ಸಾರಾಂಶ
ಕನ್ನಡಪ್ರಭ ವಾರ್ತೆ ಮಾಗಡಿ
ತಾಲೂಕಿನ ಸೀಗೇಕುಪ್ಪೆ ಗ್ರಾಮದಲ್ಲಿ ನಮಗೆ ಸೇರಿದ ಜಾಗದಲ್ಲಿ ಹೆಚ್ಚುವರಿ ಜಾಗವನ್ನು ಗ್ರಾಮ ಪಂಚಾಯ್ತಿ ಇ-ಖಾತೆ ಮಾಡಿಸಿಕೊಂಡು ನಾವು ಮನೆಗೆ ಓಡಾಡಲು ಜಾಗ ಬಿಡದೇ ತೊಂದರೆ ನೀಡುತ್ತಿದ್ದಾರೆ ಎಂದು ಗ್ರಾಮದ ಗಂಗಾಧರಯ್ಯ ಅಳಲು ತೋಡಿಕೊಂಡರು.ಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಂಬಂಧಿಕರಾದ ಲಿಂಗಮ್ಮ ರವರಿಗೆ ಸೇರಿದ ಜಾಗದಲ್ಲಿ ಪೂರ್ವ - ಪಶ್ಚಿಮ 36 ಅಡಿ, ಉತ್ತರ - ದಕ್ಷಿಣ 18 ಅಡಿ ಜಾಗವನ್ನು ಪಂಚಾಯಿತಿಯವರು ಸರಿಯಾಗಿ ದಾಖಲಾತಿ ನೋಡದೆ ಇ-ಖಾತೆಯಲ್ಲಿ ಪೂರ್ವ- ಪಶ್ಚಿಮ 40 ಅಡಿ, ಉತ್ತರ-ದಕ್ಷಿಣ 21 ಅಡಿ ಎಂದು ಮೂಲ ಖಾತೆಯಲ್ಲಿದ್ದ ಜಾಗದ ಅಳತೆ ಬದಲು ನಕಲಿ ಖಾತೆ ಮೂಲಕ ಕೆಂಪಣ್ಣ ಎಂಬುವರಿಗೆ ಖಾತೆ ಮಾಡಿ ನಮಗೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈಗ ಕೆಂಪಣ್ಣ ಎಂಬುವವರು ನಾವು ಓಡಾಡಲು ದಾರಿ ಬಿಡದೇ ನಮ್ಮ ಮನೆಯ ಮುಂದೆಯೇ ಶೆಡ್ ಅನ್ನು ಕಟ್ಟುತ್ತಿರುವುದರಿಂದ ನಮಗೆ ಸಾಕಷ್ಟು ತೊಂದರೆಯಾಗಿದ್ದು, ಈಗಾಗಲೇ ನಾವು ತಾಲೂಕು ಪಂಚಾಯಿತಿ ಇಒ ರವರಿಗೆ ದೂರು ನೀಡಿದ್ದೇವೆ. ತಾಲೂಕು ಪಂಚಾಯಿತಿಯಿಂದ ಮತ್ತೊಮ್ಮೆ ಅಳತೆ ಮಾಡಿಸಿ ದಾಖಲಾತಿಗಳನ್ನು ಸರಿಯಾಗಿ ನೀಡಿದ ಪರಿಣಾಮ ಇ- ಖಾತೆಯನ್ನು ರದ್ದುಗೊಳಿಸಿ, ಹಿಂದೆ ಯಾವ ಅಳತೆಯಲ್ಲಿತ್ತೋ ಅದೇ ಅಳತೆಯಲ್ಲಿ ಖಾತೆ ಮಾಡುವಂತೆ ಪಂಚಾಯಿತಿ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಆದರೂ ಕೆಂಪಣ್ಣ ಎಂಬ ವ್ಯಕ್ತಿ ನಮಗೆ ತೊಂದರೆ ನೀಡುತ್ತಿದ್ದು, ಈ ಬಗ್ಗೆ ಕೋರ್ಟ್ ನಲ್ಲಿಯೂ ಕೂಡ ಮನೆ ಕಟ್ಟದಂತೆ ರದ್ದತಿ ಆದೇಶ ತಂದಿದ್ದರೂ ಕೋರ್ಟ್ ಆದೇಶವನ್ನೂ ಲೆಕ್ಕಿಸದೇ ಮನೆ ನಿರ್ಮಿಸಿ, ಪೊಲೀಸರಿಗೆ ದೂರು ನೀಡಿ ನನಗೆ ಸಾಕಷ್ಟು ತೊಂದರೆ ನೀಡುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ನನಗೆ ನ್ಯಾಯ ಕೊಡಿಸಬೇಕು, ಇಲ್ಲವಾದರೆ ಪ್ರತಿಭಟನೆಗೆ ಮುಂದಾಗ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ರೈತ ಹಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಗುಡ್ಡೇಗೌಡ ಮಾತನಾಡಿ, ಪಂಚಾಯಿತಿ ಅಧಿಕಾರಿ ಮಾಡಿದ ತಪ್ಪಿಗೆ ಎರಡು ಕುಟುಂಬಗಳು ಜಗಳವಾಡುವುದು ಬೇಡ, ನಾನು ಈ ಬಗ್ಗೆ ತಾಲೂಕು ಪಂಚಾಯಿತಿ ಇಒ ರವರ ಗಮನಕ್ಕೆ ತರಲಾಗಿದ್ದು, ಯಾರಿಗೂ ಅನ್ಯಾಯವಾಗದಂತೆ ಇಬ್ಬರಿಗೂ ನ್ಯಾಯ ಸಮ್ಮತವಾಗಿ ಸಮಸ್ಯೆಯನ್ನು ಬಗೆಹರಿಸಿ, ಕೆಂಪಣ್ಣ ಎಂಬುವರು ಇವರಿಗೆ ಓಡಾಡಲು ಜಾಗ ಬಿಟ್ಟು ಮನೆಯನ್ನು ಕಟ್ಟಿಕೊಳ್ಳಲಿ. ಅದನ್ನು ಬಿಟ್ಟು ಇಲ್ಲಿ ರಾಜಕೀಯ ಬೆರೆಸಿ ಇಬ್ಬರ ಮಧ್ಯೆ ಕಿತ್ತಾಡುವಂತೆ ಮಾಡಲಾಗುತ್ತದೆ ಎಂದರು.
ಈ ಹಿಂದೆ ಮಾಗಡಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ರವಿ ರವರ ಸಮ್ಮುಖದಲ್ಲಿ ನ್ಯಾಯ ಪಂಚಾಯಿತಿ ಮೂಲಕ ಸಮಸ್ಯೆಯನ್ನು ಬಗೆಹರಿಸಲಾಗಿತ್ತು. ಆದರೆ ಈಗ ಹೊಸದಾಗಿ ಬಂದಿರುವ ಪೊಲೀಸ್ ಅಧಿಕಾರಿ ಮತ್ತೊಮ್ಮೆ ಸಮಸ್ಯೆಯನ್ನು ದೊಡ್ಡದಾಗಿ ಮಾಡಿ ಗಂಗಾಧರಯ್ಯ ರವರ ಮೇಲೆ ಎಫ್ಐಆರ್ ಮಾಡಿಸಿ ಅವರ ಕುಟುಂಬಕ್ಕೆ ತೊಂದರೆ ನೀಡುತ್ತಿದ್ದು, ತಾಲೂಕು ಪಂಚಾಯಿತಿ ಇಒ ರವರಿಗೆ ಇನ್ನು ನಾಲ್ಕು ದಿನಗಳ ಗಡುವು ನೀಡಲಾಗಿದ್ದು, ಮೂಲ ಖಾತೆಯ ಅಳತೆಯಂತೆ ಇ- ಖಾತೆಯನ್ನು ಮಾಡಿಸುವ ಕೆಲಸ ಆಗಬೇಕು. ಇಲ್ಲವಾದರೆ ತಾಲೂಕು ಪಂಚಾಯಿತಿ ಮುಂಭಾಗದಲ್ಲಿ ನಮ್ಮ ಸಂಘಟನೆ ಮೂಲಕ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಗಂಗಾಧರಯ್ಯ ಹಾಗೂ ಕುಟುಂಬಸ್ಥರು ಭಾಗವಹಿಸಿದ್ದರು.