ಮುಸಲಧಾರ ಮಳೆಗೆ ಜಲಾವೃತಗೊಂಡ ಉಡುಪಿ

| Published : Jul 09 2024, 12:56 AM IST

ಸಾರಾಂಶ

ಜು.9ರ ವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ವಾರದ ಹಿಂದೆಯೇ ಮುನ್ಸೂಚನೆ ನೀಡಿತ್ತು. ಮೊದಲ ನಾಲ್ಕೈದು ದಿನ ಭಾರೀ ಮಳೆಗೆ ಕುಂದಾಪುರ, ಬೈಂದೂರು ತಾಲೂಕುಗಳಲ್ಲಿ ಸಾಕಷ್ಟು ಹಾನಿ ಸಂಭವಿಸಿತ್ತಾದರೂ, ಉಡುಪಿ ನಗರಕ್ಕೆ ಮಳೆ ಬಾಧಿಸಿರಲಿಲ್ಲ. ಆದರೆ ಈ ಮಳೆಗೆ ಉಡುಪಿ ಜಲಾವೃತಗೊಂಡಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಭಾನುವಾರ ರಾತ್ರಿ ಮತ್ತು ಸೋಮವಾರ ಬೆಳಗ್ಗೆ ಸುರಿದ ಮುಸಲಧಾರ ಮಳೆಗೆ ಉಡುಪಿ ಜಿಲ್ಲೆ ತತ್ತರಿಸಿಹೋಗಿದೆ. ಉಡುಪಿ ನಗರವಂತೂ ಪೂರ್ಣ ಜಲಾವೃತಗೊಂಡಿದ್ದು, ಇಲ್ಲಿನ ಜನಜೀವನ, ವ್ಯವಹಾರಗಳೆಲ್ಲವೂ ಅಸ್ತವ್ಯಸ್ತಗೊಂಡಿದೆ.

ಜು.9ರ ವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ವಾರದ ಹಿಂದೆಯೇ ಮುನ್ಸೂಚನೆ ನೀಡಿತ್ತು. ಮೊದಲ ನಾಲ್ಕೈದು ದಿನ ಭಾರೀ ಮಳೆಗೆ ಕುಂದಾಪುರ, ಬೈಂದೂರು ತಾಲೂಕುಗಳಲ್ಲಿ ಸಾಕಷ್ಟು ಹಾನಿ ಸಂಭವಿಸಿತ್ತಾದರೂ, ಉಡುಪಿ ನಗರಕ್ಕೆ ಮಳೆ ಬಾಧಿಸಿರಲಿಲ್ಲ. ಆದರೆ ಭಾನುವಾರ ರಾತ್ರಿಯಂತೂ ಎಡೆಬಿಡದೇ ಸುರಿದ ಮಳೆ ಉಡುಪಿ ನಗರದ ಅವೈಜ್ಞಾನಿಕ ನಿರ್ಮಾಣವನ್ನು ಬಯಲುಗೊಳಿಸಿದೆ.

ಉಡುಪಿಯ ಕೇಂದ್ರ ಬಿಂದು ಕೃಷ್ಣಮಠದ ಪಾರ್ಕಿಂಗ್ ಏರಿಯಾಕ್ಕೆ ಇಂದ್ರಾಣಿ ಹೊಳೆಯ ನೀರು ಉಕ್ಕಿ ತುಂಬಿದ್ದು, ಪ್ರವಾಸಿಗರು ವಾಹನ ನಿಲ್ಲಿಸಲು ಪರದಾಡುವಂತಾಯಿತು. ಇಲ್ಲಿನ ಬೈಲಕರೆ, ಮಠದಬೆಟ್ಟು, ಗುಂಡಿಬೈಲು, ಪಾಡಿಗಾರು, ಕರಂಬಳ್ಳಿ, ಶಾರದಾ ಕಲ್ಯಾಣಮಂಟಪ, ಬನ್ನಂಜೆ ಪ್ರದೇಶಗಳಲ್ಲಿ ನೂರಾರು ಮನೆಗಳು ಜಲಾವೃತಗೊಂಡಿದ್ದವು.

ಅಗ್ನಿಶಾಮಕ ದಳದ ಸಿಬ್ಬಂದಿ, ದೋಣಿಗಳೊಂದಿಗೆ ರಾತ್ರಿಯೇ ಇಲ್ಲಿ ಬೀಡು ಬಿಟ್ಟಿದ್ದು, ಮಠದಬೆಟ್ಟುವಿನ ಹತ್ತಾರು ಅಸಹಾಯಕ ಮನೆಗಳ ಸದಸ್ಯರನ್ನು, ಹಸು - ಜಾನುವಾರು ಸ್ಥಳಾಂತರಗೊಳಿಸಿ, ಸಮೀಪದ ಹೊಟೇಲ್‌ನಲ್ಲಿ ತಂಗಲು ವ್ಯವಸ್ಥೆ ಮಾಡಿದರು.

ಪಾಡಿಗಾರು ಪ್ರದೇಶದ ಸುಮಾರು 30 ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಜನರು ರಾತ್ರಿಯಿಡೀ ಆತಂಕದಿಂದ ಕಳೆಯುವಂತಾಯಿತು. ಇಲ್ಲಿನ ಗುಂಡಿಬೈಲಿನ ರಾಜಕಾಲುವೆಯಲ್ಲಿ ನೀರು ಉಕ್ಕಿ ರಸ್ತೆಗೆ ಚಾಚಿದ್ದು, ಇಲ್ಲಿನ ನಾಗಬ್ರಹ್ಮಸ್ಥಾನ ದೇವಾಲಯಕ್ಕೂ ನೀರು ನುಗ್ಗಿತ್ತು.

ಉಡುಪಿಯ ರಥಬೀದಿಗೆ ತೆರಳುವ ಬಡಗುಪೇಟೆ ರಸ್ತೆಯಲ್ಲಿ ಮೊಣಕಾಲ ವರೆಗೆ ನೀರು ನಿಂತಿದ್ದು, ಅಕ್ಕಪಕ್ಕದ ಹತ್ತಿಪ್ಪತ್ತಕ್ಕೂ ಅಧಿಕ ದಿನಸಿ, ಫ್ಯಾನ್ಸಿ, ಎಣ್ಣೆಗಾಣ, ಹೊಟೇಲ್‌ಗಳೊಳಗೆ ನೀರು ನುಗ್ಗಿದೆ. ದಿನಸಿ ಅಂಗಡಿಗೆ ನೀರು ನುಗ್ಗಿದ್ದರಿಂದ ದಿನಬಳಕೆಯ ವಸ್ತುಗಳು ಹಾಳಾಗಿವೆ.----ಗೊಂದಲಕ್ಕೀಡಾದ ವಿದ್ಯಾರ್ಥಿಗಳು

ಭಾರೀ ಮಳೆಯ ಸಾಧ್ಯತೆ ಇದ್ದರೂ ಜಿಲ್ಲಾಡಳಿತ ಸೋಮವಾರ ಶಾಲಾ ಕಾಲೇಜುಗಳಿಗೆ ರಜೆ ನೀಡಿರಲಿಲ್ಲ. ಸೋಮವಾರ ಮುಂಜಾನೆ ಧಾರಾಕಾರ ಮಳೆಯಾಗುತ್ತಿದ್ದುದರಿಂದ ಹೆತ್ತವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಆತಂಕ ಪಟ್ಟು ಗೊಂದಲಕ್ಕೀಡಾಗಿದ್ದರು. ರಜೆ ನೀಡದ ಜಿಲ್ಲಾಡಳಿತದ ಬಗ್ಗೆ ಸಾಕಷ್ಟು ಮಂದಿ ಹೆತ್ತವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅಗತ್ಯವಿರುವ ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ನೀಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಆದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅದನ್ನು ಜಾರಿ ಮಾಡಿಲ್ಲ. ಕೆಲವು ಶಾಲೆಗಳಲ್ಲಿ ತಾವೇ ನಿರ್ಧಾರ ತೆಗೆದುಕೊಂಡು ರಜೆಯನ್ನು ಘೋಷಿಸಿದ್ದವು.