ಬ್ಯಾನ್ ಮಾಡಲು ಕ್ರಮ ಕೈಗೊಂಡಿಲ್ಲ, ತ್ಯಾಜ್ಯವನ್ನು ಎಲ್ಲಂದರಲ್ಲಿ ಎಸೆಯಬಾರದು ಎಂದು ಕನಿಷ್ಠ ನಾಮಫಲಕವಿಲ್ಲ, ಇಂಥ ಪರಿಸ್ಥಿತಿಯಲ್ಲಿ ಕಡಿಮೆ ವೇತನ, ಹೆಚ್ಚು ದುಡಿಮೆ ಮಾಡುತ್ತಿರುವ ಪೌರಕಾರ್ಮಿಕರು ಎಲ್ಲ ತರಹದ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿದ್ದಾರೆ. ನಿಜಕ್ಕೂ ಅವರಿಗೆ ನಾಗರಿಕರು ಮಾನವೀಯತೆ ತೋರಬೇಕಿದೆ. ತ್ಯಾಜ್ಯಕ್ಕೆ ಬೆಂಕಿ ಹಚ್ಚಬಾರದು ಎಂದು ಪುರಸಭೆ ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷೆ ಕಲ್ಪನಾ ಶಿವಣ್ಣ ಮಾತನಾಡಿ, ಪುರಸಭೆಯ ತ್ಯಾಜ್ಯ ಘಟಕದಲ್ಲಿ ಕಸಕ್ಕೆ ಬೆಂಕಿ ಹಚ್ಚುವುದರಿಂದ ನಿವಾಸಿಗಳಿಗೆ ಸಾಕಷ್ಟು ತೊಂದರೆ ಜತೆಗೆ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ, ಪ್ಲಾಸ್ಟಿಕ್ ಇಲ್ಲದಿದ್ದರೆ ಬದುಕೇ ಇಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ.

ಇಂಥ ಪರಿಸ್ಥಿತಿಯಲ್ಲಿ ನಾವು ಬದುಕಿದ್ದರೂ ಪ್ರಯೋಜನವಿಲ್ಲ, ಪರಿಸರ ನಮ್ಮ ತಾಯಿ, ತಾಯಿಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ಜನರ ಸಮಸ್ಯೆಗಳ ಬಗೆಹರಿಸುವಲ್ಲಿ ಚಿಂತಿಸಬೇಕಾದ ಪುರಸಭೆ ಸದಸ್ಯರು, ಜನಪ್ರತಿನಿಧಿಗಳು ಸಮಸ್ಯೆಗಳನ್ನು ಮತ್ತಷ್ಟು ಜಟಿಲಗೊಳಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸಂಬಂಧಪಟ್ಟ ಜನಪ್ರತಿನಿಧಿಗಳು ಎಚ್ಚೆತ್ತು ತ್ಯಾಜ್ಯ ಘಟಕವನ್ನು ಬೇರೆಡೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿದರು.ಈ ಸಂಬಂಧ ಶಾಸಕ ಎಚ್.ಸಿ.ಬಾಲಕೃಷ್ಣ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡುವುದು, ನಂತರ ಜಿಲ್ಲಾ ಉಸ್ತವಾರಿ ಸಚಿವರಿಗೆ, ಸಂಸದರಿಗೆ, ಮುಖ್ಯಮಂತ್ರಿಗಳಿಗೆ ಲಿಖಿತ ಮನವಿ ಪತ್ರ ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ರೈತ ರೇಣುಕಪ್ಪ, ಮುನಿರಾಜು, ತಿರುಮಲೆ ಶ್ರೀನಿವಾಸ್, ಗಿರೀಶ್, ಹನುಮಂತಯ್ಯ, ಗಂಗಣ್ಣ, ಗಂಗನರಸಿಂಹಯ್ಯ, ಬಸವರಾಜು, ರಂಗೇಗೌಡ, ವೆಂಕಟಸ್ವಾಮಿ, ಶಶಿಧರ್, ಶೇಷಾದ್ರಿ ಇತರರು ಭಾಗವಹಿಸಿದ್ದರು.