ಸಾರಾಂಶ
ಭೂಮಿಪೂಜೆ । ಜಾವಗಲ್‌ನ ನರಸಿಂಹಸ್ವಾಮಿ ದೇಗುಲ ಕಾಮಗಾರಿ
ಕನ್ನಡಪ್ರಭ ವಾರ್ತೆ ಅರಸೀಕೆರೆನಮ್ಮ ಪೂರ್ವಜರು ಸಾವಿರ ವರ್ಷಗಳಿಂದ ಉಳಿಸಿಕೊಂಡು ಬಂದಿರುವ ಐತಿಹಾಸಿಕ ಹಿನ್ನೆಲೆಯ ಇಂತಹ ಶಿಲ್ಪಕಲಾ ದೇವಾಲಯಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವ ಮತ್ತು ಸಂರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರದು ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ.ಸುರೇಶ್ (ಹುಲ್ಲಳ್ಳಿ) ತಿಳಿಸಿದರು.
ತಾಲೂಕಿನ ಜಾವಗಲ್ ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಸಂರಕ್ಷಣಾ ಕಾಮಗಾರಿಗೆ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ (ಪ್ರವಾಸೋದ್ಯಮ ಇಲಾಖೆ) ಯಿಂದ ಮಂಜೂರಾದ 70 ಲಕ್ಷ ರು. ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಹೊಯ್ಸಳರು ಆಳಿದ ನಾಡಿನಲ್ಲಿ ನಾನು ಶಾಸಕನಾಗಿ ಆಯ್ಕೆಯಾಗಿ ಜನಸೇವೆ ಮಾಡುತ್ತಿರುವುದು ನನ್ನ ಪೂರ್ವ ಜನ್ಮದ ಪುಣ್ಯವೇ ಸರಿ. ನಾನು ಪ್ರತಿನಿಧಿಸುತ್ತಿರುವ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಹೊಯ್ಸಳರ ಕಾಲದ ಶಿಲ್ಪಕಲಾ ದೇಗುಲಗಳಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದ್ದು, ಅವುಗಳನ್ನು ಅಭಿವೃದ್ಧಿಪಡಿಸಿ ಸಂರಕ್ಷಣೆ ಮಾಡಬೇಕೆಂಬ ಆಶಯದೊಂದಿಗೆ ಪ್ರವಾಸೋದ್ಯಮ ಸಚಿವರನ್ನು ಭೇಟಿ ಮಾಡಿ, ಜಾವಗಲ್ ದೇವಾಲಯ ಸೇರಿದಂತೆ ಒಟ್ಟು 11 ಐತಿಹಾಸಿಕ ದೇವಾಲಯಗಳ ಅಭಿವೃದ್ದಿಗೆ ಪ್ರತಿ ದೇವಾಲಯಕ್ಕೆ 1 ಕೋಟಿ ರು. ಅನುಮಾನವನ್ನು ನೀಡುವಂತೆ ಮನವಿ ಮಾಡಲಾಗಿದೆ. ಮೊದಲ ಹಂತದಲ್ಲಿ ಜಾವಗಲ್ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯಕ್ಕೆ ಹಣ ಮಂಜೂರಾಗಿದ್ದು, ಉಳಿದ ದೇವಾಲಯಗಳ ಅಭಿವೃದ್ಧಿಗೂ ಶೀಘ್ರದಲ್ಲಿಯೇ ಹಣ ಬಿಡುಗಡೆ ಮಾಡಿಸಲಾಗುವುದು ಎಂದು ಹೇಳಿದರು.
ದೇವಾಲಯಕ್ಕೆ ಪ್ರತಿದಿನ ನೂರಾರು ಭಕ್ತರು, ಪ್ರವಾಸಿಗರು ವೀಕ್ಷಣೆಗೆ ಆಗಮಿಸುವುದರಿಂದ ಬಂದವರು ದೇವಾಲಯದ ಸುತ್ತಮತ್ತಲ ವಾತಾವರಣವನ್ನು ನೋಡಿ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕು ಎಂದರೆ ಸುತ್ತಮುತ್ತಲ ಸಾರ್ವಜನಿಕರು ದೇವಾಲಯದ ಅಕ್ಕಪಕ್ಕ ಯಾವುದೇ ಕಸವನ್ನಾಗಲೀ, ತ್ಯಾಜ್ಯವನ್ನಾಗಲೀ ಹಾಕದೇ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಗ್ರಾಮದ ಸಾರ್ವಜನಿಕರು ಇಂತಹ ವಿಷಯದಲ್ಲಿ ಹೆಚ್ಚಿನ ಗಮನಹರಿಸಬೇಕು. ಭಾರತೀಯ ಸಂಸ್ಕೃತಿ ಇಡೀ ಜಗತ್ತಿಗೆ ಶ್ರೇಷ್ಠ ಸಂಸ್ಕೃತಿಯಾಗಿದ್ದು, ಯುವಜನತೆಯೂ ಕೂಡಾ ನಮ್ಮ ಸಂಸ್ಕ್ರತಿ, ಪರಂಪರೆಯ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಪೋಷಕರು ತಮ್ಮ ಮಕ್ಕಳಿಗೆ ಇಂತಹ ಶಿಲ್ಪಕಲಾ ದೇವಾಲಯಗಳನ್ನು ತೋರಿಸಿ ಈ ದೇವಾಲಯಗಳ ಹಿರಿಮೆಯನ್ನು ತಿಳಿಸಬೇಕು. ಇಂತಹ ದೇವಾಲಯಗಳ ಬಗ್ಗೆ ಹೆಚ್ಚಾಗಿ ಆಧ್ಯಯನ ಮಾಡಬೇಕು ಎಂದು ತಿಳಿಸಬೇಕು ಎಂದು ಹೇಳಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಮಿತ್ರಾ ಧರ್ಮೇಗೌಡ, ಉಪ ತಹಸೀಲ್ದಾರ್ ವೆಂಕಟೇಶ್, ಪುರಾತತ್ವ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪುಟ್ಡಸ್ವಾಮಿ, ಎಇ ಸತೀಶ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ರವಿ, ಉಪಾಧ್ಯಕ್ಷರಾದ ಶಿವಣ್ಣ, ಭಾಗ್ಯ ರವಿಶಂಕರ್, ಶ್ರೀಕಂಠಯ್ಯ, ರಂಗಸ್ವಾಮಿ, ಮುಖಂಡರಾದ ಸಿದ್ದಪ್ಪಶೆಟ್ಡಿ, ಟೈಲರ್ ಪಾಪಣ್ಣ, ಎಲ್.ಆರ್.ರಮೇಶ್, ಕೋಳಗುಂದ ರೇಣುಕಾಪ್ರಸಾದ್, ಕೆರೆಕೋಡಿಹಳ್ಳಿ ಯತೀಶ್, ಶ್ರೀವತ್ಸ ಇದ್ದರು.